ಕನ್ನಡ

ನನ್ನ ಕಥೋಲಿಕ ವಿಶ್ವಾಸ! ಮೊದಲ ಅಧಿವೇಶನ

ವಿಶ್ವಾಸವನ್ನು ಸ್ವೀಕರಿಸುವುದು

ಅಧಿವೇಶನವನ್ನು ಡೌನ್‌ಲೋಡ್ ಮಾಡಿ: PDF – ಸಂಪಾದಿಸಬಹುದಾದ ಆವೃತ್ತಿ

ಸಭೆಗೆ ಮುಂಚಿನ ಸಿದ್ಧತೆ
ಈ ಸಭೆಗೆ ಮುಂಚಿತವಾಗಿ My Catholic Faith! ಪುಸ್ತಕದ ಪೀಠಿಕೆ ಮತ್ತು ಒಂದನೇ ಅಧ್ಯಾಯವನ್ನು ಓದುವಂತೆ ಭಾಗವಹಿಸುವವರಿಗೆ ತಿಳಿಸಬೇಕು.  ಮೊದಲ ಸಭೆಗಾಗಿ ನಾಯಕರು ಸ್ವಲ್ಪ ಲಘು ಉಪಾಹಾರದ ವ್ಯವಸ್ಥೆ ಮಾಡಿರಬೇಕು.

5 ನಿಮಿಷಗಳು – ಒಟ್ಟುಗೂಡುವುದು
ಈ ಆರಂಭಿಕ ಸಮಯವು ಎಲ್ಲರೂ ಬಂದು ಒಬ್ಬರನ್ನೊಬ್ಬರು ಭೇಟಿಯಾಗಲು ನೀಡುವ ಸರಳ ಅವಕಾಶವಾಗಿದೆ.

ಈ ಆರಂಭಿಕ ಒಟ್ಟುಗೂಡುವಿಕೆಯ ಸಮಯದಲ್ಲಿ, ಭಾಗವಹಿಸುವವರ ಎಲ್ಲ ಸಂಪರ್ಕ ಮಾಹಿತಿಯೂ ತಮ್ಮ ಬಳಿ ಇರುವಂತೆ ನಾಯಕರು ಖಚಿತಪಡಿಸಿಕೊಳ್ಳಬೇಕು.  ಹೆಸರುಪಟ್ಟಿಗಳು ಉಪಯುಕ್ತವಾಗಬಹುದು.

5 ನಿಮಿಷಗಳು – ಪರಿಚಯಗಳು
ಆತಿಥೇಯರಾಗಿ ಎಲ್ಲರನ್ನೂ ಒಟ್ಟುಗೂಡಿಸಿ ಸ್ವಾಗತಿಸಿ.  ನಿಮ್ಮ ಕುರಿತು ಸ್ವಲ್ಪ ಹಂಚಿಕೊಳ್ಳಿ; ನಂತರ ಪ್ರತಿಯೊಬ್ಬರೂ ಸರದಿಯಾಗಿ ತಮ್ಮನ್ನು ಸಂಕ್ಷಿಪ್ತವಾಗಿ ಪರಿಚಯಿಸಿಕೊಳ್ಳುವಂತೆ ಕೇಳಿ.  

5 ನಿಮಿಷಗಳು – ಆರಂಭದ ಪ್ರಾರ್ಥನೆ ಮತ್ತು ಪವಿತ್ರ ಗ್ರಂಥ ವಾಚನ
ನಾಯಕರು ಶಿಲುಬೆಯ ಗುರುತಿನೊಂದಿಗೆ ಆರಂಭಿಸುವಾಗ ಎಲ್ಲರೂ ಶಾಂತವಾಗಿ ಕುಳಿತುಕೊಳ್ಳುತ್ತಾರೆ. ನಂತರ ನಾಯಕರು ಈ ಕೆಳಗಿನಂತೆ ಸ್ವಲ್ಪ ಸಮಯ ಮೌನವಾಗಿರಲು ಆಹ್ವಾನಿಸುತ್ತಾರೆ:

ನಮ್ಮ ಮಹಿಮಾಮಯ ಕಥೋಲಿಕ ವಿಶ್ವಾಸದ ಈ ಅಧ್ಯಯನವನ್ನು ಒಟ್ಟಾಗಿ ಆರಂಭಿಸುತ್ತಿರುವಾಗ ನಾವು ಶಾಂತಚಿತ್ತರಾಗೋಣ. “ಪ್ರಭುವೇ, ನಾವು ಇಲ್ಲಿ ಒಂದು ನಿಮಿಷ ಮೌನವಾಗಿ ಕುಳಿತಿರುವಾಗ, ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಸ್ವಂತ ಪ್ರಶ್ನೆಗಳನ್ನು, ಚಿಂತೆಗಳನ್ನು, ಭಯಗಳನ್ನು ಮತ್ತು ಸಂತೋಷಗಳನ್ನು ನಿಮ್ಮ ಬಳಿಗೆ ತರಲು ನಮಗೆ ನೆರವಾಗಿರಿ. ಈ ಮೌನದ ಕ್ಷಣದಲ್ಲಿ ನಮ್ಮೊಡನೆ ಮಾತನಾಡುವ, ನಮಗೆ ಮಾರ್ಗದರ್ಶನ ನೀಡುವ ಮತ್ತು ಇನ್ನಷ್ಟು ಆಳವಾದ ವಿಶ್ವಾಸಕ್ಕೆ ನಮ್ಮನ್ನು ಕರೆಯುವ ನಿಮ್ಮ ಮೃದು ಸ್ವರಕ್ಕೆ ಗಮನಕೊಡಲು ನಮಗೆ ನೆರವಾಗಿರಿ.”

ಪ್ರತಿಯೊಬ್ಬರೂ ತಮ್ಮ ನಿರ್ದಿಷ್ಟ ಕಾಳಜಿ ಮತ್ತು ಚಿಂತೆಗಳ ಕುರಿತು ನಮ್ಮ ಪ್ರಭುವಿನೊಂದಿಗೆ ಮಾತನಾಡಲು ಸಾಧ್ಯವಾಗುವಂತೆ, ಕಣ್ಣುಗಳನ್ನು ಮುಚ್ಚಿಕೊಂಡು ಒಂದು ನಿಮಿಷ ಮೌನವಾಗಿರಿ.

ನಾಯಕರು ಈ ಕೆಳಗಿನ ಆಹ್ವಾನವನ್ನು ಓದುತ್ತಾರೆ:

ದೇವರ ವಾಕ್ಯವನ್ನು ಮನನ ಮಾಡೋಣ.  ಈ ಕೆಳಗಿನ ಪ್ರಶ್ನೆಗಳೊಂದಿಗೆ ನಮ್ಮ ಸ್ವಂತ ವಿಶ್ವಾಸದ ಪಯಣವನ್ನು ಕುರಿತು ಚಿಂತಿಸೋಣ: ನಾನು ವಿಶ್ವಾಸಿಸುತ್ತೇನೆಯೇ?  ನನ್ನ ವಿಶ್ವಾಸ ಎಷ್ಟು ಆಳವಾಗಿದೆ?  ದೇವರು ನನ್ನೊಂದಿಗೆ ಮಾತನಾಡಲು ನಾನು ಮನಸ್ಸನ್ನು ತೆರೆದಿದ್ದೇನೆಯೇ?  ದೇವರ ವಾಕ್ಯಕ್ಕೆ ನಾನು ಮನಸ್ಸನ್ನು ತೆರೆದು, ದೇವರ ಸತ್ಯವು ನನ್ನೊಳಗೆ ಇನ್ನೂ ಆಳವಾಗಿ ಬೇರೂರಲು ಅವಕಾಶ ನೀಡಲು ಸಿದ್ಧನಿದ್ದೇನೆಯೇ?  ಈ ಹೊಸ ವಿಶ್ವಾಸವು ನನ್ನ ಬದುಕನ್ನು ಬದಲಿಸಲು ಅವಕಾಶ ನೀಡಲು ನಾನು ಸಿದ್ಧನಿದ್ದೇನೆಯೇ?

ಅಧಿವೇಶನದ ನಾಯಕರು ಪವಿತ್ರ ಗ್ರಂಥದ ಈ ಕೆಳಗಿನ ಭಾಗವನ್ನು ಓದುತ್ತಾರೆ: 

ರೋಮಾಪುರದವರಿಗೆ 10:9-17: ನೀನು ಯೇಸುವೇ ಪ್ರಭು ಎಂದು ನಿನ್ನ ಬಾಯಿಂದ ಒಪ್ಪಿಕೊಂಡು, ದೇವರು ಅವರನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ನಿನ್ನ ಹೃದಯದಲ್ಲಿ ವಿಶ್ವಾಸಿಸಿದರೆ, ನೀನು ರಕ್ಷಣೆ ಹೊಂದುವೆ. ಏಕೆಂದರೆ ಒಬ್ಬನು ಹೃದಯದಿಂದ ವಿಶ್ವಾಸಿಸಿ ನೀತಿವಂತನಾಗುತ್ತಾನೆ; ಬಾಯಿಂದ ಒಪ್ಪಿಕೊಂಡು ರಕ್ಷಣೆ ಹೊಂದುತ್ತಾನೆ. ಪವಿತ್ರ ಗ್ರಂಥವು, “ಅವರಲ್ಲಿ ವಿಶ್ವಾಸವಿಡುವ ಯಾರೂ ನಾಚಿಕೆಗೆ ಗುರಿಯಾಗುವುದಿಲ್ಲ” ಎಂದು ಹೇಳುತ್ತದೆ. ಯೆಹೂದ್ಯನಿಗೂ ಗ್ರೀಕನಿಗೂ ಭೇದವಿಲ್ಲ; ಎಲ್ಲರಿಗೂ ಒಬ್ಬರೇ ಪ್ರಭು. ತಮ್ಮನ್ನು ಕರೆಯುವ ಎಲ್ಲರನ್ನೂ ಅವರು ಸಮೃದ್ಧಗೊಳಿಸುತ್ತಾರೆ. ಏಕೆಂದರೆ “ಪ್ರಭುವಿನ ನಾಮವನ್ನು ಕರೆಯುವ ಪ್ರತಿಯೊಬ್ಬನೂ ರಕ್ಷಣೆ ಹೊಂದುವನು.” ಆದರೆ ತಾವು ವಿಶ್ವಾಸವಿಡದಿರುವವರನ್ನು ಅವರು ಕರೆಯುವುದು ಹೇಗೆ? ತಾವು ಯಾರ ವಿಷಯವಾಗಿ ಕೇಳಿಲ್ಲವೋ ಅವರಲ್ಲಿ ವಿಶ್ವಾಸವಿಡುವುದು ಹೇಗೆ? ಬೋಧಿಸುವವರಿಲ್ಲದೆ ಅವರು ಕೇಳುವುದು ಹೇಗೆ? ಕಳುಹಿಸಲ್ಪಡದೆ ಜನರು ಬೋಧಿಸುವುದು ಹೇಗೆ? “ಶುಭಸಂದೇಶವನ್ನು ತರುವವರ ಪಾದಗಳು ಎಷ್ಟೋ ಸುಂದರವಾಗಿವೆ!” ಎಂದು ಬರೆಯಲಾಗಿದೆ. ಆದರೆ ಎಲ್ಲರೂ ಶುಭಸಂದೇಶಕ್ಕೆ ಕಿವಿಗೊಡಲಿಲ್ಲ; ಏಕೆಂದರೆ ಯೆಶಾಯನು, “ಪ್ರಭುವೇ, ನಮ್ಮಿಂದ ಕೇಳಿದ ಸಂದೇಶವನ್ನು ಯಾರು ವಿಶ್ವಾಸಿಸಿದ್ದಾರೆ?” ಎಂದು ಹೇಳುತ್ತಾನೆ. ಹೀಗೆ ವಿಶ್ವಾಸವು ಕೇಳುವುದರಿಂದ ಬರುತ್ತದೆ; ಕೇಳುವ ಸಂದೇಶವು ಕ್ರಿಸ್ತರ ವಾಕ್ಯದ ಮೂಲಕ ಬರುತ್ತದೆ.

ನಂತರ ನಾಯಕರು ಹೀಗೆ ಹೇಳುತ್ತಾರೆ: ಈ ಮಾತುಗಳನ್ನು ಮನನ ಮಾಡಲು ಒಂದು ಕ್ಷಣ ಮೌನವಾಗಿರೋಣ. (ಒಂದು ನಿಮಿಷ ಮೌನ). ಎಲ್ಲರೂ ಅಪೊಸ್ತಲರ ವಿಶ್ವಾಸಪ್ರಮಾಣವನ್ನು ಹೇಳುವುದರೊಂದಿಗೆ ಪ್ರಾರ್ಥನೆಯ ಸಮಯವು ಮುಕ್ತಾಯಗೊಳ್ಳುತ್ತದೆ:

ಪರಲೋಕ ಮತ್ತು ಭೂಲೋಕವನ್ನು ಸೃಷ್ಟಿಸಿದ ಸರ್ವಶಕ್ತ ಪಿತನಾದ ದೇವರಲ್ಲಿ ನಾನು ವಿಶ್ವಾಸವಿಡುತ್ತೇನೆ; ಅವರ ಏಕೈಕ ಪುತ್ರರೂ ನಮ್ಮ ಪ್ರಭುವೂ ಆದ ಯೇಸು ಕ್ರಿಸ್ತರಲ್ಲಿ ವಿಶ್ವಾಸವಿಡುತ್ತೇನೆ: ಅವರು ಪವಿತ್ರಾತ್ಮರಿಂದ ಗರ್ಭಧರಿಸಲ್ಪಟ್ಟು, ಕನ್ಯಾಮರಿಯಮ್ಮನವರಿಂದ ಜನಿಸಿದರು; ಪೊಂತಿಯುಸ್ ಪಿಲಾತನ ಆಳ್ವಿಕೆಯಲ್ಲಿ ಯಾತನೆಯನ್ನನುಭವಿಸಿ, ಶಿಲುಬೆಗೇರಿಸಲ್ಪಟ್ಟು, ಮೃತರಾಗಿ ಸಮಾಧಿ ಮಾಡಲ್ಪಟ್ಟರು. ಅವರು ಪಾತಾಳಕ್ಕೆ ಇಳಿದರು; ಮೂರನೆಯ ದಿನ ಮೃತರ ಮಧ್ಯದಿಂದ ಪುನರುತ್ಥಾನರಾದರು; ಸ್ವರ್ಗಕ್ಕೆ ಏರಿ, ಸರ್ವಶಕ್ತ ಪಿತನಾದ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ; ಅಲ್ಲಿಂದ ಜೀವಂತರಿಗೂ ಮೃತರಿಗೂ ನ್ಯಾಯತೀರಿಸಲು ಬರುವರು. ಪವಿತ್ರಾತ್ಮರಲ್ಲಿ, ಪವಿತ್ರ ಕಥೋಲಿಕ ಧರ್ಮಸಭೆಯಲ್ಲಿ, ಸಂತರ ಅನ್ಯೋನ್ಯತೆಯಲ್ಲಿ, ಪಾಪಗಳ ಕ್ಷಮೆಯಲ್ಲಿ, ಶರೀರದ ಪುನರುತ್ಥಾನದಲ್ಲಿ ಮತ್ತು ನಿತ್ಯಜೀವದಲ್ಲಿ ನಾನು ವಿಶ್ವಾಸವಿಡುತ್ತೇನೆ. ಆಮೆನ್.

45-50 ನಿಮಿಷಗಳು – ಚರ್ಚೆಯ ಪ್ರಶ್ನೆಗಳು
ಕೆಳಗಿನ ಪ್ರಶ್ನೆಗಳು/ಚರ್ಚೆಯನ್ನು ಆರಂಭಿಸುವ ಅಂಶಗಳ ಕುರಿತು, ಪ್ರತಿಯೊಬ್ಬರೂ ತಮಗೆ ಇಷ್ಟವಿದ್ದರೆ ಏನನ್ನಾದರೂ ಹಂಚಿಕೊಳ್ಳಲು ಅಥವಾ ಪ್ರಶ್ನೆಯನ್ನು ಕೇಳಲು ಆಹ್ವಾನಿಸಬೇಕು. ಒಂದೊಂದೇ ಪ್ರಶ್ನೆಯನ್ನು ತೆಗೆದುಕೊಳ್ಳಿ; ಪ್ರತಿಯೊಬ್ಬರೂ ತಮಗೆ ಇಷ್ಟವಿದ್ದರೆ ಏನನ್ನಾದರೂ ಹೇಳಲು ಅವಕಾಶ ನೀಡಿ. ಒಬ್ಬರು ಅಥವಾ ಇಬ್ಬರೇ ಚರ್ಚೆಯಲ್ಲಿ ಮೇಲುಗೈ ಸಾಧಿಸದಂತೆ ನೋಡಿಕೊಳ್ಳಿ. ವೃತ್ತದಲ್ಲಿ ಪ್ರತಿಯೊಬ್ಬರಿಗೂ ಸರದಿಯಂತೆ ಅವಕಾಶ ನೀಡಿ; ಹಂಚಿಕೊಳ್ಳಲು ಹಿಂಜರಿಯಬೇಡಿ! ಈ ವಿಷಯಗಳನ್ನು ಅರ್ಥಮಾಡಿಕೊಳ್ಳಲು ನಿಮ್ಮ ಒಳನೋಟಗಳು ಮತ್ತೊಬ್ಬರಿಗೆ ನೆರವಾಗಬಹುದು. ನಿಮ್ಮ ಪ್ರಶ್ನೆಯೇ ಬೇರೆಯವರ ಮನಸ್ಸಿನಲ್ಲಿಯೂ ಇರಬಹುದು. ಕೆಳಗಿನ ಕೆಲವು ಪ್ರಶ್ನೆಗಳು ನಿಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳಲು ಆಹ್ವಾನಿಸುತ್ತವೆ; ಇತರ ಪ್ರಶ್ನೆಗಳು ಮೊದಲನೆಯ ಅಧ್ಯಾಯದಲ್ಲಿ ನೀವು ಓದಿದ್ದನ್ನು ಇತರರೊಂದಿಗೆ ಹಂಚಿಕೊಳ್ಳಲು ಆಹ್ವಾನಿಸುತ್ತವೆ. ವೈಯಕ್ತಿಕವಾಗಿ ಹಂಚಿಕೊಳ್ಳುವುದರ ಜೊತೆಗೆ, ನಮ್ಮ ಧರ್ಮಸಭೆಯ ವಿಶ್ವಾಸವು ಸ್ಪಷ್ಟವಾಗಿ ವ್ಯಕ್ತವಾಗುವಂತೆ ಮತ್ತು ಎಲ್ಲರಿಗೂ ಅರ್ಥವಾಗುವಂತೆ ನೋಡಿಕೊಳ್ಳುವುದೇ ಇದರ ಗುರಿ.

  1. “ನಾನು ವಿಶ್ವಾಸಿಸುತ್ತೇನೆ…” ನಿಮ್ಮ ವಿಶ್ವಾಸದ ಪಯಣ ಹೇಗಿತ್ತು? ನೀವು ಏನನ್ನು ವಿಶ್ವಾಸಿಸುತ್ತೀರಿ ಎಂಬ ಪ್ರಶ್ನೆಯನ್ನು ಆಳವಾಗಿ ಪರಿಶೀಲಿಸಿದ್ದೀರಾ? ನೀವು ಏನನ್ನು ವಿಶ್ವಾಸಿಸುತ್ತೀರಿ ಎಂಬುದಾದರೂ ನಿಮಗೆ ತಿಳಿದಿದೆಯೇ? ದೇವರು, ವಿಶ್ವದ ಸೃಷ್ಟಿ, ಮರಣಾನಂತರದ ಜೀವನ, ನೈತಿಕ ಜೀವನ, ಆರಾಧನೆ ಮುಂತಾದವುಗಳ ಕುರಿತ ಕಠಿಣ ಪ್ರಶ್ನೆಗಳನ್ನು ನೀವು ಎದುರಿಸಿದ್ದೀರಾ?
  2. ಸಂತೋಷದ ಬಯಕೆ: ನಿಮ್ಮ ಆತ್ಮದಲ್ಲಿಯೇ ಅಚ್ಚೊತ್ತಿರುವ ಈ ಸಂತೋಷದ ಬಯಕೆಯ ಕುರಿತು ನೀವು ಎಂದಾದರೂ ಚಿಂತಿಸಿದ್ದೀರಾ? ಈ ಬಯಕೆಯು ನೀವು ಕೈಗೊಳ್ಳುವ ಬಹುತೇಕ ಪ್ರತಿಯೊಂದು ನಿರ್ಧಾರದ ಮೇಲೂ ಪ್ರಭಾವ ಬೀರುತ್ತದೆ ಎಂಬುದನ್ನು ಎಂದಾದರೂ ಅರಿತಿದ್ದೀರಾ? ಕೆಲವೊಮ್ಮೆ ಅದು ನಿಮ್ಮನ್ನು ಸುಳ್ಳಾದ ಮತ್ತು ಕ್ಷಣಿಕವಾದ ಒಂದು ಬಗೆಯ “ಸಂತೋಷ”ವನ್ನು ಹುಡುಕಲು ಪ್ರೇರೇಪಿಸುತ್ತದೆ, ಆದರೆ ಕೊನೆಯಲ್ಲಿ ಅದು ನಿಮ್ಮನ್ನು ಬರಡಾಗಿ, ಖಾಲಿಯಾಗಿ ಉಳಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ?
  3. ಆ ಬಯಕೆಯನ್ನು ಈಡೇರಿಸುವುದು: ನಿಮಗೆ ಸಂತೋಷವನ್ನು ನೀಡುವುದು ಯಾವುದು? ನಿಮಗೆ ನಿಜವಾದ ಸಂತೋಷವನ್ನು ನೀಡುವುದು ಯಾವುದು? ನಿಮಗೆ ಪರಿಪೂರ್ಣ ತೃಪ್ತಿಯನ್ನು ನೀಡುವ ಆ ಒಂದು ಸಂಗತಿ ಯಾವುದು? ನಿಶ್ಚಯವಾಗಿಯೂ, ಉತ್ತರ ದೇವರೇ. ಅವರಲ್ಲಿ ವಿಶ್ವಾಸವಿಡುವುದರ ಮೂಲಕ ಇದು ದೊರಕುತ್ತದೆ. ಸಂತೋಷಕ್ಕಾಗಿ ನಿಮ್ಮಲ್ಲಿರುವ ಬಯಕೆಯನ್ನು ಈಡೇರಿಸುವ ಮಾರ್ಗ ದೇವರೇ ಎಂಬುದನ್ನು ನೀವು ಹೇಗೆ ಕಂಡುಕೊಂಡಿದ್ದೀರಿ ಎಂಬುದನ್ನು ವಿವರಿಸಲು ಪ್ರಯತ್ನಿಸಿ. ಬಹುಶಃ ನಿಮ್ಮ ಮನಃಪರಿವರ್ತನೆ ಆರಂಭವಾದ ಒಂದು ನಿರ್ದಿಷ್ಟ ಕ್ಷಣವಿರಬಹುದು. ಅಥವಾ ನೀವು ಇದನ್ನು ಕಂಡುಕೊಳ್ಳಲು ಆರಂಭಿಸಿದ ಅನೇಕ ಚಿಕ್ಕಚಿಕ್ಕ ಕ್ಷಣಗಳನ್ನು ಗುರುತಿಸಬಹುದು. ನಿಮಗೆ ಹಂಚಿಕೊಳ್ಳಲು ಹಿತವೆನಿಸುವಷ್ಟನ್ನು ಹಂಚಿಕೊಳ್ಳಿ. ಇನ್ನೊಬ್ಬರು ಕೇಳಬೇಕಾಗಿರುವುದು ನಿಮ್ಮ ಕಥೆಯೇ ಆಗಿರಬಹುದು!
  4. ದೇವರನ್ನು ಅರಿಯುವುದು: ಮೊದಲನೆಯ ಅಧ್ಯಾಯದಲ್ಲಿ ವಿವರಿಸಿದಂತೆ, ನಾವು ದೇವರನ್ನು ಎರಡು ರೀತಿಯಲ್ಲಿ ಅರಿಯುತ್ತೇವೆ: ಮಾನವ ತರ್ಕಬುದ್ಧಿ & ದೈವಪ್ರಕಟನೆ (ವಿಶ್ವಾಸ).
    1. ಮಾನವ ತರ್ಕಬುದ್ಧಿ: ನಮ್ಮ ಮಾನವ ತರ್ಕಬುದ್ಧಿಯಿಂದ ಮಾತ್ರ ನಾವು ಯಾವ ನಿರ್ಣಯಗಳಿಗೆ ಬರಬಹುದು ಎಂಬುದನ್ನು ಚರ್ಚಿಸಿ. ದೇವರ ವಿಷಯದಲ್ಲಿ ನಾವು ಎಷ್ಟರಮಟ್ಟಿಗೆ ತಿಳಿದುಕೊಳ್ಳಬಹುದು? ದೇವರ ಕುರಿತು ನಾವು ಏನನ್ನು ಸಾಬೀತುಪಡಿಸಬಹುದು? ದೇವರ ಕುರಿತು ನೀವು ಒಬ್ಬ ನಾಸ್ತಿಕನೊಂದಿಗೆ ವಾದಿಸಬೇಕಾದರೆ, ದೇವರಿದ್ದಾರೆ ಎಂದು ಸಾಬೀತುಪಡಿಸಲು ಯಾವ ತರ್ಕಗಳನ್ನು ಬಳಸುವಿರಿ?
    2. ದೈವಪ್ರಕಟನೆ (ವಿಶ್ವಾಸ): ದೈವಪ್ರಕಟನೆ ಎಂದರೇನು ಮತ್ತು ಯುಗಯುಗಗಳಿಂದ ಅದು ನಮಗೆ ಹೇಗೆ ದೊರೆತಿದೆ? ಗುಂಪಿನಲ್ಲಿ ಪ್ರತಿಯೊಬ್ಬರೂ ಸರದಿಯಂತೆ, ಯುಗಯುಗಗಳಲ್ಲಿ ದೇವರು ನಮಗೆ ಏನು ಹೇಳಿದ್ದಾರೆ ಎಂಬುದನ್ನು ವಿವರಿಸಿ. ಆದಾಮ ಮತ್ತು ಹವ್ವ, ನೋಹ, ಅಬ್ರಹಾಮ, ಮೋಶೆ, ಪ್ರವಾದಿಗಳು, ಸ್ನಾನಿಕ ಯೋಹಾನ, ಯೇಸು ಮತ್ತು ಧರ್ಮಸಭೆಗೆ ಅವರು ಏನು ಹೇಳಿದರು? ಜೊತೆಗೆ, ನಿಮಗೆ ಯಾವುದಾದರೂ ವಿಷಯ ಥಟ್ಟನೆ ಹೊಳೆದಂತಹ ಕ್ಷಣಗಳ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿ. ಒಂದು ನಿರ್ದಿಷ್ಟ ಸಮಯದಲ್ಲಿ ಇದ್ದಕ್ಕಿದ್ದಂತೆ ನಿಮಗೆ ಅರ್ಥವಾದ ನಮ್ಮ ವಿಶ್ವಾಸದ ಯಾವುದಾದರೂ ಅಂಶ ನೆನಪಿಗೆ ಬರುತ್ತದೆಯೇ? ದೇವರ ಸಾರ್ವತ್ರಿಕ ಬೋಧನೆಯು ನಿಮ್ಮ ಹೃದಯವನ್ನು ಪ್ರವೇಶಿಸುವ ಇಂತಹ ಕ್ಷಣವು ವೈಯಕ್ತಿಕ ಪ್ರಕಾಶನೆಯ ಕ್ಷಣವಾಗಿದೆ.
  5. ಧರ್ಮಸಭೆಯ ಬೋಧನಾಧಿಕಾರ: ಧರ್ಮಸಭೆಯ ಬೋಧನಾಧಿಕಾರವನ್ನು ನೀವು ಅರ್ಥಮಾಡಿಕೊಂಡಿದ್ದೀರಾ? ಮೊದಲನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ ಬೋಧನಾಧಿಕಾರದ ಪಾತ್ರ ಮತ್ತು ಅಧಿಕಾರವನ್ನು ಗುಂಪಿನ ಯಾರಾದರೂ ಅರ್ಥಮಾಡಿಕೊಂಡಿದ್ದರೆ, ಅವರು ತಮ್ಮ ತಿಳಿವಳಿಕೆಯನ್ನು ಗುಂಪಿನೊಂದಿಗೆ ಹಂಚಿಕೊಳ್ಳಲಿ. ಅಗತ್ಯವಿದ್ದಂತೆ ಸ್ಪಷ್ಟಪಡಿಸಲು ಅಥವಾ ತಿದ್ದಲು ಇತರರು ಹೆಚ್ಚುವರಿ ಅಂಶಗಳನ್ನು ಸೇರಿಸಬಹುದು. ಬೇಕಾದರೆ ಮೊದಲನೆಯ ಅಧ್ಯಾಯದಲ್ಲಿರುವ ಆ ವಿಭಾಗವನ್ನು ನೋಡಿ.
  6. ಪವಿತ್ರ ಗ್ರಂಥ: ಪವಿತ್ರ ಗ್ರಂಥವು 100% ದೇವರಿಂದ ಮತ್ತು 100% ಮಾನವನಿಂದ ಬಂದಿದೆ ಎಂದು ಹೇಳುವುದರ ಅರ್ಥವೇನು? ಮೊದಲನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ ಈ ವಿಷಯದ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲು ಮತ್ತೊಮ್ಮೆ ಯಾರಾದರೊಬ್ಬರನ್ನು ಆಹ್ವಾನಿಸಲಾಗುತ್ತದೆ; ಹೆಚ್ಚಿನ ಸ್ಪಷ್ಟತೆಗಾಗಿ ಇತರರೂ ತಮ್ಮ ತಿಳಿವಳಿಕೆ ಮತ್ತು ಅಭಿಪ್ರಾಯಗಳನ್ನು ಸೇರಿಸಬಹುದು.
  7. ವಿಶ್ವಾಸ: ದೈವಪ್ರಕಟಣೆಯ ಗುರಿ ವಿಶ್ವಾಸವಾಗಿದೆ.  ಈ ಚರ್ಚೆಯಿಂದ ಅರ್ಥಮಾಡಿಕೊಳ್ಳಬೇಕಾದ ಅತ್ಯಂತ ಮುಖ್ಯವಾದ ಅಂಶವೆಂದರೆ ದೇವರಲ್ಲಿ ವಿಶ್ವಾಸ.  ಪ್ರತಿಯೊಬ್ಬರೂ ಸರದಿಯಾಗಿ ವಿಶ್ವಾಸದ ಈ ಕೆಳಗಿನ ಅಂಶಗಳ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿ:
    1. “ವಿಶ್ವಾಸವು ನಿಶ್ಚಿತವಾದುದು” ಎಂದು ಹೇಳುವುದರ ಅರ್ಥವೇನು?
    2. “ವಿಶ್ವಾಸವು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ” ಎಂದು ಹೇಳುವುದರ ಅರ್ಥವೇನು?
    3. ವಿಶ್ವಾಸ ಮತ್ತು ವಿಜ್ಞಾನ ಪರಸ್ಪರ ವಿರುದ್ಧವಾಗಿವೆಯೇ?  ಏಕೆ ಅಥವಾ ಏಕಿಲ್ಲ?
    4. ವಿಶ್ವಾಸವನ್ನು ಸ್ವೀಕರಿಸಲು ಒಬ್ಬ ವ್ಯಕ್ತಿ “ಸ್ವತಂತ್ರನಾಗಿರಬೇಕು” ಎಂದು ಹೇಳುವಾಗ ನಾವು ಏನನ್ನು ಅರ್ಥೈಸುತ್ತೇವೆ?  ವಿಶ್ವಾಸದ ನೈಜ ವರವನ್ನು ಸ್ವೀಕರಿಸಲು ಮುಂದಾಗುವಾಗ ನಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರಬಹುದಾದ ಸಂಗತಿಗಳ ಕೆಲವು ಉದಾಹರಣೆಗಳು ಯಾವುವು?

20 ನಿಮಿಷಗಳು – ಅಂತಿಮ ಚಿಂತನೆಗಳು ಮತ್ತು ಹಂಚಿಕೊಳ್ಳುವಿಕೆ
ಆ ಸಂಜೆಯ (ದಿನದ) ಚರ್ಚೆಯಲ್ಲಿ ತಮಗೆ ಹೆಚ್ಚು ಗಮನ ಸೆಳೆದ ಅಂಶ ಯಾವುದು ಅಥವಾ ಹೆಚ್ಚು ಗೊಂದಲ ಉಂಟುಮಾಡಿದ ಅಂಶ ಯಾವುದು ಎಂಬುದನ್ನು ಪ್ರತಿಯೊಬ್ಬರೂ ಸರದಿಯಾಗಿ ಹಂಚಿಕೊಳ್ಳಲು ಅವಕಾಶ ನೀಡಿ. ಹೀಗೆ ಅವರು ಇತರರಿಂದ ಹೆಚ್ಚಿನ ಸ್ಪಷ್ಟತೆ ಅಥವಾ ಒಳನೋಟವನ್ನು ಪಡೆಯಬಹುದು.

5 ನಿಮಿಷಗಳು – ಸಮಾಪನ ಪ್ರಾರ್ಥನೆ
ನಾಯಕರು ಶಿಲುಬೆಯ ಗುರುತಿನೊಂದಿಗೆ ಪ್ರಾರಂಭಿಸಿ, ಎಲ್ಲರೂ ಕಣ್ಣುಗಳನ್ನು ಮುಚ್ಚಿಕೊಂಡು ಒಂದು ನಿಮಿಷ ಮೌನವಾಗಿರಲು ಆಹ್ವಾನಿಸುತ್ತಾರೆ.  ಪ್ರತಿಯೊಬ್ಬರೂ ಚರ್ಚಿಸಿದ ವಿಷಯಗಳ ಕುರಿತು, ವಿಶೇಷವಾಗಿ ತಮಗೆ ಹೆಚ್ಚು ಗಮನ ಸೆಳೆದ ಅಂಶದ ಕುರಿತು ಚಿಂತಿಸಬೇಕು.

ನಂತರ ನಾಯಕರು ಈ ಕೆಳಗಿನ ಪ್ರಾರ್ಥನೆಯನ್ನು ಮಾಡುತ್ತಾರೆ:

ನಮ್ಮ ತಂದೆಯಾದ ದೇವರೇ, ನಮ್ಮ ವಿಶ್ವಾಸದ ವರಕ್ಕಾಗಿ ನಿನಗೆ ಕೃತಜ್ಞತೆ ಸಲ್ಲಿಸುತ್ತೇವೆ.  ಯುಗಯುಗಗಳಿಂದ ನಮಗೆ ಎಲ್ಲವನ್ನೂ ಪ್ರಕಟಿಸಿದ್ದಕ್ಕಾಗಿ ನಿನಗೆ ಕೃತಜ್ಞತೆ ಸಲ್ಲಿಸುತ್ತೇವೆ.  ಮೋಶೆ ಮತ್ತು ಪುರಾತನ ಪ್ರವಾದಿಗಳಿಗಾಗಿ ನಿನಗೆ ಕೃತಜ್ಞತೆ ಸಲ್ಲಿಸುತ್ತೇವೆ.  ವಿಶೇಷವಾಗಿ ನಿನ್ನನ್ನೂ ನಿನ್ನ ಪರಿಪೂರ್ಣ ಪ್ರೀತಿಯನ್ನೂ ಪ್ರಕಟಿಸಲು ನಮ್ಮ ನಡುವೆ ವಾಸಿಸಲು ಬಂದ ನಿನ್ನ ಪುತ್ರ ಯೇಸುವಿಗಾಗಿ ನಿನಗೆ ಕೃತಜ್ಞತೆ ಸಲ್ಲಿಸುತ್ತೇವೆ.  ನಮ್ಮ ವಿಶ್ವಾಸದ ಪಯಣದಲ್ಲಿ ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಹಾಯ ಮಾಡು.  ಅರ್ಥಮಾಡಿಕೊಳ್ಳಲು ಮಾತ್ರವಲ್ಲ, ವಿಶ್ವಾಸಿಸಲೂ ನಮಗೆ ಸಹಾಯ ಮಾಡು.  ವಿಶ್ವಾಸವೆಂಬ ಅಲೌಕಿಕ ವರದಲ್ಲಿ ಬೆಳೆಯಲು ನಮಗೆ ಸಹಾಯ ಮಾಡು; ಆ ವಿಶ್ವಾಸದ ವರವು ನಮ್ಮ ಜೀವನವನ್ನು ಪರಿವರ್ತಿಸಲು ನಾವು ಅವಕಾಶ ನೀಡುವಂತೆ ನಮ್ಮನ್ನು ಶಕ್ತಗೊಳಿಸು.

ಪ್ರಭುವೇ, ಈ ರಾತ್ರಿ (ಇಂದು) ಉತ್ತರ ಸಿಗದೆ ಉಳಿದ ಪ್ರಶ್ನೆಗಳಿದ್ದರೆ, ದಯವಿಟ್ಟು ನಿನ್ನದೇ ರೀತಿಯಲ್ಲಿ ಮತ್ತು ನಿನ್ನದೇ ಸಮಯದಲ್ಲಿ ನಮ್ಮೊಂದಿಗೆ ಮಾತನಾಡು.  ಈ ರಾತ್ರಿ (ಇಂದು) ನಮಗೆ ದೊರೆತ ಉತ್ತರಗಳಲ್ಲಿ ನಾವು ಇತರರೊಂದಿಗೆ ಹಂಚಿಕೊಳ್ಳಬೇಕೆಂದು ನೀನು ಬಯಸುವ ಉತ್ತರಗಳಿದ್ದರೆ, ನಿನ್ನ ಚಿತ್ತಕ್ಕೆ ಅನುಸಾರವಾಗಿ ಈ ವಿಶ್ವಾಸವನ್ನು ಹಂಚಿಕೊಳ್ಳಲು ಬೇಕಾದ ಧೈರ್ಯ, ಜ್ಞಾನ ಮತ್ತು ಪ್ರೀತಿಯನ್ನು ನಮಗೆ ದಯಪಾಲಿಸು.

ಯೇಸುವೇ, ನಾವು ನಿನ್ನಲ್ಲಿ ನಿಜವಾಗಿಯೂ ವಿಶ್ವಾಸವಿಡುತ್ತೇವೆ; ನಮ್ಮ ವಿಶ್ವಾಸವು ಅಲುಗಾಡಿ ದುರ್ಬಲವಾದಾಗ ನಮಗೆ ನೆರವಾಗು.  ಪ್ರತಿದಿನವೂ ನಿನ್ನನ್ನು ಇನ್ನಷ್ಟು ಪರಿಪೂರ್ಣವಾಗಿ ಅರಿತು ಪ್ರೀತಿಸಲು ನಮಗೆ ಬಲವನ್ನು ನೀಡು.  ಯೇಸುವೇ, ನಾನು ನಿನ್ನಲ್ಲಿ ಭರವಸೆಯಿಡುತ್ತೇನೆ.

ನಂತರ ನಾಯಕರು, ಅಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರೂ ಈ ಕೆಳಗಿನ ರೀತಿಯಲ್ಲಿ ತಮ್ಮದೇ ಪ್ರಾರ್ಥನೆಯನ್ನು ಸಲ್ಲಿಸಲು ಆಹ್ವಾನಿಸುತ್ತಾರೆ (ಸೂಚನೆ: ಇದನ್ನು ಗಟ್ಟಿಯಾಗಿ ಹೇಳಬಹುದು, ಆದರೆ ನಾಯಕರ ವಿವೇಚನೆಗೆ ಅನುಸಾರವಾಗಿ ಮೌನವಾಗಿ ಪ್ರಾರ್ಥಿಸುವುದು ಹೆಚ್ಚು ಸೂಕ್ತವಾಗಿರಬಹುದು):

ನಮ್ಮ ಪ್ರಭು ನಮ್ಮ ಮೊರೆಯನ್ನು ಆಲಿಸುತ್ತಾರೆ ಮತ್ತು ನಮಗೆ ಬೇಕಾದುದೆಲ್ಲವನ್ನೂ ತಿಳಿದಿದ್ದಾರೆ ಎಂಬ ಭರವಸೆಯೊಂದಿಗೆ, ಈಗ ನಾವು ಪ್ರತಿಯೊಬ್ಬರೂ ನಮ್ಮ ವೈಯಕ್ತಿಕ ಕಾಳಜಿಗಳನ್ನು ಅವರ ಮುಂದೆ ತರೋಣ.  ಎಲ್ಲವನ್ನೂ ತಮ್ಮ ವಶಕ್ಕೆ ತೆಗೆದುಕೊಳ್ಳಲು ಅವರು ಬಯಸುತ್ತಾರೆ ಎಂಬುದನ್ನು ಅರಿತು, ಪೂರ್ಣ ಭರವಸೆಯೊಂದಿಗೆ ಈ ಪ್ರಾರ್ಥನೆಗಳನ್ನು ಅವರಿಗೆ ಒಪ್ಪಿಸೋಣ.

(ಪ್ರತಿಯೊಬ್ಬರೂ ಆ ರಾತ್ರಿಯ ಅಥವಾ ದಿನದ ತಮ್ಮ ವೈಯಕ್ತಿಕ ಅಗತ್ಯಗಳ ಕುರಿತು ದೇವರೊಂದಿಗೆ ಮಾತನಾಡಲು ಒಂದು ನಿಮಿಷ ಮೌನವಾಗಿರಿ).

ನಂತರ ನಾಯಕರು ಪರಲೋಕ ಮಂತ್ರ, ನಮೋ ಮರಿಯೆ ಜಪ ಮತ್ತು ತ್ರಿತ್ವ ಸ್ತುತಿಯೊಂದಿಗೆ ಮುಕ್ತಾಯಗೊಳಿಸಲು ಎಲ್ಲರನ್ನೂ ಆಹ್ವಾನಿಸುತ್ತಾರೆ.

ಅಧ್ಯಯನ ಅವಧಿಗಳ ಪರಿವಿಡಿ

ಈ ಪುಟವನ್ನು ಹಂಚಿಕೊಳ್ಳಿ: