ಕನ್ನಡ

ಪ್ರ. ಸಭೆಯ ಹೊರಗೆ ವಿವಾಹ

ಪ್ರ. ನಾನು ಒಬ್ಬ ಯುವ ಕಥೋಲಿಕ ಪುರುಷ. ಕಥೋಲಿಕಳಲ್ಲದ ಒಬ್ಬ ಯುವತಿಯನ್ನು ಮದುವೆಯಾಗಲು ಬಯಸುತ್ತೇನೆ. ಅವಳ ಹೆತ್ತವರು ತಮ್ಮ ಒಪ್ಪಿಗೆ ಬೇಕಾದರೆ ಅವರ ದೇವಾಲಯದಲ್ಲೇ ನಾನು ಮದುವೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ನಾನು ಅವರ ದೇವಾಲಯದಲ್ಲಿ ಮದುವೆಯಾಗಿ, ನಂತರ ಅವಳು ಜ್ಞಾನಸ್ನಾನ, ಪರಮಪ್ರಸಾದ ಮತ್ತು ಸ್ಥೈರ್ಯಲೇಪನ ಸಂಸ್ಕಾರಗಳನ್ನು ಸ್ವೀಕರಿಸಿದಾಗ ಮತ್ತೊಮ್ಮೆ ಮದುವೆಯಾಗಲು ಕಥೋಲಿಕ ದೇವಾಲಯಕ್ಕೆ ಬರುವುದು ಸ್ವೀಕಾರಾರ್ಹವೇ? ಈ ಯುವತಿ ಕಥೋಲಿಕ ಬೋಧನೆಯನ್ನು ಅನುಸರಿಸುವುದರಲ್ಲಿ ನನ್ನೊಂದಿಗೆ ಬರಲು ಸಿದ್ಧಳಿದ್ದಾಳೆ, ಆದರೆ ತನ್ನ ಹೆತ್ತವರ ಮನಸ್ಸನ್ನು ನೋಯಿಸಲು ಬಯಸುವುದಿಲ್ಲ. ದಯವಿಟ್ಟು ಸಲಹೆ ನೀಡಿ.

ಉ. ನಿಮ್ಮ ಉದ್ದೇಶಗಳು ಸರಿಯಾದ ದಿಕ್ಕಿನಲ್ಲಿವೆ ಎಂಬುದು ಸ್ಪಷ್ಟವಾಗಿದೆ; ನಿಮ್ಮ ಆಲೋಚನೆಯನ್ನು ಇನ್ನಷ್ಟು ಸರಿಪಡಿಸಿಕೊಳ್ಳಲು ಕೆಲವು ಸಲಹೆಗಳು ಇಲ್ಲಿವೆ.

ಮೊದಲನೆಯದಾಗಿ, ನಿಮ್ಮ ವಿವಾಹವು ಆಶೀರ್ವದಿಸಲ್ಪಡಬೇಕೆಂದೂ ಸರಿಯಾದುದನ್ನೇ ಮಾಡಬೇಕೆಂದೂ ನೀವು ಬಯಸುತ್ತೀರಿ ಎಂಬುದು ಸ್ಪಷ್ಟವಾಗಿದೆ.  ಕಥೋಲಿಕರಿಗೆ, ವಿವಾಹದ ಪ್ರತಿಜ್ಞೆಗಳನ್ನು ಕಥೋಲಿಕ ಧರ್ಮಸಭೆಯಲ್ಲಿ ಸ್ವೀಕರಿಸುವುದು ಅತ್ಯಗತ್ಯ.  ಆದರೆ ಇದನ್ನು ವಿವಿಧ ರೀತಿಗಳಲ್ಲಿ ಮಾಡಬಹುದು.  ಕಥೋಲಿಕ ದೇವಾಲಯದಲ್ಲಿ ಒಬ್ಬ ಯಾಜಕ ಅಥವಾ ಧರ್ಮಸೇವಕನ ಸಮ್ಮುಖದಲ್ಲಿ ನಿಮ್ಮ ವಿವಾಹವನ್ನು ನೆರವೇರಿಸುವುದು ಅತ್ಯುತ್ತಮ ಮಾರ್ಗವಾಗಿದೆ.  ಆದರೂ, ಕಥೋಲಿಕ ಧರ್ಮಸಭೆಯ ಅನುಮೋದನೆಯೊಂದಿಗೆ ಮತ್ತೊಂದು ದೇವಾಲಯದಲ್ಲಿ (ಕಥೋಲಿಕವಲ್ಲದ ದೇವಾಲಯದಲ್ಲಿ) ನಿಮ್ಮ ವಿವಾಹವನ್ನು ನೆರವೇರಿಸಲು ಅನುಮತಿಯಿದೆ.  ಈ ಸಂದರ್ಭದಲ್ಲಿಯೂ ನೀವು ಯಾಜಕರನ್ನು ಭೇಟಿಯಾಗಿ, ವಿವಾಹದ ಎಲ್ಲ ಸಾಮಾನ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.  ನಂತರ ಯಾಜಕರು, “ಧರ್ಮಸಭೆಯ ಕಾನೂನು ನಿಗದಿಪಡಿಸಿದ ವಿಧಿ” ಎಂದು ಕರೆಯಲ್ಪಡುವುದರಿಂದ ನಿಮಗೆ ವಿನಾಯಿತಿ ನೀಡುವಂತೆ ಧರ್ಮಾಧ್ಯಕ್ಷರನ್ನು ಕೋರುತ್ತಾರೆ.  ವಿಶೇಷ ವಿನಾಯಿತಿಯನ್ನು ನೀಡಲಾಗುತ್ತದೆ ಮತ್ತು ನಿಮ್ಮ ವಿವಾಹವನ್ನು ನಮ್ಮ ಧರ್ಮಸಭೆ ಸಂಪೂರ್ಣವಾಗಿ ಅಂಗೀಕರಿಸುತ್ತದೆ.  ಹೀಗಾಗಿ, ಮೊದಲು ನಿಮ್ಮ ಧರ್ಮಕೇಂದ್ರದ ಯಾಜಕರೊಂದಿಗೆ ಈ ಕುರಿತು ಮಾತನಾಡಿ, ಇದು ಸಾಧ್ಯವೇ ಎಂದು ತಿಳಿದುಕೊಳ್ಳಿ.

ಹೀಗೆಂದ ಮಾತ್ರಕ್ಕೆ, ಮೊದಲು ಕಥೋಲಿಕವಲ್ಲದ ದೇವಾಲಯದಲ್ಲಿ (ಧರ್ಮಸಭೆಯ ಕಾನೂನು ನಿಗದಿಪಡಿಸಿದ ವಿಧಿಯಿಂದ ವಿನಾಯಿತಿ ಪಡೆಯದೆ) ಮದುವೆಯಾಗಿ, ನಂತರ ಮತ್ತೆ ಕಥೋಲಿಕ ದೇವಾಲಯದಲ್ಲಿ ಮದುವೆಯಾಗುವುದು ಒಳ್ಳೆಯದಲ್ಲ.  ಹೀಗೆ ನಡೆಯುವುದುಂಟಾದರೂ, ಈ ರೀತಿಯಾಗಿ ಯೋಜಿಸದಿರುವುದೇ ಉತ್ತಮ.  ಬೇರೆ ಯಾವುದಾದರೂ ವಿವಾಹ ವಿಧಿಯ ಮೂಲಕ ಈಗಾಗಲೇ ಕಾನೂನಾತ್ಮಕವಾಗಿ ಬದ್ಧವಾಗಿರುವ ನಿಮ್ಮ ವಿವಾಹವನ್ನು ಕಥೋಲಿಕ ಧರ್ಮಸಭೆಯಲ್ಲಿ ಮಾನ್ಯಗೊಳಿಸುವುದಕ್ಕಾಗಿಯೇ, ನಂತರ ಅದನ್ನು ಧರ್ಮಸಭೆಯಲ್ಲಿ ಸ್ವೀಕರಿಸಲಾಗುತ್ತದೆ.  ಧರ್ಮಸಭೆಯ ಹೊರಗೆ ಮದುವೆಯಾದವರು ಹೀಗೆ ಮಾಡಬೇಕೆಂದು ಬಲವಾಗಿ ಶಿಫಾರಸು ಮಾಡಲಾಗುತ್ತದಾದರೂ, ಮೊದಲಿನಿಂದಲೇ ಈ ರೀತಿ ಯೋಜಿಸುವುದು ಒಳ್ಳೆಯದಲ್ಲ. ನೀವು ನಿಜವಾಗಿ ಯಾವಾಗ ವಿವಾಹಿತರಾದಿರಿ ಎಂಬುದರ ಬಗ್ಗೆ ಇದು ಗೊಂದಲವನ್ನುಂಟುಮಾಡುತ್ತದೆ.  ಎರಡು ವಿವಾಹ ಸಮಾರಂಭಗಳನ್ನು ನಡೆಸುವುದು ಒಳ್ಳೆಯದಲ್ಲ.

ಅವಳ ತಂದೆತಾಯಿಯ ಕುರಿತ ಕಾಳಜಿ ಸಮಂಜಸವಾದದ್ದೇ.  ಅವರ ಆಶೀರ್ವಾದದೊಂದಿಗೆ ನಿಮ್ಮ ವೈವಾಹಿಕ ಜೀವನವನ್ನು ಆರಂಭಿಸುವಂತೆ, ಅವರನ್ನು ಗೌರವಿಸುವುದು ಮತ್ತು ಅವರಿಗೆ ಮಾನ ಕೊಡುವುದು ಮುಖ್ಯ.  ಹಾಗಿದ್ದರೂ, ನಿಮ್ಮ ವಿಶ್ವಾಸಕ್ಕಿಂತ ಅವರಿಗೆ ಹೆಚ್ಚಿನ ಆದ್ಯತೆ ನೀಡದಿರುವುದು ಮುಖ್ಯ.  ಮೇಲಿನ ಮೊದಲ ಸಲಹೆಯನ್ನು ಕಾರ್ಯರೂಪಕ್ಕೆ ತರಲು ನಿಮಗೆ ಸಾಧ್ಯವಾದರೆ, ಎಲ್ಲವೂ ಸುಸೂತ್ರವಾಗಿ ನಡೆಯಬೇಕು.  ಆದರೆ, ಧರ್ಮಸಭೆಯ ನಿಯಮಾನುಸಾರ ವಿವಾಹವಿಧಿಯಿಂದ ವಿನಾಯಿತಿ ಪಡೆಯಲು ನಿಮಗೆ ಸಾಧ್ಯವಾಗದಿದ್ದರೆ, ತೊಂದರೆಗಳು ಉಂಟಾದರೂ ಕತೋಲಿಕ ದೇವಾಲಯದಲ್ಲೇ ನಿಮ್ಮ ವಿವಾಹವನ್ನು ನೆರವೇರಿಸಲು ಪ್ರಯತ್ನಿಸುವುದು ಉತ್ತಮ.  ಮತ್ತೊಮ್ಮೆ ಹೇಳುವುದಾದರೆ, ಈ ನಿರ್ಧಾರದಲ್ಲಿ ನಿಮ್ಮ ಕತೋಲಿಕ ವಿಶ್ವಾಸವೇ ಅತ್ಯಂತ ಮುಖ್ಯವಾದ ಅಂಶ; ಆರಂಭದಿಂದಲೇ ನಿಮ್ಮ ವಿಶ್ವಾಸದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಸಮಸ್ಯೆಗೆ ಕಾರಣವಾಗುತ್ತದೆ.  ಮದುವೆಯು ಬಹುಮಟ್ಟಿಗೆ ಒಂದು ಕುಟುಂಬದ ಸಮಾರಂಭವಾಗಿರುವುದರಿಂದ ಹೀಗೆ ಮಾಡುವುದು ಕಷ್ಟವೇ ಸರಿ; ಆದರೆ ನಿಮ್ಮ ವಿಶ್ವಾಸವನ್ನು ಎರಡನೆಯ ಸ್ಥಾನಕ್ಕೆ ತಳ್ಳಬಾರದು.

ಎಲ್ಲಕ್ಕಿಂತ ಮುಖ್ಯವಾಗಿ, ಈ ವಿಷಯದ ಬಗ್ಗೆ ಮನಃಪೂರ್ವಕವಾಗಿ ಪ್ರಾರ್ಥಿಸಿ ಮತ್ತು ಇದನ್ನು ಚರ್ಚಿಸಲು ಸಾಕಷ್ಟು ಸಮಯವನ್ನು ಮೀಸಲಿಡಿ.  ತಾಳ್ಮೆಯಿಂದಿರಿ ಮತ್ತು ಸರಿಯಾದ ರೀತಿಯಲ್ಲಿ ಇದನ್ನು ನೆರವೇರಿಸುವುದರ ಮೇಲೆಯೇ ನಿಮ್ಮ ಗಮನವಿರಲಿ.  ಹಾಗೆ ಮಾಡಿದ್ದಕ್ಕಾಗಿ ನೀವು ಕೃತಜ್ಞರಾಗಿರುವಿರಿ!


ಇನ್ನಷ್ಟು ಕತೋಲಿಕ ಪ್ರಶ್ನೋತ್ತರಗಳು

ಈ ಪುಟವನ್ನು ಹಂಚಿಕೊಳ್ಳಿ: