ಕನ್ನಡ

ಸಾಮಾನ್ಯ ಕಾಲದ ಹತ್ತನೇ ವಾರ

ಎಲ್ಲ 4 ಸಂಪುಟಗಳು ಪೇಪರ್‌ಬ್ಯಾಕ್ & ಇ-ಪುಸ್ತಕ ರೂಪದಲ್ಲಿ ಲಭ್ಯವಿವೆ!

ಪರಿವಿಡಿ

ನನ್ನನ್ನು ಹಿಂಬಾಲಿಸು

ಸಾಮಾನ್ಯ ಕಾಲದ ಹತ್ತನೆಯ ಭಾನುವಾರ (ವರ್ಷ A)

ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ, ಸುಂಕದ ಕಟ್ಟೆಯಲ್ಲಿ ಕುಳಿತಿದ್ದ ಮತ್ತಾಯ ಎಂಬ ವ್ಯಕ್ತಿಯನ್ನು ಕಂಡರು. ಅವರು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದರು. ಅವನು ಎದ್ದು ಅವರನ್ನು ಹಿಂಬಾಲಿಸಿದನು. ಮತ್ತಾಯ 9:9

ಮತ್ತಾಯನು ಜನರಿಗೆ ಬಹಳ ಅಪ್ರಿಯನಾಗಿದ್ದಿರಬೇಕು. ಅವನು ರೋಮನ್ ಸರ್ಕಾರದ ಖಾಸಗಿ ಗುತ್ತಿಗೆದಾರನಾಗಿದ್ದಿರಬಹುದು ಅಥವಾ ಗಲಿಲೇಯದ ಯೆಹೂದ್ಯ ನಾಯಕನಾದ ಹೆರೋದ ಅಂತಿಪಾಸನ ಸುಂಕ ವಸೂಲಿಗಾರನಾಗಿದ್ದಿರಬಹುದು. ಹೇಗೇ ಇರಲಿ, ಸುಂಕ ವಸೂಲಿಗಾರರನ್ನು ಜನರು ಇಷ್ಟಪಡುತ್ತಿರಲಿಲ್ಲ. ಏಕೆಂದರೆ ಅವರು ಅನೇಕ ಬಾರಿ ಅನುಮತಿಸಿದ್ದಕ್ಕಿಂತಲೂ ಹೆಚ್ಚು ಹಣವನ್ನು ಬಲವಂತವಾಗಿ ವಸೂಲಿಮಾಡಿ, ಅದರಲ್ಲಿ ಸ್ವಲ್ಪವನ್ನು ತಮ್ಮ ಜೇಬಿಗಿಳಿಸಿಕೊಳ್ಳುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿತ್ತು. ಮೂಲತಃ, ಲೌಕಿಕ ಆಡಳಿತಗಾರರ ಅನುಮತಿಯೊಂದಿಗೆ ಜನರಿಂದ ಕದಿಯುವ ಕಳ್ಳರೆಂದೇ ಅವರನ್ನು ನೋಡಲಾಗುತ್ತಿತ್ತು.

ಮತ್ತಾಯನು ಸ್ವಲ್ಪಮಟ್ಟಿಗೆ ಶ್ರೀಮಂತನೂ ಆಗಿದ್ದಿರಬೇಕು; ಕನಿಷ್ಠ ಬಹುಪಾಲು ಜನರಿಗಿಂತಲೂ ಹೆಚ್ಚು ಶ್ರೀಮಂತನಾಗಿದ್ದಿರಬೇಕು. ಆದ್ದರಿಂದ ಯೇಸು ಅವನ ಬಳಿಗೆ ನಡೆದುಬಂದು, “ನನ್ನನ್ನು ಹಿಂಬಾಲಿಸು” ಎಂದು ಹೇಳಿದಾಗ, ಅದು ಅನೇಕರ ಗಮನ ಸೆಳೆದಿರಬೇಕು. ಮತ್ತಾಯನು ಎದ್ದು, ತನ್ನ ಸುಂಕದ ಕಟ್ಟೆಯನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದಾಗ, ಅದನ್ನು ನೋಡುತ್ತಿದ್ದ ಜನರಿಗೆ ಕನಿಷ್ಠ ಆಶ್ಚರ್ಯವಾದರೂ ಆಗಿರಬೇಕು.

ಮತ್ತಾಯನು ತನ್ನ ಹಿಂದಿನ ಜೀವನವನ್ನೂ ತನ್ನ ಐಶ್ವರ್ಯವನ್ನೂ ಅಧಿಕಾರದ ಸ್ಥಾನವನ್ನೂ ಬಿಟ್ಟು, ನಜರೇತಿನ ಈ ವಿನಮ್ರ ವ್ಯಕ್ತಿಯನ್ನು ಹಿಂಬಾಲಿಸಲು ಅವನನ್ನು ಪ್ರೇರೇಪಿಸಿದ್ದು ಏನು? ಈ ವ್ಯಕ್ತಿಯು ದೇವರ ಪುತ್ರನೂ ಆಗಿದ್ದರು ಎಂಬ ಸರಳ ಸತ್ಯವೇ ಅದಕ್ಕೆ ಕಾರಣವಾಗಿತ್ತು.

ಮತ್ತಾಯನ ಅಂತರಂಗದಲ್ಲಿ ಏನಾಗುತ್ತಿತ್ತೆಂದು ನಮಗೆ ತಿಳಿದಿಲ್ಲವಾದರೂ, ನಾವು ಖಂಡಿತವಾಗಿಯೂ ಊಹಿಸಬಹುದು. ಬಹುಶಃ, ತನ್ನ ಸುಂಕ ವಸೂಲಿಯ ಕೆಲಸ ತನಗೆ ತೃಪ್ತಿ ನೀಡುತ್ತಿಲ್ಲವೆಂದು ಮತ್ತಾಯನು ಕಂಡುಕೊಂಡಿದ್ದನು. ಹೌದು, ಅವನ ಬಳಿ ಹಣವೂ ಅಧಿಕಾರವೂ ಇದ್ದವು. ಹೌದು, ಆ ಹಣದಿಂದ ಅವನು ಭೌತಿಕ ಸುಖಸೌಕರ್ಯಗಳನ್ನು ಖರೀದಿಸಬಹುದಿತ್ತು. ಆದರೆ ಬಹುಶಃ ಅವನು ಬದುಕಿನಲ್ಲಿ ಅತೃಪ್ತನಾಗಿದ್ದನು ಮತ್ತು ಇನ್ನೂ ಹೆಚ್ಚಿನದನ್ನು ಹುಡುಕುತ್ತಿದ್ದನು. ಆದ್ದರಿಂದ ಅವನು ತೆರೆದ ಮನಸ್ಸಿನಿಂದ ಹುಡುಕುತ್ತಾ ಕಾಯುತ್ತಿದ್ದನು. ಆಗ ಯೇಸು ಅವನನ್ನು ಕರೆದಾಗ, ಆ ಕರೆ ಅವನ ಕಿವಿಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅದು ಅವನ ಆತ್ಮವನ್ನು ಪ್ರವೇಶಿಸಿತು; ತಾನು ಹುಡುಕುತ್ತಿದ್ದದ್ದು ಯೇಸುವಿನ ಆ ಕರೆಯೇ ಎಂದು ಅವನಿಗೆ ಹೇಗೋ ತಿಳಿಯಿತು.

ಹೀಗೇ ಆಗಿರಬೇಕೆಂದು ನಾವು ಊಹಿಸಬಹುದು, ಏಕೆಂದರೆ ಇದು ಪ್ರತಿಯೊಬ್ಬ ವ್ಯಕ್ತಿಗೂ ಅನ್ವಯಿಸುವ ಮಾನವ ಸ್ವಭಾವದ ನಿಯಮವಾಗಿದೆ. ಈ ಲೋಕದ ಭೌತಿಕ ವಸ್ತುಗಳಿಂದ ಯಾರೂ ಬದುಕಿನಲ್ಲಿ ಆಳವಾದ ಶಾಂತಿ ಮತ್ತು ತೃಪ್ತಿಯನ್ನು ಕಂಡುಕೊಳ್ಳಲಾರರು. ಅವು ಸ್ವಲ್ಪಮಟ್ಟಿನ ಸುಖಸೌಕರ್ಯವನ್ನು ನೀಡಬಹುದಾದರೂ, ಈ ಲೋಕದ ವಸ್ತುಗಳು ಯಾರಿಗೂ ನಿಜವಾದ ಪರಿಪೂರ್ಣತೆಯನ್ನು ನೀಡಲಾರವು. ಪರಿಪೂರ್ಣತೆಯು ಎಲ್ಲಕ್ಕಿಂತ ಮೊದಲು ಒಂದು ಆಧ್ಯಾತ್ಮಿಕ ವಾಸ್ತವವಾಗಿದೆ, ಏಕೆಂದರೆ ನಾವು ಆಧ್ಯಾತ್ಮಿಕ ಜೀವಿಗಳು. ಆ ಮಟ್ಟದಲ್ಲಿ ತೃಪ್ತಿಯನ್ನು ಕಂಡುಕೊಳ್ಳುವ ಏಕೈಕ ಮಾರ್ಗವೆಂದರೆ ದೇವರ ಚಿತ್ತವನ್ನು ಆಲಿಸಿ ಅದಕ್ಕೆ ಸ್ಪಂದಿಸುವುದು. ಮತ್ತಾಯನು ಮಾಡಿದ್ದು ಅದನ್ನೇ.

ಯೇಸುವಿನಿಂದ ಕರೆಯಲ್ಪಟ್ಟ ಮತ್ತಾಯನು ಎಲ್ಲವನ್ನೂ ಬಿಟ್ಟು ಅವರನ್ನು ಹಿಂಬಾಲಿಸುವ ಈ ದೃಶ್ಯವನ್ನು ಇಂದು ಧ್ಯಾನಿಸಿ. ನೀವು ಅಲ್ಲಿದ್ದು, ಮತ್ತಾಯನ ಪರಿಚಯ ನಿಮಗಿದ್ದಿದ್ದರೆ, ನಿಮ್ಮ ಅಂತರಂಗದ ಪ್ರತಿಕ್ರಿಯೆ ಏನಾಗಿರುತ್ತಿತ್ತು? ಯೇಸುವಿನ ವಿನಮ್ರ ಹಿಂಬಾಲಕನಾಗಲು ಅವನು ತನ್ನ ಹಣವನ್ನೂ ಸ್ಥಾನಮಾನವನ್ನೂ ಬಿಟ್ಟದ್ದನ್ನು ಕಂಡು ನಿಮಗೆ ಆಶ್ಚರ್ಯವಾಗುತ್ತಿತ್ತೇ? ನೀವು ಅವನನ್ನು ಟೀಕಿಸುತ್ತಿದ್ದಿರಾ, ಅವನನ್ನು ನೋಡಿ ನಗುತ್ತಿದ್ದಿರಾ ಅಥವಾ ಅಪಹಾಸ್ಯ ಮಾಡುತ್ತಿದ್ದಿರಾ? ಅಥವಾ ಮತ್ತಾಯನು ಕೊನೆಗೂ ಸತ್ಯವನ್ನು ಕಂಡುಕೊಂಡನೆಂದು ಕೃತಜ್ಞರಾಗಿರುತ್ತಿದ್ದಿರಾ? ಮತ್ತಾಯನು ಕಂಡುಕೊಂಡದ್ದನ್ನು ಕಂಡುಕೊಳ್ಳುವ ಅವಕಾಶ ನಿಮಗೂ ನೀಡಲಾಗಿದೆ. ಪ್ರತಿದಿನವೂ ತಮ್ಮನ್ನು ಇನ್ನಷ್ಟು ಸಂಪೂರ್ಣವಾಗಿ ಹಿಂಬಾಲಿಸುವಂತೆ ದೇವರು ನಿಮ್ಮನ್ನು ಕರೆಯುತ್ತಿದ್ದಾರೆ. ಈ ಕರೆಯನ್ನು ನೀವು ಆಲಿಸುವಾಗ, ದೇವರು ನಿಮಗಾಗಿ ಹೊಂದಿರುವ ಯೋಜನೆಯನ್ನು ಸಂಪೂರ್ಣವಾಗಿ ಅನುಸರಿಸಲು ಪ್ರತಿಯೊಂದು ಅಡ್ಡಿಯನ್ನೂ ತೊರೆದುಬಿಡಲು ಹಿಂಜರಿಯಬೇಡಿ.

ಪ್ರಭುವೇ, ಬದುಕಿನ ಎಲ್ಲ ತೃಪ್ತಿ ಮತ್ತು ಪರಿಪೂರ್ಣತೆಯ ಮೂಲ ನೀವೇ, ನೀವೊಬ್ಬರೇ. ನಿಮ್ಮ ಮಹಿಮೆಯನ್ನು ವರ್ಣಿಸಲು ಸಾಧ್ಯವಿಲ್ಲ; ನೀವು ಸದಾಕಾಲವೂ ಹಿಂಬಾಲಿಸಲು ಯೋಗ್ಯರು. ನೀವು ನನ್ನನ್ನು ಎಲ್ಲಿಗೇ ಕರೆದೊಯ್ದರೂ ನಾನು ನಿಮ್ಮನ್ನು ಹಿಂಬಾಲಿಸುವಂತೆ, ಬದುಕಿನ ಅನೇಕ ಮೋಸಗೊಳಿಸುವ ತೃಪ್ತಿಗಳಿಂದ ದಯವಿಟ್ಟು ನನ್ನನ್ನು ಮುಕ್ತಗೊಳಿಸಿರಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.


ಪ್ರಾಮಾಣಿಕ ಪಶ್ಚಾತ್ತಾಪ

ಸಾಮಾನ್ಯ ಕಾಲದ ಹತ್ತನೆಯ ಭಾನುವಾರ (ವರ್ಷ B)

“ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಜನರು ಮಾಡುವ ಎಲ್ಲ ಪಾಪಗಳೂ ಅವರು ಉಚ್ಚರಿಸುವ ಎಲ್ಲ ದೇವದೂಷಣೆಗಳೂ ಅವರಿಗೆ ಕ್ಷಮಿಸಲ್ಪಡುವವು. ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಎಂದಿಗೂ ಕ್ಷಮೆ ದೊರೆಯುವುದಿಲ್ಲ; ಅವನು ಶಾಶ್ವತವಾದ ಪಾಪಕ್ಕೆ ದೋಷಿಯಾಗಿರುತ್ತಾನೆ.” ಏಕೆಂದರೆ, “ಅವನಲ್ಲಿ ಅಶುದ್ಧಾತ್ಮವಿದೆ” ಎಂದು ಅವರು ಹೇಳಿದ್ದರು. ಮಾರ್ಕ 3:28–30

ಕಫೆರ್ನೌಮಿನಲ್ಲಿದ್ದ ತಮ್ಮ ಮನೆಯ ಸುತ್ತಲೂ ನೆರೆದಿದ್ದ ಜನಸಮೂಹಕ್ಕೆ ಯೇಸು ಈ ಮಾತುಗಳನ್ನು ಹೇಳಿದರು. ಏಕೆಂದರೆ ಆಗಷ್ಟೇ ಎರಡು ಗುಂಪಿನ ಜನರು ಅವರನ್ನು ಬಹಿರಂಗವಾಗಿ ತೀವ್ರವಾಗಿ ಟೀಕಿಸಿದ್ದರು. ಮೊದಲು, ಅವರ ಬಂಧುಗಳಲ್ಲಿ ಕೆಲವರು ಬಂದು ಎಲ್ಲರಿಗೂ, “ಅವನಿಗೆ ಮತಿಭ್ರಮಣೆಯಾಗಿದೆ” ಎಂದು ಹೇಳಿದರು. ನಂತರ ಯೆರೂಸಲೇಮಿನಿಂದ ಬಂದಿದ್ದ ಕೆಲವು ಶಾಸ್ತ್ರಿಗಳು, “ಅವನಿಗೆ ಬೆಲ್ಜೆಬೂಲ್ ಹಿಡಿದಿದ್ದಾನೆ” ಎಂದು ಹೇಳಿದರು. ಹೀಗಾಗಿ, ಅವರ ದೇವದೂಷಣೆಯು ಪವಿತ್ರಾತ್ಮರ ವಿರುದ್ಧದ ಪಾಪವಾಗಿದೆ ಮತ್ತು ಅದಕ್ಕೆ ಶಾಶ್ವತ ಪರಿಣಾಮಗಳಿರುತ್ತವೆ ಎಂದು ಯೇಸು ಸ್ಪಷ್ಟವಾಗಿ ಹೇಳುತ್ತಾರೆ.

ಕೆಲವು ಪಾಪಗಳು ಎಂದಿಗೂ ಕ್ಷಮಿಸಲ್ಪಡುವುದಿಲ್ಲವೇಕೆ? ಪವಿತ್ರಾತ್ಮರ ವಿರುದ್ಧದ ಪಾಪವೆಂದರೆ ನಿಖರವಾಗಿ ಏನು? ಪರಂಪರಾಗತವಾಗಿ, ನಮ್ಮ ಧರ್ಮಸಭೆಯು ಈ ಪಾಪವನ್ನು ಎರಡು ರೀತಿಗಳಲ್ಲಿ ಗುರುತಿಸಿದೆ. ಮೊದಲನೆಯದು, ಅಂತ್ಯದವರೆಗೂ ಪಶ್ಚಾತ್ತಾಪಪಡದಿರುವ ಪಾಪ, ಅಂದರೆ ಗಂಭೀರ ಪಾಪದಲ್ಲೇ ಹಠದಿಂದ ಮುಂದುವರಿಯುವ ಪಾಪ. ಹಠಮಾರಿತನ ಅಥವಾ ಪಶ್ಚಾತ್ತಾಪಪಡಲು ನಿರಾಕರಿಸುವುದು ಕ್ಷಮಿಸಲಾಗದ ಪಾಪವಾಗಿದೆ; ಏಕೆಂದರೆ ಅದನ್ನು ಮಾಡುವ ವ್ಯಕ್ತಿ ಕ್ಷಮೆಯನ್ನು ಎಂದಿಗೂ ಬೇಡುವುದಿಲ್ಲ. ಅವರು ತಮ್ಮ ಪಾಪದಲ್ಲಿ ಎಷ್ಟು ಆಳವಾಗಿ ಬೇರೂರಿಬಿಡುತ್ತಾರೆಂದರೆ, ಬದಲಾಗಲು ನಿರಾಕರಿಸುತ್ತಾರೆ. ಹೀಗಾಗಿ, ದೇವರ ಕರುಣೆ ಅವರೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಎರಡನೆಯದಾಗಿ, ಇದನ್ನು ಅತಿಭರವಸೆಯ ಪಾಪವೆಂದೂ ಗುರುತಿಸಲಾಗಿದೆ; ಅಂದರೆ ದೇವರು ಕ್ಷಮಿಸುತ್ತಾರೆಂದು ನಿರೀಕ್ಷಿಸುತ್ತಲೇ ಒಬ್ಬ ವ್ಯಕ್ತಿ ಪಾಪ ಮಾಡುವುದು. ಅತಿಭರವಸೆಯು ಹೆಚ್ಚು ಸೂಕ್ಷ್ಮವಾದದ್ದು; ಆದರೂ, ಕ್ಷಮೆಗೆ ಅಗತ್ಯವಾದ ಪ್ರಾಮಾಣಿಕ ಪಶ್ಚಾತ್ತಾಪದಿಂದ ವ್ಯಕ್ತಿಯನ್ನು ಅದು ದೂರವಿಡುತ್ತದೆ. ಅತಿಭರವಸೆಯುಳ್ಳ ವ್ಯಕ್ತಿಯು ತನ್ನ ಪಾಪದಲ್ಲೇ ಉಳಿದಿರುವವರೆಗೂ ಎಂದಿಗೂ ಸಂಪೂರ್ಣವಾಗಿ ಪಶ್ಚಾತ್ತಾಪಪಟ್ಟು ತನ್ನ ಬದುಕನ್ನು ತಿದ್ದಿಕೊಳ್ಳುವುದಿಲ್ಲ.

ನೀವು ಈಗ ಹೋರಾಡುತ್ತಿರುವ ಅಥವಾ ಭವಿಷ್ಯದಲ್ಲಿ ಹೋರಾಡಬೇಕಾಗಬಹುದಾದ ಅನೇಕ ಪಾಪಗಳಲ್ಲಿ, ಪವಿತ್ರಾತ್ಮರ ವಿರುದ್ಧದ ಪಾಪಗಳ ಬಗ್ಗೆ ವಿಶೇಷ ಗಮನ ಕೊಡಿ. ದೇವರ ಕ್ಷಮೆಯ ಮೇಲೆ ನಮಗೆ ಹಕ್ಕಿದೆ ಎಂದು ನಾವು ಎಂದಿಗೂ ಭಾವಿಸಬಾರದು. ಆದರೂ, ದೇವರ ಕರುಣೆ ಎಷ್ಟು ಮಹತ್ತರವಾದದ್ದೆಂದರೆ, ನಾವು ನಮ್ಮ ಪಾಪವನ್ನು ವಿನಮ್ರವಾಗಿ ಒಪ್ಪಿಕೊಂಡು ಅದರ ಬಗ್ಗೆ ಪ್ರಾಮಾಣಿಕವಾಗಿ ಪಶ್ಚಾತ್ತಾಪಪಡುವ ಕ್ಷಣವೇ ದೇವರು ಕ್ಷಮಿಸುತ್ತಾರೆ ಎಂದು ನಾವು ಸದಾ ವಿಶ್ವಾಸಿಸಬೇಕು. ಆದರೆ ಇಲ್ಲಿ ಮುಖ್ಯವಾದದ್ದು “ಪ್ರಾಮಾಣಿಕತೆ.” ಕ್ಷಮೆ ಪಡೆಯಲು, ನಮ್ಮೊಳಗಿನ ಪಶ್ಚಾತ್ತಾಪವು ಪ್ರಾಮಾಣಿಕವೂ ನೈಜವೂ ವಾಸ್ತವವೂ ಸಂಪೂರ್ಣವೂ ಆಗಿರಬೇಕು. ನಾವು ದೇವರನ್ನು ಮೋಸಗೊಳಿಸಲಾರೆವು. ಖಂಡಿತವಾಗಿಯೂ ನಾವು ನಮ್ಮನ್ನೇ ಮೋಸಗೊಳಿಸಿಕೊಳ್ಳಬಹುದು, ಆದರೆ ದೇವರನ್ನಲ್ಲ.

ಪವಿತ್ರಾತ್ಮರ ವಿರುದ್ಧದ ಯಾವುದೇ ಪಾಪಕ್ಕೆ ನೀವು ದೋಷಿಗಳಾಗಿಲ್ಲವೆಂದು ನಿಯಮಿತವಾಗಿ ಖಚಿತಪಡಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದೆಂದರೆ, ಪಾಪನಿವೇದನೆಯ ಸಂಸ್ಕಾರವನ್ನು ಸ್ವೀಕರಿಸಿ, ಮುಕ್ತಮನಸ್ಸಿನಿಂದ, ಸಂಪೂರ್ಣವಾಗಿ ಮತ್ತು ವಿನಮ್ರತೆಯಿಂದ ನಿಮ್ಮ ಪಾಪಗಳನ್ನು ನಿವೇದಿಸುವುದು. ನಿಮ್ಮ ಪಾಪದ ಹೊಣೆಯನ್ನು ಒಪ್ಪಿಕೊಳ್ಳಿ. ಅದನ್ನು ಅಂಗೀಕರಿಸಿ. ಅದಕ್ಕಾಗಿ ದುಃಖಪಡಿ. ಬದಲಾಗಲು ದೃಢಸಂಕಲ್ಪ ಮಾಡಿ. ನಂತರ ಅದನ್ನು ನಿವೇದಿಸಿ, ದೇವರ ಕರುಣೆಯಲ್ಲಿ ಭರವಸೆಯಿಡಿ.

ಪಾಪದಿಂದ ಪಶ್ಚಾತ್ತಾಪಪಡುವುದರಲ್ಲಿ ನಿಮ್ಮ ಪ್ರಾಮಾಣಿಕತೆ ಮತ್ತು ಪೂರ್ಣತೆಗೆ ಯಾವ ರೀತಿಯಲ್ಲಿ ಕೊರತೆಯಿದೆ ಎಂಬುದನ್ನು ಇಂದು ಮನನ ಮಾಡಿ. ನೀವು ಮಾಡಿದ ಪಾಪಗಳ ವಿಷಯದಲ್ಲಿ ನಿಮ್ಮೊಂದಿಗೇ ನೀವು ಪ್ರಾಮಾಣಿಕರಾಗಿದ್ದೀರಾ? ಆ ಪಾಪಗಳ ಹೊಣೆಯನ್ನು ನೀವು ಒಪ್ಪಿಕೊಂಡಿದ್ದೀರಾ? ಹಾಗಿದ್ದರೆ, ಅವುಗಳನ್ನು ದೇವರ ಮುಂದೆ ನಿವೇದಿಸಿ, ಮತ್ತೆಂದೂ ಅವುಗಳನ್ನು ಮಾಡದಿರಲು ದೃಢವಾಗಿ ನಿರ್ಧರಿಸಿದ್ದೀರಾ? ಪಶ್ಚಾತ್ತಾಪವನ್ನು ಗಂಭೀರವಾಗಿ ಪರಿಗಣಿಸಿ. ಆಗ ಪವಿತ್ರಾತ್ಮನ ವಿರುದ್ಧದ ಯಾವುದೇ ಪಾಪಕ್ಕೆ ಕೊಂಡೊಯ್ಯುವ ಜಾರುದಾರಿಯಲ್ಲಿ ನೀವು ಬೀಳಲು ಆರಂಭಿಸುವುದೂ ಇಲ್ಲ.

ಪರಮ ಕರುಣಾಮಯ ಪ್ರಭುವೇ, ದೀನತೆಯಿಂದಲೂ ನಿಜವಾದ ಪಶ್ಚಾತ್ತಾಪದಿಂದಲೂ ನಿಮ್ಮ ಬಳಿಗೆ ಬರುವ ಎಲ್ಲರಿಗೂ ನೀವು ಕ್ಷಮೆಯನ್ನು ನೀಡುತ್ತೀರಿ. ದಯಮಾಡಿ ಈ ಸದ್ಗುಣಗಳಿಂದ ನನ್ನನ್ನು ತುಂಬಿಸಿ. ನಿಮ್ಮ ಅಗಾಧ ಕರುಣೆಗೆ ನಾನು ನನ್ನನ್ನು ತೆರೆದುಕೊಳ್ಳುವಾಗ, ಬದಲಾಗುವ ದೃಢಸಂಕಲ್ಪವನ್ನು ನನಗೆ ದಯಪಾಲಿಸಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.


ದೇವರ ಮಧ್ಯಪ್ರವೇಶ

ಸಾಮಾನ್ಯ ಕಾಲದ ಹತ್ತನೇ ಭಾನುವಾರ (ವರ್ಷ C)

“ಯುವಕನೇ, ನಿನಗೆ ಹೇಳುತ್ತೇನೆ, ಎದ್ದೇಳು!” ಸತ್ತಿದ್ದವನು ಎದ್ದು ಕುಳಿತು ಮಾತನಾಡತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಒಪ್ಪಿಸಿದರು. ಎಲ್ಲರೂ ಭಯಭೀತರಾದರು; “ನಮ್ಮ ಮಧ್ಯೆ ಮಹಾನ್ ಪ್ರವಾದಿಯೊಬ್ಬರು ಉದಯಿಸಿದ್ದಾರೆ,” ಮತ್ತು “ದೇವರು ತಮ್ಮ ಜನರನ್ನು ಸಂದರ್ಶಿಸಿದ್ದಾರೆ” ಎಂದು ಉದ್ಗರಿಸುತ್ತಾ ದೇವರನ್ನು ಮಹಿಮೆಪಡಿಸಿದರು. ಲೂಕ 7:14–16

ಯೇಸು ಮಾಡಿದ ಅನೇಕ ಅದ್ಭುತಗಳು ರೋಗಿಯಾಗಿದ್ದ ವ್ಯಕ್ತಿಯ ಅಥವಾ ಅವರ ಕುಟುಂಬದವರ ಮತ್ತು ಸ್ನೇಹಿತರಲ್ಲಿ ಕೆಲವರ ಕೋರಿಕೆಯ ಮೇರೆಗೆ ನಡೆದವು. ಆದರೆ ಇಂದಿನ ಸುವಾರ್ತೆಯಲ್ಲಿನ ಅದ್ಭುತವನ್ನು ನಮ್ಮ ಪ್ರಭು ಯಾರ ಕೋರಿಕೆಯೂ ಇಲ್ಲದೆ ಸ್ವಪ್ರೇರಣೆಯಿಂದ ಮಾಡಿದರು. ನಾಯಿನ್ ನಗರದ ಒಬ್ಬ ಯುವಕ ಸತ್ತಿದ್ದನು. ಸತ್ತ ಯುವಕನನ್ನು ಹೊರಗೆ ಹೊತ್ತುಕೊಂಡು ಹೋಗುತ್ತಿದ್ದ ಅದೇ ಸಮಯದಲ್ಲಿ, ಯೇಸು ಆ ನಗರದ ಮೂಲಕ ನಡೆದುಹೋಗುತ್ತಿದ್ದರು; ದೊಡ್ಡ ಜನಸಮೂಹವು ಅವರನ್ನು ಹಿಂಬಾಲಿಸುತ್ತಿತ್ತು. ಅವನನ್ನು ಆಗಲೇ ಶವಪೆಟ್ಟಿಗೆಯಲ್ಲಿ ಇಡಲಾಗಿತ್ತು. ಅಂದರೆ, ಅವನು ಸತ್ತು ಸ್ವಲ್ಪ ಸಮಯವಾಗಿತ್ತು. ಅಳುತ್ತಿದ್ದ ಆ ಯುವಕನ ತಾಯಿಯನ್ನು ಕಂಡಾಗ ಯೇಸುವಿನ ಹೃದಯವು ಆಕೆಯ ಮೇಲಿನ ಅನುಕಂಪದಿಂದ ಮರುಗಿತು. ಅವರು ಆಕೆಯ ಬಳಿಗೆ ಹೋಗಿ, ಅಳಬೇಡ ಎಂದು ಹೇಳಿ, ಆ ಯುವಕನನ್ನು ಮತ್ತೆ ಜೀವಂತಗೊಳಿಸಿದರು.

ಈ ಅದ್ಭುತವು ನಮಗೆ ಕಲಿಸುವ ಒಂದು ವಿಷಯವೆಂದರೆ, ದೇವರು ನಮ್ಮ ಪ್ರತಿಯೊಂದು ಅಗತ್ಯವನ್ನೂ ಸದಾ ತಿಳಿದಿದ್ದಾರೆ ಮತ್ತು ತಮ್ಮನ್ನು ಪ್ರೀತಿಸುವವರ ಒಳಿತಿಗಾಗಿ ಅಗತ್ಯವಾದಾಗ ಅವರ ಜೀವನದಲ್ಲಿ ಮಧ್ಯಪ್ರವೇಶಿಸುತ್ತಾರೆ ಎಂಬುದು. ಈ ಮಹಿಳೆ ಆಳವಾದ ವಿಶ್ವಾಸವುಳ್ಳವಳಾಗಿದ್ದಿರಬೇಕು; ಯೇಸು ಅದನ್ನು ಅರಿತಿರಬೇಕು. ಆಕೆ ಯೇಸುವನ್ನು ಮಧ್ಯಪ್ರವೇಶಿಸುವಂತೆ ಎಂದೂ ಕೇಳಿರಲಿಲ್ಲ; ಬಹುಶಃ ಆಕೆಗೆ ಯೇಸುವಿನ ಬಗ್ಗೆ ತಿಳಿದೂ ಇರಲಿಲ್ಲ. ಆದರೂ ಆಕೆಯ ನಿರ್ಮಲ ಹೃದಯ, ದೇವರ ಮೇಲಿನ ಪ್ರೀತಿ ಮತ್ತು ನಿಜವಾದ ಒಳ್ಳೆಯತನ ನಮ್ಮ ಪ್ರಭುವಿನ ಗಮನಕ್ಕೆ ಬರದೆ ಹೋಗಲಿಲ್ಲ. ಹೀಗೆ, ಆಕೆಯ ಮೇಲಿನ ಪ್ರೀತಿಯಿಂದ ಅವರು ಮಧ್ಯಪ್ರವೇಶಿಸಿ ಆಕೆಯ ಮಗನನ್ನು ಜೀವಂತಗೊಳಿಸಿದರು. ಈ ಯುವಕನು “ತನ್ನ ತಾಯಿಯ ಏಕೈಕ ಮಗ”ನಾಗಿದ್ದುದರಿಂದ, ತಾಯಿಗೆ ವಯಸ್ಸಾದಂತೆ ಆಕೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಅವನದಾಗಿರುತ್ತಿತ್ತು. ಆದ್ದರಿಂದ ಮಗನನ್ನು ಕಳೆದುಕೊಂಡದ್ದು, ಅವನ ಮೇಲಿನ ಪ್ರೀತಿಯಿಂದಾಗಿ ಆಕೆಗೆ ಆಳವಾದ ವೈಯಕ್ತಿಕ ದುಃಖವನ್ನು ತಂದದ್ದು ಮಾತ್ರವಲ್ಲ, ಅವನ ಮರಣವು ಆಕೆಯ ಜೀವನವನ್ನು ಇನ್ನಷ್ಟು ಕಷ್ಟಕರವಾಗಿಸಿತ್ತು. ಯೇಸು ಇದನ್ನು ಅರಿತು ಮಧ್ಯಪ್ರವೇಶಿಸಿದರು.

ಕೆಲವೊಮ್ಮೆ, ನಾವು ದೇವರಲ್ಲಿ ನಿರ್ದಿಷ್ಟ ಅನುಗ್ರಹಗಳನ್ನೂ ಆಶೀರ್ವಾದಗಳನ್ನೂ ಕೇಳದಿದ್ದರೆ, ಅವರು ಅವುಗಳನ್ನು ಕೊಡುವುದಿಲ್ಲ ಎಂದು ಭಾವಿಸಬಹುದು. ಆದರೆ ಅದು ನಿಜವಲ್ಲ. ಸತ್ಯವೇನೆಂದರೆ, ನಾವು ನಮ್ಮ ಜೀವನದಲ್ಲಿ ದೇವರಿಗೆ ಮೊದಲ ಸ್ಥಾನ ನೀಡಿ, ಅವರನ್ನು ಪ್ರೀತಿಸಲು ಮತ್ತು ಅವರ ಪವಿತ್ರ ಚಿತ್ತದಂತೆ ಸೇವೆ ಸಲ್ಲಿಸಲು ಪ್ರಯತ್ನಿಸಿದಾಗ, ದೇವರು ಸದಾ ನಮ್ಮನ್ನು ನೋಡಿಕೊಳ್ಳುತ್ತಾರೆ. ಅವರ ಪರಿಪಾಲನೆ ಪರಿಪೂರ್ಣವಾಗಿದೆ. ಅವರು ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ. ನಾವು ಅವರನ್ನು ಪ್ರೀತಿಸುತ್ತೇವೆ ಎಂಬ ಕಾರಣಕ್ಕಷ್ಟೇ ಅವರು ನಮ್ಮ ಪ್ರೀತಿಪಾತ್ರರನ್ನು ಅದ್ಭುತವಾಗಿ ಗುಣಪಡಿಸುತ್ತಾರೆ ಎಂದು ಇದರ ಅರ್ಥವಲ್ಲ. ಆದರೆ ನಮಗೆ ಏನು ಬೇಕೆಂದು ದೇವರು ತಿಳಿದಿದ್ದಾರೆ ಮತ್ತು ನಮ್ಮ ನಿರೀಕ್ಷೆಗಳನ್ನು ಬಹಳವಾಗಿ ಮೀರುವ ರೀತಿಯಲ್ಲಿ ಆ ಅಗತ್ಯಗಳನ್ನು ಪೂರೈಸಲು ಅವರು ಎಂದಿಗೂ ವಿಫಲರಾಗುವುದಿಲ್ಲ ಎಂಬುದು ಇದರ ಅರ್ಥ.

ದೇವರನ್ನು ನಿಮ್ಮ ಪೂರ್ಣ ಹೃದಯದಿಂದ ಪ್ರೀತಿಸಬೇಕಾದ ಜೀವನದ ಕರ್ತವ್ಯದ ಕುರಿತು ಇಂದು ಮನನ ಮಾಡಿ. ಅದೇ ನಿಮ್ಮ ಜೀವನದ ಗುರಿಯೂ ಧ್ಯೇಯವೂ ಆಗಿದ್ದರೆ, ಉಳಿದೆಲ್ಲವೂ ಸರಿಯಾದ ಕ್ರಮದಲ್ಲಿ ನೆಲೆಗೊಳ್ಳುತ್ತದೆ. ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸಬೇಡಿ. ನಿಮಗೆ ಎದುರಾಗುವ ಕಷ್ಟಗಳ ಬಗ್ಗೆ ಚಿಂತಿಸಬೇಡಿ. ನಿಮಗೆ ಏನು ಬೇಕು ಮತ್ತು ನಿಮ್ಮ ಶಾಶ್ವತ ರಕ್ಷಣೆಗೆ ಯಾವುದು ಅತ್ಯುತ್ತಮ ಎಂಬುದನ್ನು ದೇವರು ತಿಳಿದಿದ್ದಾರೆಂದೂ, ನಿಮಗೆ ಅತ್ಯಂತ ಒಳಿತಾಗುವಾಗ ಅವರು ಸದಾ ಮಧ್ಯಪ್ರವೇಶಿಸುತ್ತಾರೆಂದೂ ಭರವಸೆಯಿಡಿ. ನೀವು ಎಂದೂ ಕೇಳದಿದ್ದರೂ, ಅವರು ನಿಮ್ಮ ಜೀವನದಲ್ಲಿ ಮಹಿಮೆಯ ಕಾರ್ಯಗಳನ್ನು ಮಾಡುವುದನ್ನು ಕಂಡರೆ ಆಶ್ಚರ್ಯಪಡಬೇಡಿ.

ಅತ್ಯಂತ ಕಾಳಜಿಯುಳ್ಳ ಪ್ರಭುವೇ, ನನ್ನ ಜೀವನದ ಪ್ರತಿಯೊಂದು ಅಂಶವೂ ನಿಮಗೆ ತಿಳಿದಿದೆ. ನೀವು ಎಲ್ಲವನ್ನೂ ತಿಳಿದಿದ್ದೀರಿ; ನನ್ನ ಪವಿತ್ರತೆಗೂ ರಕ್ಷಣೆಗೂ ಏನು ಅಗತ್ಯವೆಂಬುದನ್ನೂ ಬಲ್ಲಿರಿ. ನಿಮ್ಮನ್ನು ನನ್ನ ಪೂರ್ಣ ಹೃದಯದಿಂದ ಪ್ರೀತಿಸಲು ಮತ್ತು ನಿಮ್ಮ ಪರಿಪೂರ್ಣ ಪ್ರೀತಿಯ ಯೋಜನೆಗೆ ಅನುಸಾರವಾಗಿ ನೀವು ಸದಾ ನನ್ನ ಅಗತ್ಯಗಳನ್ನು ಪೂರೈಸಿ ನನ್ನನ್ನು ನೋಡಿಕೊಳ್ಳುವಿರಿ ಎಂದು ಭರವಸೆಯಿಡಲು ನಾನು ಕಲಿಯುವಂತಾಗಲಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.


ಪಾವಿತ್ರ್ಯದ ಶಿಖರಗಳು

ಸಾಮಾನ್ಯ ಕಾಲದ ಹತ್ತನೆಯ ವಾರದ ಸೋಮವಾರ

ಯೇಸು ಜನಸಮೂಹಗಳನ್ನು ಕಂಡು ಬೆಟ್ಟವನ್ನೇರಿದರು. ಅವರು ಕುಳಿತುಕೊಂಡ ಮೇಲೆ ಅವರ ಶಿಷ್ಯರು ಅವರ ಬಳಿಗೆ ಬಂದರು. ಅವರು ಶಿಷ್ಯರಿಗೆ ಹೀಗೆಂದು ಬೋಧಿಸತೊಡಗಿದರು: “ಆತ್ಮದಲ್ಲಿ ದೀನರಾಗಿರುವವರು ಧನ್ಯರು, ಏಕೆಂದರೆ ಸ್ವರ್ಗರಾಜ್ಯ ಅವರದೇ.” ಮತ್ತಾಯ 5:1–3

ಅಷ್ಟಭಾಗ್ಯಗಳು ನೀಡುವ ಅತ್ಯುನ್ನತ ಕರೆಯನ್ನು ಮನನ ಮಾಡಲು ಇಂದು ನಮಗೆ ನೀಡಲಾಗಿದೆ. ಗಲಿಲೇಯ ಸಮುದ್ರದ ಸ್ವಲ್ಪ ಉತ್ತರದಲ್ಲಿರುವ ಒಂದು ಬೆಟ್ಟದ ಮೇಲೆ ಯೇಸು ಈ ಬೋಧನೆಗಳನ್ನು ನೀಡಿದರು. ಅವರ ಪ್ರವಚನವನ್ನು ಕೇಳಲು ಮತ್ತು ಅವರ ಅನೇಕ ಅದ್ಭುತಗಳಿಗೆ ಸಾಕ್ಷಿಗಳಾಗಲು ಅನೇಕರು ಯೇಸುವಿನ ಬಳಿಗೆ ಬರುತ್ತಿದ್ದರು. ಈ ದೂರದ ಸ್ಥಳದಲ್ಲಿ ಅವರು ಯೇಸುವಿನ ಬಳಿಗೆ ಗುಂಪುಗುಂಪಾಗಿ ಬಂದರು. ಈಗ “ಗಿರಿಪ್ರವಚನ” ಎಂದು ಕರೆಯಲಾಗುವ ಪ್ರವಚನವನ್ನು ಬೋಧಿಸುವಾಗ ಯೇಸು ಅವರನ್ನು ಕುಳಿತುಕೊಳ್ಳುವಂತೆ ಮಾಡಿದರು. ಈ ಪ್ರವಚನವು ಮತ್ತಾಯನ ಸುವಾರ್ತೆಯ 5ರಿಂದ 7ನೇ ಅಧ್ಯಾಯಗಳಲ್ಲಿದೆ. ಯೇಸು ತಮ್ಮ ಸಾರ್ವಜನಿಕ ಸೇವೆಯನ್ನು ಆರಂಭಿಸಿದ ಸ್ವಲ್ಪ ಸಮಯದ ನಂತರ ಇದು ನಡೆಯಿತು.

ತಮ್ಮ ಸಾರ್ವಜನಿಕ ಸೇವೆಯನ್ನು ಆರಂಭಿಸಲು ಎಂಥ ಅದ್ಭುತ ವಿಧಾನ! ಯೇಸುವಿನ ಈ ಬೋಧನೆ ತೀರಾ ಹೊಸದಾಗಿತ್ತು; ಅದು ಅನೇಕರನ್ನು ಮಂತ್ರಮುಗ್ಧರನ್ನಾಗಿಸಿರಬೇಕು. ಯೇಸು ಇನ್ನು ದಶಾಜ್ಞೆಗಳಂತಹ ಹಳೆಯ ಒಡಂಬಡಿಕೆಯ ವಿಧಿಗಳನ್ನು ಮಾತ್ರ ಬೋಧಿಸುತ್ತಿರಲಿಲ್ಲ; ಈಗ ಅವರು ನೈತಿಕ ನಿಯಮವನ್ನು ಹಿಂದೆ ಯಾರೂ ಕಲ್ಪಿಸಿಯೂ ಇರದ ಮಟ್ಟಕ್ಕೆ ಏರಿಸಿದರು.

ಈ ಹೊಸ ಬೋಧಕರು ಹೊಸ ಅಧಿಕಾರ ಮತ್ತು ಜ್ಞಾನದಿಂದ ಮಾತನಾಡುವುದನ್ನು ಕೇಳಿದಾಗ, ಜನರಿಗೆ ಒಂದೇ ಸಮಯದಲ್ಲಿ ಉತ್ಸಾಹವೂ ಗೊಂದಲವೂ ಉಂಟಾಗಿರಬಹುದು. ನೀತಿಗಾಗಿ ಹಸಿದು ಬಾಯಾರುವುದು, ಕರುಣೆಯುಳ್ಳವರಾಗಿರುವುದು, ಹೃದಯಶುದ್ಧಿಯುಳ್ಳವರಾಗಿರುವುದು ಮತ್ತು ಶಾಂತಿ ಸ್ಥಾಪಕರಾಗಿರುವುದು—ಇವುಗಳನ್ನು ಅವರು ಒಪ್ಪಿಕೊಳ್ಳಬಹುದಾಗಿತ್ತು. ಆದರೆ ದೀನರಾಗಿರುವುದನ್ನು, ದುಃಖಿಸುವುದನ್ನು ಮತ್ತು ಸೌಮ್ಯರಾಗಿರುವುದನ್ನು ಆಶೀರ್ವಾದಗಳೆಂದು ಏಕೆ ಪರಿಗಣಿಸಲಾಗಿತ್ತು? ಅದಕ್ಕಿಂತಲೂ ಹೆಚ್ಚು ಸವಾಲಿನ ಸಂಗತಿಯೆಂದರೆ, ನೀತಿಯ ನಿಮಿತ್ತ ಹಿಂಸೆಗೊಳಗಾಗುವುದು ಅಥವಾ ಯೇಸುವಿನ ನಿಮಿತ್ತ ನಿಂದನೆಗೂ ಸುಳ್ಳು ಆರೋಪಗಳಿಗೂ ಗುರಿಯಾಗುವುದು ಒಳ್ಳೆಯದು ಏಕೆ?

ಯೇಸುವಿನ ಹೊಸ ಮತ್ತು ಕ್ರಾಂತಿಕಾರಕ ಬೋಧನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡಾಗ, ಗೊಂದಲ ಮತ್ತು ಉತ್ಸಾಹ ಎರಡನ್ನೂ ಒಟ್ಟಿಗೆ ಅನುಭವಿಸಿದವರು ಅವರ ಮೊದಲ ಶಿಷ್ಯರು ಮಾತ್ರವಲ್ಲದಿರಬಹುದು. ನೀವೂ ಅವರ ಬೋಧನೆಗಳಿಗೆ ನಿಜವಾಗಿಯೂ ಕಿವಿಗೊಟ್ಟು, ಅವರ ಮಾತಿನ ಅರ್ಥವನ್ನು ಗ್ರಹಿಸಿದರೆ, ನಿಮ್ಮ ಅಸ್ತಿತ್ವದ ಆಳದಲ್ಲಿಯೇ ಸವಾಲನ್ನು ಎದುರಿಸಬೇಕಾಗಬಹುದು ಎಂಬುದನ್ನು ಕಂಡುಕೊಳ್ಳುವಿರಿ. ಯೇಸುವಿನ ಬೋಧನೆಯನ್ನು ಸಂಪೂರ್ಣವಾಗಿ ಮತ್ತು ಯಾವುದೇ ಹಿಂಜರಿಕೆಯಿಲ್ಲದೆ ಸ್ವೀಕರಿಸಬೇಕು.

ಭಾಗ್ಯವಚನಗಳು ಪರಿಪೂರ್ಣತೆಗೆ ನಮಗಿರುವ ಕರೆಯಾಗಿವೆ. ಪಾವಿತ್ರ್ಯದ ಶಿಖರಗಳಿಗೆ ಏರಿ ಸ್ವರ್ಗದ ಮಹಿಮೆಯನ್ನು ಪಡೆಯಲು ನಾವು ಸಾಗಬೇಕಾದ ಮಾರ್ಗವನ್ನು ಅವು ನಮಗೆ ತೋರಿಸುತ್ತವೆ. ಸಂತೋಷ ಮತ್ತು ಆನಂದದ ಪೂರ್ಣತೆಯನ್ನು ತಲುಪಲು ಅವು ನಮಗೆ ನಿಖರವಾದ, ವಿವರವಾದ ಮಾರ್ಗಸೂಚಿಯಾಗಿವೆ. ಆದರೆ ಅವು ನಮ್ಮ ಮನಸ್ಸುಗಳಲ್ಲಿಯೂ ನಮ್ಮ ನಡೆನುಡಿಗಳಲ್ಲಿಯೂ ಆಮೂಲಾಗ್ರ ಪರಿವರ್ತನೆಗೆ ಕರೆ ನೀಡುತ್ತವೆ. ಅವುಗಳನ್ನು “ಸುಲಭವಾಗಿ” ಸ್ವೀಕರಿಸಲಾಗುವುದಿಲ್ಲ; ಏಕೆಂದರೆ ನಮ್ಮಲ್ಲಿರುವ ಪ್ರತಿಯೊಂದು ಸ್ವಾರ್ಥ ಪ್ರವೃತ್ತಿಯಿಂದಲೂ ನಾವು ವಿಮುಖರಾಗಿ, ಲೌಕಿಕವಾದ ಪ್ರತಿಯೊಂದು ಪ್ರಲೋಭನೆ, ವ್ಯಾಮೋಹ ಮತ್ತು ಪಾಪದಿಂದ ಮುಕ್ತರಾಗಿ ಬದುಕಲು ಆಯ್ಕೆಮಾಡಬೇಕೆಂದು ಅವು ಬೇಡುತ್ತವೆ. ಭಾಗ್ಯವಚನಗಳನ್ನು ಆಲಿಸಿ, ಅರ್ಥಮಾಡಿಕೊಂಡು, ಸ್ವೀಕರಿಸುವವರಿಗಾಗಿ ಪರಿಪೂರ್ಣತೆ ಕಾದಿದೆ.

ಸವಾಲೊಡ್ಡುವ ಈ ಪರ್ವತಪ್ರವಚನದ ಆರಂಭವನ್ನು ಕುರಿತು ಇಂದು ಚಿಂತಿಸಿ. ಪ್ರತಿಯೊಂದು ಭಾಗ್ಯವಚನವನ್ನೂ ಪ್ರಾರ್ಥನೆಯಲ್ಲಿ ಧ್ಯಾನಿಸಲು ಸಮಯವನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಪ್ರಾರ್ಥನೆ ಮತ್ತು ಧ್ಯಾನದ ಮೂಲಕ ಮಾತ್ರ ಪಾವಿತ್ರ್ಯಕ್ಕೆ ನೀಡಲಾಗಿರುವ ಈ ಪ್ರತಿಯೊಂದು ಆಹ್ವಾನದ ಪೂರ್ಣ ಅರ್ಥವನ್ನು ಗ್ರಹಿಸಲು ಸಾಧ್ಯ. ಮೊದಲು ಆಂತರಿಕವಾಗಿ ಆತ್ಮದಲ್ಲಿ ದೀನರಾಗಿರಬೇಕೆಂಬ ಕರೆಯಿಂದ ಆರಂಭಿಸಿ. ದೇವರ ಚಿತ್ತಕ್ಕೆ ಸೇರದ ಎಲ್ಲದರಿಂದಲೂ ಸಂಪೂರ್ಣವಾಗಿ ಅನಾಸಕ್ತರಾಗಿರಲು ಈ ಭಾಗ್ಯವಚನ ನಮ್ಮನ್ನು ಕರೆಯುತ್ತದೆ. ಅಲ್ಲಿಂದ ಮುಂದುವರಿದು, ನಿಮ್ಮ ಪಾಪಕ್ಕಾಗಿ ದುಃಖಿಸುವುದರ ಮತ್ತು ಎಲ್ಲದರಲ್ಲಿಯೂ ಹೃದಯಶುದ್ಧಿಯನ್ನೂ ವಿನಯವನ್ನೂ ಅರಸುವುದರ ಮಹತ್ವವನ್ನು ಪರಿಗಣಿಸಿ. ಪ್ರತಿಯೊಂದು ಭಾಗ್ಯವಚನವನ್ನೂ ಮನನಮಾಡಿ; ನಿಮಗೆ ಹೆಚ್ಚು ಸವಾಲೊಡ್ಡುವ ಭಾಗ್ಯವಚನದ ಧ್ಯಾನದಲ್ಲಿ ಸಮಯ ಕಳೆಯಿರಿ. ಈ ಪ್ರವಚನದ ಮೂಲಕ ನಮ್ಮ ಪ್ರಭು ನಿಮಗೆ ಹೇಳಬೇಕಾದದ್ದು ಬಹಳಷ್ಟಿದೆ. ಇದರ ಮೂಲಕ ನಿಮ್ಮನ್ನು ಪಾವಿತ್ರ್ಯದ ಶಿಖರಗಳಿಗೆ ಮುನ್ನಡೆಸಲು ಅವರಿಗೆ ಅವಕಾಶ ನೀಡಲು ಹಿಂಜರಿಯಬೇಡಿ.

ಸಕಲ ಪಾವಿತ್ರ್ಯದ ಪ್ರಭುವೇ, ನೀವು ಎಲ್ಲ ರೀತಿಯಲ್ಲಿಯೂ ಪರಿಪೂರ್ಣರು. ಪ್ರತಿಯೊಂದು ಸದ್ಗುಣವನ್ನೂ ಅಷ್ಟಭಾಗ್ಯಗಳನ್ನೂ ನೀವು ಪರಿಪೂರ್ಣವಾಗಿ ಜೀವಿಸಿದಿರಿ. ನನ್ನನ್ನು ನಿಮಗೆ ತೆರೆದುಕೊಳ್ಳುವ ಅನುಗ್ರಹವನ್ನು ನನಗೆ ದಯಪಾಲಿಸಿ; ಆಗ ಜೀವನದ ಪರಿಪೂರ್ಣತೆಗೆ ನೀವು ನೀಡುವ ಕರೆಯನ್ನು ನಾನು ಆಲಿಸಿ, ನನ್ನ ಇಡೀ ಜೀವನದಿಂದ ಉದಾರವಾಗಿ ಸ್ಪಂದಿಸುವಂತಾಗಲಿ. ಪ್ರಿಯ ಪ್ರಭುವೇ, ನನ್ನನ್ನು ಪವಿತ್ರನನ್ನಾಗಿ ಮಾಡಿ; ಆಗ ನೀವು ದಯಪಾಲಿಸಬೇಕೆಂದಿರುವ ಸಂತೋಷ ಮತ್ತು ಪೂರ್ಣತೆಯನ್ನು ನಾನು ಕಂಡುಕೊಳ್ಳುವೆನು. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.


ಲೋಕಕ್ಕೆ ಉಪ್ಪು ಮತ್ತು ಬೆಳಕು

ಸಾಮಾನ್ಯ ಕಾಲದ ಹತ್ತನೇ ವಾರದ ಮಂಗಳವಾರ

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ನೀವು ಭೂಮಿಗೆ ಉಪ್ಪಾಗಿದ್ದೀರಿ. ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದಕ್ಕೆ ಮತ್ತೆ ಯಾವುದರಿಂದ ರುಚಿ ಕೊಡಬಹುದು? ಅದನ್ನು ಹೊರಗೆ ಎಸೆದು ಜನರ ಕಾಲ್ತುಳಿತಕ್ಕೆ ಗುರಿಮಾಡುವುದಕ್ಕಷ್ಟೇ ಹೊರತು ಬೇರೆ ಯಾವುದಕ್ಕೂ ಅದು ಉಪಯೋಗಕ್ಕೆ ಬರುವುದಿಲ್ಲ. ನೀವು ಲೋಕಕ್ಕೆ ಬೆಳಕಾಗಿದ್ದೀರಿ…” ಮತ್ತಾಯ 5:13–14

ಪ್ರತಿಯೊಬ್ಬ ಕ್ರೈಸ್ತನಿಗೂ ಜೀವನದಲ್ಲಿ ಎರಡು ಮುಖ್ಯ ಕರ್ತವ್ಯಗಳಿವೆ. ಮೊದಲನೆಯದಾಗಿ, ನಾವು ವೈಯಕ್ತಿಕ ಪಾವಿತ್ರ್ಯಕ್ಕಾಗಿ ಶ್ರಮಿಸಬೇಕು. ಎರಡನೆಯದಾಗಿ, ಇತರರೂ ಅದೇ ಮಟ್ಟದ ಪಾವಿತ್ರ್ಯವನ್ನು ಸಾಧಿಸಲು ನೆರವಾಗುವಂತೆ ನಾವು ಕೆಲಸಮಾಡಬೇಕು. “ಭೂಮಿಗೆ ಉಪ್ಪು” ಮತ್ತು “ಲೋಕಕ್ಕೆ ಬೆಳಕು” ಆಗಿರುವುದರ ಅರ್ಥ ಇದೇ.

ಉಪ್ಪನ್ನು ಪರಿಗಣಿಸಿ. ಉಪ್ಪು ಆಹಾರ ಕೆಡದಂತೆ ಕಾಪಾಡುತ್ತದೆ; ಜೊತೆಗೆ ಅದಕ್ಕೆ ರುಚಿಯನ್ನೂ ನೀಡುತ್ತದೆ. ಅದು ಆಹಾರದಲ್ಲಿ ಬೆರೆತು, ಒಂದು ರೀತಿಯಲ್ಲಿ ಕಣ್ಮರೆಯಾಗುವ ಮೂಲಕ ಹೀಗೆ ಮಾಡುತ್ತದೆ. ನಮ್ಮ ವಿಷಯದಲ್ಲಿಯೂ ಹೀಗೆಯೇ ಆಗಬೇಕು. ಮೊದಲು, ನಮ್ಮ ಪ್ರಭು ನಮ್ಮ ಜೀವನವನ್ನು ಪ್ರವೇಶಿಸಿ ಪಾಪದ ಕೆಡುಕಿನಿಂದ ನಮ್ಮನ್ನು ಕಾಪಾಡಬೇಕು. ಆದರೆ ಅವರು ಹೀಗೆ ಮಾಡುವಾಗ, ಪಾವಿತ್ರ್ಯದ “ರುಚಿ” ಇತರರಿಗೆ ಗೋಚರವಾಗುವ ರೀತಿಯಲ್ಲಿ ನಮ್ಮಲ್ಲಿರುವ ಒಳ್ಳೆಯತನವನ್ನೂ ಹೊರತರುತ್ತಾರೆ. ಈ ರೀತಿಯಲ್ಲಿ, ಇತರರಿಗೆ ಉಪ್ಪಾಗಿರಲು ನಮ್ಮನ್ನು ಬಳಸಿಕೊಳ್ಳಲಾಗುತ್ತದೆ. ವಿಶೇಷವಾಗಿ ನಮ್ಮ ಪ್ರೀತಿಯ ಕಾರ್ಯಗಳ ಮೂಲಕ ಇದು ನೆರವೇರುತ್ತದೆ.

ಲಿಸಿಯುವಿನ ಸಂತ ತೆರೇಸಾ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಹೇಳಿದ್ದಾರೆ: “ನಮ್ಮ ಸುತ್ತಲಿರುವವರ ತಪ್ಪುಗಳನ್ನು ಸಹಿಸಿಕೊಳ್ಳುವುದರಲ್ಲಿ, ಅವರ ದೌರ್ಬಲ್ಯಗಳನ್ನು ಕಂಡು ಎಂದಿಗೂ ಆಶ್ಚರ್ಯಪಡದೆ, ಅವರ ಸದ್ಗುಣದ ಅತಿ ಸಣ್ಣ ಸೂಚನೆಯಿಂದಲೂ ಸ್ಫೂರ್ತಿ ಪಡೆಯುವುದರಲ್ಲಿ ನಿಜವಾದ ಪ್ರೀತಿ ಅಡಗಿದೆ ಎಂಬುದು ಈಗ ನನಗೆ ತಿಳಿಯುತ್ತಿದೆ.” ವಿಶೇಷವಾಗಿ ಈ ರೀತಿಯಲ್ಲಿಯೇ ನಾವು ಇತರರಿಗೆ ಉಪ್ಪು ಮತ್ತು ಬೆಳಕಾಗಿ ವರ್ತಿಸುತ್ತೇವೆ ಎಂದು ಅವರು ನಂಬಿದ್ದರು. ಇತರರು ದುರ್ಬಲರಾಗಿರುವಾಗ ಅವರಿಗೆ ಕರುಣೆ ತೋರುವ ಮೂಲಕ ನಾವು ಅವರನ್ನು ಪಾಪದಿಂದ ಕಾಪಾಡಲು ನೆರವಾಗುತ್ತೇವೆ. ಅವರ ಒಳ್ಳೆಯತನವನ್ನು ಕಂಡು ಅದರಲ್ಲಿ ಹರ್ಷಿಸುವ ಮೂಲಕ ಅವರ ಜೀವನವನ್ನು ಸಮೃದ್ಧಗೊಳಿಸುತ್ತೇವೆ. ನಾವು ಇದನ್ನು ಗುಪ್ತವಾಗಿ ಮಾಡುತ್ತೇವೆ. ನಮ್ಮ ಸೌಮ್ಯತೆ ಮತ್ತು ಸಹಾನುಭೂತಿ, ನಮ್ಮ ದಯೆ ಮತ್ತು ಕರುಣೆಯ ಮೂಲಕ ನಾವು ಇತರರನ್ನು ಕಾಪಾಡುತ್ತೇವೆ; ದೇವರ ಸಮೃದ್ಧ ಅನುಗ್ರಹದಲ್ಲಿ ಅವರು ಬೆಳೆಯಲು ಸಹಾಯಮಾಡುತ್ತೇವೆ. ಅನೇಕ ಬಾರಿ, ದೇವರು ನಮ್ಮನ್ನು ಹೇಗೆ ಬಳಸಿಕೊಂಡರು ಎಂಬುದು ಅವರಿಗೆ ಅರಿವಾಗದೆಯೇ ನಾವು ಹೀಗೆ ಮಾಡುತ್ತೇವೆ.

ಬೆಳಕಿನ ಬಗ್ಗೆಯೂ ಯೋಚಿಸಿ. ನಾವು ವಾಸಿಸುವ ಜಗತ್ತು ಅನೇಕ ಬಾರಿ ಕತ್ತಲಿನಿಂದಲೂ ಹತಾಶೆಯಿಂದಲೂ ತುಂಬಿರುತ್ತದೆ. ನಮ್ಮ ಸುತ್ತಲೂ ಭ್ರಷ್ಟತೆ ಇದೆ, ಮತ್ತು ಪ್ರಲೋಭನೆಗಳು ಹೇರಳವಾಗಿವೆ. ಆದ್ದರಿಂದ ಕ್ರಿಸ್ತನ ಬೆಳಕು ಎಲ್ಲೆಡೆಯೂ ಪ್ರಕಟವಾಗಬೇಕು. ನಮ್ಮ ಸುತ್ತಲಿರುವವರು ಪವಿತ್ರತೆ ಮತ್ತು ಸಂತೋಷದ ಮಾರ್ಗವನ್ನು ಸ್ಪಷ್ಟವಾಗಿ ಕಾಣಬೇಕಾಗಿದೆ. ಮತ್ತೆ ಹೇಳುವುದಾದರೆ, ಮೊದಲು ನಾವೇ ಬೆಳಕಾಗಲು ಶ್ರಮಿಸಿದರೆ ಇದು ಸಾಧ್ಯ. ಲೋಕದ ನಿಜವಾದ ಬೆಳಕಾದ ಕ್ರಿಸ್ತನು ನಮ್ಮ ಜೀವನವನ್ನು ಎಷ್ಟರಮಟ್ಟಿಗೆ ಆವರಿಸಬೇಕೆಂದರೆ, ಪಾಪಪತನಗೊಂಡ ಜಗತ್ತಿನಲ್ಲಿ ಪ್ರಕಾಶಮಾನವಾಗಿ ಹೊಳೆಯುವುದು ನಮಗೆ ಬಹುತೇಕ ಸಹಜವಾಗಬೇಕು. ಕ್ರಿಸ್ತನು ನಮ್ಮಲ್ಲಿ ಜೀವಂತವಾಗಿದ್ದಾಗ, ನಾವು ಆನಂದ ಮತ್ತು ಶಾಂತಿ, ಪ್ರಶಾಂತತೆ ಮತ್ತು ದೃಢವಿಶ್ವಾಸ, ನೈತಿಕ ಒಳ್ಳೆಯತನ ಮತ್ತು ದೃಢಸಂಕಲ್ಪವನ್ನು ಹೊರಸೂಸುತ್ತೇವೆ. ನಾವು ಈ ರೀತಿ ಜೀವಿಸಿದಾಗ, ಸುವಾರ್ತೆಯನ್ನು ಇತರರ ಮೇಲೆ “ಹೇರಬೇಕಾಗಿರುವುದಿಲ್ಲ”; ಬದಲಾಗಿ, ದೇವರ ಬೆಳಕು ತಾನಾಗಿಯೇ ಪ್ರಕಾಶಿಸಿ, ನಮ್ಮ ಬಳಿಗೆ ಬರುವವರಿಗೆ ಭರವಸೆಯ ದಾರಿದೀಪವಾಗುತ್ತದೆ.

ಜೀವನದ ಈ ಎರಡು ಧ್ಯೇಯಗಳ ಕುರಿತು ಇಂದು ಚಿಂತಿಸಿ. ಮೊದಲನೆಯದಾಗಿ, ಪವಿತ್ರತೆಗೆ ನಿಮಗಿರುವ ಕರೆಯ ಬಗ್ಗೆ ಧ್ಯಾನಿಸಿ. ನಿಮ್ಮ ಸ್ವಂತ ಜೀವನದಲ್ಲಿ ಬೆಳಕನ್ನು ತರಲು, ಎಲ್ಲ ಪಾಪಗಳಿಂದ ನಿಮ್ಮನ್ನು ಕಾಪಾಡಲು ಮತ್ತು ಪವಿತ್ರ ಜೀವನಕ್ಕೆ ಆಧ್ಯಾತ್ಮಿಕ ಸ್ವಾದವನ್ನು ಸೇರಿಸಲು ದೇವರು ಹೇಗೆ ಬಯಸುತ್ತಾರೆ? ಎರಡನೆಯದಾಗಿ, ತಮ್ಮ ಪ್ರೀತಿಯಿಂದ ನೀವು ಯಾರನ್ನು ಪ್ರೀತಿಸಬೇಕೆಂದು ದೇವರು ಬಯಸುತ್ತಾರೆ? ಯಾರಿಗೆ ಭರವಸೆ ಮತ್ತು ಆನಂದ, ಕರುಣೆ ಮತ್ತು ದಯೆ, ಜ್ಞಾನ ಮತ್ತು ಪ್ರೋತ್ಸಾಹದ ಮಾತುಗಳು ಬೇಕಾಗಿವೆ? ಪವಿತ್ರರಾಗಿರಿ; ಬಳಿಕ ಆ ಪವಿತ್ರತೆಯು ಇತರರಿಗೆ ಪ್ರಕಾಶಿಸುವಂತೆ ಅವಕಾಶ ಕೊಡಿ. ಆಗ ನೀವು ನಿಜವಾಗಿಯೂ ಭೂಮಿಗೆ ಉಪ್ಪೂ ಲೋಕಕ್ಕೆ ಬೆಳಕೂ ಆಗುವಿರಿ.

ಲೋಕದ ನಿಜವಾದ ಬೆಳಕಾಗಿರುವ ನನ್ನ ಯೇಸುವೇ, ನಾನು ಸ್ಪಷ್ಟವಾಗಿ ಕಾಣುವಂತೆ ಮತ್ತು ಪಾಪದ ಕತ್ತಲೆಯಿಂದ ರಕ್ಷಿಸಲ್ಪಡುವಂತೆ ದಯವಿಟ್ಟು ನನ್ನ ಜೀವನದಲ್ಲಿ ಪ್ರಖರವಾಗಿ ಪ್ರಕಾಶಿಸಿ. ನಿಮ್ಮ ಬೆಳಕಿನಿಂದ ನನ್ನನ್ನು ತುಂಬಿಸುವಾಗ, ಅಸ್ತವ್ಯಸ್ತತೆ ಮತ್ತು ಗೊಂದಲದಿಂದ ತುಂಬಿರುವ ಲೋಕಕ್ಕೆ ನಿಮ್ಮ ಪ್ರೀತಿ ಮತ್ತು ಕರುಣೆಯನ್ನು ತಲುಪಿಸುವ ಸಾಧನವಾಗಿ ದಯವಿಟ್ಟು ನನ್ನನ್ನು ಬಳಸಿಕೊಳ್ಳಿ. ಪ್ರಿಯ ಪ್ರಭುವೇ, ಕತ್ತಲೆಯನ್ನು ದೂರಮಾಡಿ, ನಿಮ್ಮ ಚಿತ್ತದಂತೆ ನನ್ನನ್ನು ನಿಮ್ಮ ಸಾಧನವಾಗಿ ಬಳಸಿಕೊಳ್ಳಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.


ಅನುಗ್ರಹದ ಹೊಸ ಧರ್ಮಶಾಸ್ತ್ರ

ಸಾಮಾನ್ಯ ಕಾಲದ ಹತ್ತನೆಯ ವಾರದ ಬುಧವಾರ

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ನಾನು ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ಬೋಧನೆಗಳನ್ನಾಗಲಿ ರದ್ದುಮಾಡಲು ಬಂದಿದ್ದೇನೆಂದು ಭಾವಿಸಬೇಡಿ. ನಾನು ರದ್ದುಮಾಡಲು ಬಂದಿಲ್ಲ, ನೆರವೇರಿಸಲು ಬಂದಿದ್ದೇನೆ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಆಕಾಶವೂ ಭೂಮಿಯೂ ಅಳಿದುಹೋಗುವವರೆಗೆ, ಎಲ್ಲವೂ ನೆರವೇರುವವರೆಗೆ, ಧರ್ಮಶಾಸ್ತ್ರದಿಂದ ಅತಿ ಚಿಕ್ಕ ಅಕ್ಷರವಾಗಲಿ ಅಕ್ಷರದ ಅತಿ ಚಿಕ್ಕ ಭಾಗವಾಗಲಿ ಅಳಿದುಹೋಗುವುದಿಲ್ಲ.” ಮತ್ತಾಯ 5:17–18

ಹಳೆಯ ಒಡಂಬಡಿಕೆಯಲ್ಲಿ ಕಂಡುಬರುವ ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಬೋಧನೆಗಳಲ್ಲಿ ಮೂರು ವಿಧಗಳಿವೆ. ಮೊದಲನೆಯದಾಗಿ, ಮುಖ್ಯವಾಗಿ ದೇವರ ಸ್ವಾಭಾವಿಕ ನಿಯಮವನ್ನು ಆಧರಿಸಿದ ದಶಾಜ್ಞೆಗಳಂತಹ ನೈತಿಕ ನಿಯಮಗಳಿವೆ. “ಸ್ವಾಭಾವಿಕ ನಿಯಮ” ಎಂದರೆ, “ನೀನು ಕೊಲ್ಲಬಾರದು, ಕದಿಯಬಾರದು, ಇತ್ಯಾದಿ” ನಿಯಮಗಳ ಸತ್ಯತೆಯನ್ನು ನಮ್ಮ ಮಾನವ ಬುದ್ಧಿಯಿಂದಲೇ ಅರ್ಥಮಾಡಿಕೊಳ್ಳಬಹುದು ಎಂಬುದು. ಎರಡನೆಯದಾಗಿ, ಅನೇಕ ಆರಾಧನಾ ವಿಧಿನಿಯಮಗಳನ್ನು ರೂಪಿಸಿ ಆಚರಿಸಲಾಗುತ್ತಿತ್ತು; ಅವು ಆರಾಧನೆಯಲ್ಲಿ ಮುಂದೆ ದೊರೆಯಲಿದ್ದ ಅಂತಿಮ ನೆರವೇರಿಕೆಗೆ ಸಿದ್ಧತೆಯೂ ಪೂರ್ವಸೂಚನೆಯೂ ಆಗಿದ್ದವು. ಆ ನೆರವೇರಿಕೆಯು ಈಗ ಧರ್ಮಸಭೆಯ ಸಂಸ್ಕಾರಮಯ ಜೀವನದಲ್ಲಿ ಕಂಡುಬರುತ್ತದೆ. ಮೂರನೆಯದಾಗಿ, ನಿತ್ಯಜೀವನಕ್ಕೆ ನಿರ್ದಿಷ್ಟ ಮಾರ್ಗದರ್ಶನ ನೀಡುವ ವಿವಿಧ ಕಾನೂನು ನಿಯಮಗಳಿದ್ದವು. ಈ ನಿಯಮಗಳಲ್ಲಿ ಆಹಾರ, ಇತರರೊಂದಿಗಿನ ಸಂಬಂಧಗಳು, ಪರದೇಶಿಯರನ್ನು ಹೇಗೆ ನಡೆಸಿಕೊಳ್ಳಬೇಕು, ಶುದ್ಧೀಕರಣಗಳು, ಪಾತ್ರೆಗಳ ಶುದ್ಧೀಕರಣ, ದಶಮಾಂಶ ನೀಡುವುದು ಮತ್ತು ಇನ್ನೂ ಅನೇಕ ವಿಷಯಗಳ ಕುರಿತು ಸೂಚನೆಗಳಿವೆ.

ಇಂದಿನ ಸುವಾರ್ತೆಯಲ್ಲಿ ಯೇಸು ಮುಖ್ಯವಾಗಿ ಎರಡು ವಿಷಯಗಳನ್ನು ಹೇಳುತ್ತಾರೆ. ಮೊದಲನೆಯದಾಗಿ, ಕಾನೂನುಸಂಬಂಧಿ ಮತ್ತು ಆರಾಧನಾವಿಧಿ ಸಂಬಂಧಿ ನಿಯಮಗಳ ಕುರಿತು, ತಾವು ಅವುಗಳನ್ನು “ನೆರವೇರಿಸಲು” ಬಂದಿರುವುದಾಗಿ ಹೇಳುತ್ತಾರೆ. ಹೀಗಾಗಿ, ಕ್ರೈಸ್ತರು ಇನ್ನು ಮುಂದೆ ಹಳೆಯ ಒಡಂಬಡಿಕೆಯ ಈ ಕಾನೂನುಸಂಬಂಧಿ ಮತ್ತು ಆರಾಧನಾವಿಧಿ ಸಂಬಂಧಿ ನಿಯಮಗಳಿಗೆ ಬದ್ಧರಲ್ಲ; ಏಕೆಂದರೆ ಈಗ ನಾವು ಅವೆಲ್ಲವನ್ನೂ ಇನ್ನೂ ಉನ್ನತ ಮಟ್ಟದಲ್ಲಿ ನೆರವೇರಿಸಲು ಕರೆಯಲ್ಪಟ್ಟಿದ್ದೇವೆ. ಆದರೆ ನೈತಿಕ ನಿಯಮಗಳ ವಿಷಯದಲ್ಲಿ, ವಿಶೇಷವಾಗಿ ದಶಾಜ್ಞೆಗಳಲ್ಲಿ ಕಂಡುಬರುವ ನಿಯಮಗಳಲ್ಲಿ, ಬೋಧಿಸಲಾದ ಒಂದೇ ಒಂದು ನಿಯಮವೂ ರದ್ದಾಗುವುದಿಲ್ಲ. ಬದಲಾಗಿ, ಈ ಆಜ್ಞೆಗಳಿಗೆ ಇನ್ನಷ್ಟು ಆಳವಾದ ಅರ್ಥ ನೀಡಲಾಗುತ್ತದೆ, ಮತ್ತು ನೈತಿಕ ಪರಿಪೂರ್ಣತೆಗೆ ಇರುವ ಕರೆ ಈಗ ಇನ್ನಷ್ಟು ಸ್ಪಷ್ಟವಾಗಿದೆ. ಈ ಕಾರಣದಿಂದಲೇ ಯೇಸು ಮುಂದುವರಿದು ಹೀಗೆ ಹೇಳುತ್ತಾರೆ: “ಆದ್ದರಿಂದ, ಈ ಆಜ್ಞೆಗಳಲ್ಲಿ ಅತಿ ಚಿಕ್ಕದಾದ ಒಂದನ್ನಾದರೂ ಮೀರಿ, ಇತರರಿಗೂ ಹಾಗೆಯೇ ಮಾಡಲು ಕಲಿಸುವವನು ಸ್ವರ್ಗರಾಜ್ಯದಲ್ಲಿ ಅತಿ ಚಿಕ್ಕವನೆಂದು ಕರೆಯಲ್ಪಡುವನು. ಆದರೆ ಈ ಆಜ್ಞೆಗಳನ್ನು ಪಾಲಿಸಿ, ಇತರರಿಗೂ ಕಲಿಸುವವನು ಸ್ವರ್ಗರಾಜ್ಯದಲ್ಲಿ ಅತಿ ದೊಡ್ಡವನೆಂದು ಕರೆಯಲ್ಪಡುವನು.”

ಕ್ರಿಸ್ತನ ಕಾಲಕ್ಕಿಂತ ಮೊದಲು ಜೀವಿಸಿದ್ದವರಿಗೆ, ಇಂದು ನಮಗಿರುವ ಅದೇ ಮಾನದಂಡ ಅನ್ವಯವಾಗಿರಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಏಕೆಂದರೆ ಶಿಲುಬೆಯ ಮೂಲಕ ಗಳಿಸಲಾದ ಮತ್ತು ಪವಿತ್ರಾತ್ಮರಿಂದ ದಯಪಾಲಿಸಲಾಗುವ ಅನುಗ್ರಹದ ವರ ಅವರಿಗೆ ದೊರೆತಿರಲಿಲ್ಲ. ಇಂದು ನಮಗೆ ಎಷ್ಟೋ ಹೆಚ್ಚಾಗಿ ದೊರೆತಿದೆ; ಆ ಕಾರಣದಿಂದ ನಾವು ಇನ್ನೂ ಉನ್ನತವಾದ ಪವಿತ್ರ ಜೀವನಕ್ಕೆ ಕರೆಯಲ್ಪಟ್ಟಿದ್ದೇವೆ. ಉದಾಹರಣೆಗೆ, ಇಸ್ರಾಯೇಲರನ್ನು ಈಜಿಪ್ಟಿನವರ ದಾಸ್ಯದಿಂದ ಬಿಡುಗಡೆಗೊಳಿಸುವ ಮೂಲಕ ದೇವರು ಮಾಡಿದ ಕಾರ್ಯದ ಕೇವಲ ಸ್ಮರಣೆಯಾಗಿ ನಾವು ಇನ್ನು ಪಾಸ್ಕ ಹಬ್ಬವನ್ನು ಆಚರಿಸುವುದಿಲ್ಲ. ಇಂದು ನಾವು ಪವಿತ್ರ ಪರಮಪ್ರಸಾದದಲ್ಲಿ ಭಾಗವಹಿಸುವ ಮೂಲಕ ಹೊಸ ಪಾಸ್ಕವನ್ನು ಆಚರಿಸುತ್ತೇವೆ; ನಮ್ಮ “ಸ್ಮರಣೆ” ಹಳೆಯ ಘಟನೆಯೊಂದನ್ನು ಕೇವಲ ನೆನಪಿಸಿಕೊಳ್ಳುವುದನ್ನು ಮೀರಿದೆ. ನಮ್ಮ ಸ್ಮರಣೆಯು ಕ್ರಿಸ್ತನ ರಕ್ಷಣಾದಾಯಕ ಬಲಿದಾನದಲ್ಲಿ ನಿಜವಾಗಿಯೂ ಭಾಗವಹಿಸಲು ನಮಗೆ ಅನುವು ಮಾಡಿಕೊಡುತ್ತದೆ. ಪ್ರತಿಬಾರಿ ನಾವು ದಿವ್ಯಬಲಿಯನ್ನು ಆಚರಿಸುವಾಗ ಆ ನೈಜ ಘಟನೆಯಲ್ಲಿ ಭಾಗವಹಿಸುತ್ತೇವೆ ಮತ್ತು ಶಿಲುಬೆಯ ಮೇಲೆ ಗಳಿಸಲಾದ ಅನುಗ್ರಹಕ್ಕೆ ಪಾಲುದಾರರಾಗುತ್ತೇವೆ. ಹಳೆಯ ಒಡಂಬಡಿಕೆಯ ನೈತಿಕ ನಿಯಮಗಳ ವಿಷಯದಲ್ಲಿ, ಅವು ನೈತಿಕತೆಯ ಕನಿಷ್ಠ ಮಾನದಂಡವಾಗುತ್ತವೆ. ಈಗ ಅದರ ಉನ್ನತ ಮಟ್ಟವು ಇನ್ನೂ ಬಹಳ ಎತ್ತರದಲ್ಲಿದೆ. ನಾವು ನಮ್ಮ ಶತ್ರುಗಳನ್ನು ಪ್ರೀತಿಸಬೇಕು ಮತ್ತು ನಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಬೇಕು. ನಾವು ಇತರರಿಗಾಗಿ ನಮ್ಮ ಪ್ರಾಣವನ್ನು ಅರ್ಪಿಸಬೇಕು ಮತ್ತು ಯೇಸುವನ್ನು ಹಿಂಬಾಲಿಸಲು ಪ್ರತಿದಿನ ನಮ್ಮ ಶಿಲುಬೆಗಳನ್ನು ಹೊತ್ತುಕೊಳ್ಳಬೇಕು. ನಾವು ತ್ಯಾಗಮಯ ಪ್ರೀತಿಯ ಪರಿಪೂರ್ಣತೆಗೆ ಕರೆಯಲ್ಪಟ್ಟಿದ್ದೇವೆ; ನಮ್ಮ ಪ್ರಭುವಾದ ಕ್ರಿಸ್ತನ ಜೀವನ, ಮರಣ ಮತ್ತು ಪುನರುತ್ಥಾನದಲ್ಲಿಯೇ ಪಾಲ್ಗೊಳ್ಳುವ ಮೂಲಕ ಮಾತ್ರ ಅದು ಸಾಧ್ಯ.

ನಮ್ಮ ಪ್ರಭು ನಿಮಗೆ ನೀಡಿರುವ ಅತ್ಯುನ್ನತ ಕರೆಯ ಕುರಿತು ಇಂದು ಚಿಂತಿಸಿ. ನಮ್ಮ ಆರಾಧನೆ ಮತ್ತು ನೈತಿಕ ಜೀವನದಲ್ಲಿ ಕೇವಲ ಅತ್ಯಗತ್ಯವಾದ ಕನಿಷ್ಠವನ್ನು ಮಾಡಿದರೆ ಸಾಲದು. ಹಾಗೆ ಮಾಡುವುದರಿಂದ ನೀವು “ಸ್ವರ್ಗರಾಜ್ಯದಲ್ಲಿ ಅತಿ ಚಿಕ್ಕವರಾಗಿ” ಇರಲು ಸಾಧ್ಯವಾಗಬಹುದು; ಆದರೆ ನೀವು ತಮ್ಮ ಮಹಿಮೆಯಲ್ಲಿ ಪಾಲ್ಗೊಳ್ಳಬೇಕೆಂದು ದೇವರು ಬಯಸುತ್ತಾರೆ. “ಸ್ವರ್ಗರಾಜ್ಯದಲ್ಲಿ ಅತಿ ದೊಡ್ಡವರ” ಪೈಕಿ ನೀವೂ ಒಬ್ಬರಾಗಿರಲು ಅವರು ನಿಮ್ಮನ್ನು ಕರೆಯುತ್ತಾರೆ. ನಿಮಗೆ ದೊರೆತಿರುವ ಉನ್ನತ ಕರೆಯನ್ನು ನೀವು ಅರ್ಥಮಾಡಿಕೊಂಡಿದ್ದೀರಾ? ಪವಿತ್ರತೆಯ ಪರಿಪೂರ್ಣತೆಯೇ ನಿಮ್ಮ ಗುರಿಯಾಗಿದೆಯೇ? ಕ್ರಿಸ್ತನ ಹೊಸ ಧರ್ಮಶಾಸ್ತ್ರದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಲು ನಿಮ್ಮನ್ನು ಸಮರ್ಪಿಸಿಕೊಳ್ಳಿ; ಹಾಗೆ ಮಾಡಿದ್ದಕ್ಕಾಗಿ ನೀವು ನಿತ್ಯವೂ ಕೃತಜ್ಞರಾಗಿರುವಿರಿ.

ನನ್ನ ಅತ್ಯಂತ ಮಹಿಮಾಮಯ ಪ್ರಭುವೇ, ನಮ್ಮ ಜೀವನವನ್ನು ಅನುಗ್ರಹ ಮತ್ತು ಪಾವಿತ್ರ್ಯದ ಪರಿಪೂರ್ಣತೆಗೆ ತರಲು ನೀವು ಬಂದಿರಿ. ನೀವು ನಮ್ಮನ್ನು ಸ್ವರ್ಗದ ಉನ್ನತಿಗೆ ಕರೆಯುತ್ತೀರಿ. ಪ್ರಿಯ ಪ್ರಭುವೇ, ನನ್ನ ಉನ್ನತ ಕರೆಯನ್ನು ಅರಿತುಕೊಳ್ಳಲು ಮತ್ತು ಅನುಗ್ರಹ ಹಾಗೂ ಕರುಣೆಯ ನಿಮ್ಮ ಹೊಸ ನಿಯಮದ ಮೂಲಕ ನೀವು ಈಗ ಆಜ್ಞಾಪಿಸುವುದೆಲ್ಲವನ್ನೂ ಸ್ವೀಕರಿಸಲು ಶ್ರದ್ಧೆಯಿಂದ ಶ್ರಮಿಸಲು ನನಗೆ ಸಹಾಯಮಾಡಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.


ಕೋಪದ ಹೊರೆ

ಸಾಮಾನ್ಯ ಕಾಲದ ಹತ್ತನೇ ವಾರದ ಗುರುವಾರ

“ನಿಮ್ಮ ಪೂರ್ವಜರಿಗೆ ಹೀಗೆ ಹೇಳಿದ್ದನ್ನು ನೀವು ಕೇಳಿದ್ದೀರಿ: ನೀನು ಕೊಲೆ ಮಾಡಬಾರದು; ಕೊಲೆ ಮಾಡುವವನು ನ್ಯಾಯತೀರ್ಪಿಗೆ ಒಳಗಾಗುವನು. ಆದರೆ ನಾನು ನಿಮಗೆ ಹೇಳುತ್ತೇನೆ: ತನ್ನ ಸಹೋದರನ ಮೇಲೆ ಕೋಪಗೊಳ್ಳುವವನು ನ್ಯಾಯತೀರ್ಪಿಗೆ ಒಳಗಾಗುವನು; ತನ್ನ ಸಹೋದರನನ್ನು ರಾಕಾ ಎಂದು ಕರೆಯುವವನು ಸನ್ಹೆದ್ರಿನ್ ಮಹಾಸಭೆಯ ಮುಂದೆ ಉತ್ತರಿಸಬೇಕಾಗುವುದು; ‘ಮೂರ್ಖನೇ’ ಎಂದು ಕರೆಯುವವನು ಅಗ್ನಿಮಯ ಗೆಹೆನ್ನಕ್ಕೆ ಗುರಿಯಾಗುವನು.” ಮತ್ತಾಯ 5:21–22

ಮೇಲೆ ಉಲ್ಲೇಖಿಸಿದ ವಾಕ್ಯಭಾಗವು ನಾವು ಮತ್ತೊಬ್ಬರ ವಿರುದ್ಧ ಎಸಗುವ ಪಾಪದ ಮೂರು ಹಂತಗಳನ್ನು ತಿಳಿಸುತ್ತದೆ; ಒಂದಕ್ಕಿಂತ ಇನ್ನೊಂದು ಹೆಚ್ಚು ಗಂಭೀರವಾಗಿದೆ. ಈ ಪಾಪಗಳ ಕುರಿತ ಬೋಧನೆಗಳು ಹಳೆಯ ಒಡಂಬಡಿಕೆಯಲ್ಲಿ ಇಲ್ಲದ ಹೊಸ ಬೋಧನೆಗಳಾಗಿದ್ದವು. ಈ ಬೋಧನೆಯ ಮೂಲಕ, ಆಮೂಲಾಗ್ರ ಪವಿತ್ರತೆಗೂ ನೆರೆಯವರ ಪ್ರೀತಿಗೂ ಯೇಸು ನೀಡುವ ಕರೆ ಬಹಳ ಸ್ಪಷ್ಟವಾಗುತ್ತದೆ.

ಪಾಪದ ಮೊದಲ ಹಂತವೆಂದರೆ ಮನಸ್ಸಿನೊಳಗೆ “ಕೋಪಗೊಳ್ಳುವುದು.” ಕೋಪವೆಂಬ ಪಾಪವು ಮತ್ತೊಬ್ಬರ ಬಗ್ಗೆ ಮನಸ್ಸಿನಲ್ಲಿ ಅಸಹ್ಯಭಾವವನ್ನು ಹೊಂದಿರುವುದಾಗಿದೆ. ಮತ್ತೊಬ್ಬರ ಮೇಲೆ ಕೋಪವನ್ನು ಇಟ್ಟುಕೊಳ್ಳುವುದರ ಪರಿಣಾಮವಾಗಿ ನೀವು “ನ್ಯಾಯತೀರ್ಪಿಗೆ ಒಳಗಾಗುವಿರಿ” ಎಂದು ಯೇಸು ಹೇಳುತ್ತಾರೆ. ಪಾಪದ ಎರಡನೆಯ ಹಂತವೆಂದರೆ ನೀವು ಮತ್ತೊಬ್ಬರನ್ನು “ರಾಕಾ” ಎಂದು ಕರೆಯುವುದು. ಈ ಅರಮಾಯಿಕ್ ಪದವನ್ನು ಅನುವಾದಿಸುವುದು ಕಷ್ಟ; ಆದರೆ ಮತ್ತೊಬ್ಬರ ಮೇಲಿನ ಕೋಪವನ್ನು ಯಾವುದೋ ರೀತಿಯಲ್ಲಿ ವ್ಯಕ್ತಪಡಿಸುವುದು ಇದರಲ್ಲಿ ಒಳಗೊಂಡಿರುತ್ತದೆ. ಮತ್ತೊಬ್ಬರಿಗೆ ಬುದ್ಧಿಯಿಲ್ಲ ಅಥವಾ ಅವರು ಕೀಳುಮಟ್ಟದವರು ಎಂದು ಅವಹೇಳನಕಾರಿಯಾಗಿ ಹೇಳುವುದೇ ಇದರ ಅರ್ಥ. ಯೇಸು ಗುರುತಿಸುವ ಪಾಪದ ಮೂರನೆಯ ಹಂತವೆಂದರೆ ಮತ್ತೊಬ್ಬರನ್ನು “ಮೂರ್ಖ” ಎಂದು ಕರೆಯುವುದು. ಈ ಪದವು ರಾಕಾ ಎಂಬುದಕ್ಕಿಂತಲೂ ಹೆಚ್ಚು ತೀವ್ರವಾದ ಅಭಿವ್ಯಕ್ತಿಯಾಗಿದೆ. ಅದು ಆ ವ್ಯಕ್ತಿಯು ನೈತಿಕವಾಗಿ ದಾರಿತಪ್ಪಿದ ಆತ್ಮ ಎಂಬುದನ್ನು ಸೂಚಿಸುವ ಮೌಖಿಕ ನಿಂದನೆಯಾಗಿದೆ. ಇದು ಮತ್ತೊಬ್ಬರ ನೈತಿಕತೆಯ ಬಗ್ಗೆ ವ್ಯಕ್ತಪಡಿಸುವ ತೀವ್ರ ಖಂಡನೆಯಾಗಿದೆ.

ಹಾಗಾದರೆ, ನೀವು ಕೋಪದೊಂದಿಗೆ ಹೋರಾಡುತ್ತಿದ್ದೀರಾ? ಈ ಪಾಪದ ಎಲ್ಲ ಹಂತಗಳಿಂದಲೂ ಮುಕ್ತರಾಗಬೇಕೆಂಬ ಯೇಸುವಿನ ಕರೆ ಉನ್ನತವಾದುದು. ಜೀವನದಲ್ಲಿ ಅನೇಕ ಬಾರಿ ಯಾವುದೋ ಒಂದು ಕಾರಣದಿಂದ ನಮ್ಮಲ್ಲಿ ಕೋಪದ ಆವೇಶ ಎದ್ದೇಳುತ್ತದೆ; ಆ ಆವೇಶವು ಈ ಪಾಪದ ಹಂತಗಳಲ್ಲಿ ಒಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ನಾವು ಯಾರ ಮೇಲೆ ಕೋಪಗೊಂಡಿದ್ದೇವೋ ಅವರನ್ನು ಸಾಧ್ಯವಾದಷ್ಟು ಕಟುವಾಗಿ ಖಂಡಿಸಬೇಕೆಂದು ಬಯಸುವುದು ಸಾಮಾನ್ಯವಾದ ಒಂದು ಶೋಧನೆಯಾಗಿದೆ. 

ಯೇಸುವಿನ ಈ ಹೊಸ ಬೋಧನೆಯನ್ನು ಅರ್ಥಮಾಡಿಕೊಂಡು ಸ್ವೀಕರಿಸಿದಾಗ, ಅದು ನಿಜವಾಗಿಯೂ ಹೊರೆಯಲ್ಲ ಎಂಬುದನ್ನು ತಿಳಿಯುವುದು ಮುಖ್ಯ. ಕೋಪಕ್ಕೆ ವಿರುದ್ಧವಾದ ನಮ್ಮ ಪ್ರಭುವಿನ ಈ ನಿಯಮಗಳು ಮೊದಲಿಗೆ ನಕಾರಾತ್ಮಕವಾಗಿ ಕಾಣಬಹುದು. ಏಕೆಂದರೆ ಮತ್ತೊಬ್ಬರ ಮೇಲೆ ರೇಗಾಡುವುದು ಹುಸಿಯಾದ ತೃಪ್ತಿಯನ್ನು ನೀಡುತ್ತದೆ; ನಮ್ಮ ಪ್ರಭುವಿನ ಈ ಆಜ್ಞೆಗಳು ಒಂದರ್ಥದಲ್ಲಿ ಆ ತೃಪ್ತಿಯನ್ನು ನಮ್ಮಿಂದ “ಕಸಿದುಕೊಳ್ಳುತ್ತವೆ.” ಅಸ್ತವ್ಯಸ್ತವಾದ ಕೋಪವು ಮಾಯವಾಗುವಷ್ಟರ ಮಟ್ಟಿಗೆ ಕ್ಷಮಿಸಬೇಕೆಂಬ ನೈತಿಕ ಕರ್ತವ್ಯವನ್ನು ನೆನಸಿಕೊಳ್ಳುವುದು ಮನಸ್ಸನ್ನು ಕುಗ್ಗಿಸುವ ವಿಚಾರವೆನಿಸಬಹುದು. ಆದರೆ ಅದು ನಿಜವಾಗಿಯೂ ಮನಸ್ಸನ್ನು ಕುಗ್ಗಿಸುವಂಥದ್ದೇ? ನಮ್ಮ ಪ್ರಭುವಿನ ಈ ನಿಯಮವು ಹೊರೆಯೇ?

ಇದರ ಆಳವಾದ ಸತ್ಯವೇನೆಂದರೆ, ಈ ವಾಕ್ಯಭಾಗದಲ್ಲಿ ಯೇಸು ನಮಗೆ ಕಲಿಸುವುದು ಅನೇಕ ರೀತಿಗಳಲ್ಲಿ ಇತರರ ಒಳಿತಿಗಿಂತಲೂ ಹೆಚ್ಚಾಗಿ ನಮ್ಮ ಸ್ವಂತ ಒಳಿತಿಗಾಗಿಯೇ ಇದೆ. ಮತ್ತೊಬ್ಬರ ಮೇಲಿನ ನಮ್ಮ ಕೋಪವು ಮನಸ್ಸಿನೊಳಗೇ ಇರಲಿ, ಮಾತಿನ ನಿಂದನೆಯಾಗಿ ಹೊರಹೊಮ್ಮಲಿ ಅಥವಾ ಸಂಪೂರ್ಣ ಖಂಡನೆಯಾಗಿರಲಿ, ಅದು ನಾವು ಯಾರ ಮೇಲೆ ಕೋಪಗೊಂಡಿದ್ದೇವೋ ಅವರನ್ನು ನೋಯಿಸಬಹುದು. ಆದರೆ ಈ ರೀತಿಯ ಕೋಪಗಳಿಂದ ಅವರಿಗಿಂತಲೂ ನಮಗೇ ಬಹಳ ಹೆಚ್ಚಿನ ಹಾನಿಯಾಗುತ್ತದೆ. ಹೊರಗೆ ನಗುನಗುತ್ತಾ ಕಂಡರೂ, ಮನಸ್ಸಿನೊಳಗೆ ಮಾತ್ರ ಕೋಪವಿಟ್ಟುಕೊಂಡಿದ್ದರೂ, ಅದು ನಮ್ಮ ಆತ್ಮಕ್ಕೂ ದೇವರೊಂದಿಗೆ ಒಂದಾಗುವ ನಮ್ಮ ಸಾಮರ್ಥ್ಯಕ್ಕೂ ದೊಡ್ಡ ಹಾನಿಯನ್ನುಂಟುಮಾಡುತ್ತದೆ. ಆದ್ದರಿಂದ ಕೋಪದ ಕುರಿತ ನಮ್ಮ ಪ್ರಭುವಿನ ಈ ಹೊಸ ನಿಯಮವು ಹೊರೆಯಲ್ಲ; ಕೋಪವೇ ಭಾರವಾದ ಹೊರೆಯಾಗಿದೆ. ಆ ಹೊರೆಯಿಂದ ನಿಮ್ಮನ್ನು ಮುಕ್ತಗೊಳಿಸಲು ಯೇಸು ಬಯಸುತ್ತಾರೆ.

ಇಂದು ಕೋಪವೆಂಬ ಪಾಪದ ಬಗ್ಗೆ ಚಿಂತಿಸಿ. ಹಾಗೆ ಮಾಡುವಾಗ, ನೀವು ಯಾರ ಮೇಲೆ ಕೋಪಗೊಂಡಿದ್ದೀರೋ ಆ ವ್ಯಕ್ತಿಯ ಬದಲಾಗಿ ನಿಮ್ಮ ಅಸ್ತವ್ಯಸ್ತವಾದ ಕೋಪವನ್ನೇ ನಿಜವಾದ ಶತ್ರುವಾಗಿ ನೋಡಲು ಪ್ರಯತ್ನಿಸಿ. ಆತ್ಮದ ಈ ಶತ್ರುವಿನಿಂದ ನಿಮ್ಮನ್ನು ಮುಕ್ತಗೊಳಿಸುವಂತೆ ನಮ್ಮ ಪ್ರಭುವಿಗೆ ಪ್ರಾರ್ಥಿಸಿ; ಅವರು ನಿಮಗೆ ದಯಪಾಲಿಸಲು ಬಯಸುವ ಸ್ವಾತಂತ್ರ್ಯವನ್ನು ಅರಸಿರಿ.

ನನ್ನ ಕರುಣಾಮಯ ಪ್ರಭುವೇ, ನಮಗೆ ಹೊರೆಯಾಗಿರುವ ಎಲ್ಲದರಿಂದಲೂ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಲು ನೀವು ನಮ್ಮನ್ನು ಕರೆಯುತ್ತೀರಿ. ಕೋಪವು ನಮಗೆ ಹೊರೆಯಾಗುತ್ತದೆ. ನನ್ನ ಕೋಪವು ನನ್ನ ಮೇಲೆ ಹೇರುವ ಹೊರೆಯನ್ನು ಅರಿತುಕೊಳ್ಳಲು ಮತ್ತು ಕ್ಷಮೆ ಹಾಗೂ ಸಮಾಧಾನದ ಮೂಲಕ ನಿಜವಾದ ಸ್ವಾತಂತ್ರ್ಯವನ್ನು ಹುಡುಕಲು ನನಗೆ ಸಹಾಯಮಾಡಿ. ಪ್ರಿಯ ಪ್ರಭುವೇ, ನನ್ನನ್ನು ನೋಯಿಸಿದ ಎಲ್ಲರನ್ನೂ ನಾನು ಕ್ಷಮಿಸುವಂತೆ, ದಯವಿಟ್ಟು ನನ್ನನ್ನು ಕ್ಷಮಿಸಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಟ್ಟಿದ್ದೇನೆ.


ಸ್ನೇಹದ ಪ್ರೀತಿ

ಸಾಮಾನ್ಯ ಕಾಲದ ಹತ್ತನೆಯ ವಾರದ ಶುಕ್ರವಾರ

ನಿನ್ನ ಬಲಗಣ್ಣು ನೀನು ಪಾಪಮಾಡಲು ಕಾರಣವಾದರೆ, ಅದನ್ನು ಕಿತ್ತು ಬಿಸಾಡು. ನಿನ್ನ ಇಡೀ ದೇಹವು ಗೆಹೆನ್ನಾಕ್ಕೆ ಎಸೆಯಲ್ಪಡುವುದಕ್ಕಿಂತ ನಿನ್ನ ಅಂಗಗಳಲ್ಲಿ ಒಂದನ್ನು ಕಳೆದುಕೊಳ್ಳುವುದು ನಿನಗೆ ಮೇಲು. ನಿನ್ನ ಬಲಗೈ ನೀನು ಪಾಪಮಾಡಲು ಕಾರಣವಾದರೆ, ಅದನ್ನು ಕಡಿದು ಬಿಸಾಡು. ನಿನ್ನ ಇಡೀ ದೇಹವು ಗೆಹೆನ್ನಾಕ್ಕೆ ಹೋಗುವುದಕ್ಕಿಂತ ನಿನ್ನ ಅಂಗಗಳಲ್ಲಿ ಒಂದನ್ನು ಕಳೆದುಕೊಳ್ಳುವುದು ನಿನಗೆ ಮೇಲು. ಮತ್ತಾಯ 5:29–30

ಕಣ್ಣನ್ನು ಕಿತ್ತುಹಾಕುವುದು ಮತ್ತು ಕೈಯನ್ನು ಕಡಿದುಹಾಕುವುದು ಎಂಬ ಈ ಚಿತ್ರಣವು ನಮ್ಮ ಗಮನವನ್ನು ಸೆಳೆಯುವ ಉದ್ದೇಶವನ್ನು ಹೊಂದಿದೆ ಎಂಬುದು ಸ್ಪಷ್ಟ. ನಮ್ಮ ದೇಹಗಳನ್ನು ಅಂಗವಿಕಲಗೊಳಿಸಿಕೊಳ್ಳುವಂತೆ ಯೇಸು ನಿಜವಾಗಿಯೂ ಸೂಚಿಸುತ್ತಿಲ್ಲ ಎಂಬುದರಲ್ಲಿ ನಮಗೆ ಖಚಿತತೆಯಿದ್ದರೂ, ಯೇಸು ಹೇಳುತ್ತಿರುವ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಈ ಚಿತ್ರಣವನ್ನು ಪ್ರಾರ್ಥನಾಪೂರ್ವಕವಾಗಿ ಮನನಮಾಡಲು ನಾವು ಹಿಂಜರಿಯಬಾರದು.

ಸಂತ ಅಗಸ್ಟೀನ್ ಈ ವಾಕ್ಯಭಾಗವನ್ನು ಕುರಿತು ಚಿಂತಿಸುತ್ತಾ ಹೀಗೆ ಹೇಳುತ್ತಾರೆ: “ಕಣ್ಣು ಎಂದರೆ ನಮ್ಮ ಅತ್ಯಂತ ಪ್ರೀತಿಪಾತ್ರ ಸ್ನೇಹಿತ ಎಂದು ನಾವು ಅರ್ಥಮಾಡಿಕೊಳ್ಳಬೇಕು…” “ಹೆಚ್ಚಿನ ಮಟ್ಟದ ಪ್ರೀತಿಯನ್ನು” ಹೊಂದಿರುವ ಸ್ನೇಹಗಳನ್ನು ಸೂಚಿಸುವುದಕ್ಕಾಗಿ ಯೇಸು ನಿರ್ದಿಷ್ಟವಾಗಿ “ಬಲಗಣ್ಣು” ಎಂದು ಹೇಳುತ್ತಾರೆ ಎಂಬುದನ್ನೂ ಅಗಸ್ಟೀನ್ ತಿಳಿಸುತ್ತಾರೆ (Serm. in Mont. i. 13.). ಹೀಗಾಗಿ, ಸ್ನೇಹವು—ವಿಶೇಷವಾಗಿ ಅತ್ಯಂತ ಆಪ್ತ ಸ್ನೇಹವು—ಒಂದು ಕೊಡುಗೆಯಾಗಿದ್ದರೂ, ಕೆಲವೊಮ್ಮೆ ನಮಗೆ ಆಪ್ತರಾದವರು ಪಾಪಕ್ಕೆ ಕಾರಣವಾಗಬಹುದು ಅಥವಾ ಪಾಪಕ್ಕೆ ಸಂದರ್ಭವಾಗಬಹುದು. ಅಂಥ ಸಂದರ್ಭದಲ್ಲಿ ಅವರು ನಿಜವಾದ ಸ್ನೇಹಿತರಲ್ಲ; ಆ ಸಂಬಂಧವು ನಮ್ಮನ್ನು ಪಾಪದ ಕಡೆಗೆ ಕರೆದೊಯ್ಯಲು ಬಿಡುವುದಕ್ಕಿಂತ, ಅದನ್ನು ಮಿತಿಗೊಳಿಸುವುದು ಅಥವಾ ಕೊನೆಗೊಳಿಸುವುದೇ ಉತ್ತಮವಾಗಿರಬಹುದು.

ನಿಮ್ಮ ಜೀವನದಲ್ಲಿರುವ ಜನರ ಬಗ್ಗೆ ಯೋಚಿಸಿ. ನಾವು ಎಲ್ಲ ಜನರನ್ನೂ ದೇವರ ಪ್ರೀತಿಯಿಂದ ಪ್ರೀತಿಸಬೇಕಾದರೂ, ಸ್ನೇಹವು ಪ್ರೀತಿಗಿಂತ ಹೆಚ್ಚಿನದಾಗಿದೆ. ಸ್ನೇಹವು ಇನ್ನೊಬ್ಬರೊಂದಿಗೆ ವಿಶೇಷ ಬಂಧವನ್ನು ಸ್ಥಾಪಿಸುತ್ತದೆ ಮತ್ತು ನಿಮ್ಮ ಜೀವನದಲ್ಲಿ ಅವರ ಸಾನ್ನಿಧ್ಯ ಹಾಗೂ ಪ್ರಭಾವಕ್ಕೆ ನಿಮ್ಮನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ನೀವು ಸ್ನೇಹವನ್ನು ಬೆಳೆಸಿಕೊಂಡಾಗ, ನಿಮ್ಮ ಜೀವನದ ಮೇಲೆ ಒಂದು ನಿರ್ದಿಷ್ಟ ಮಟ್ಟದ ಪ್ರಭಾವ ಬೀರಲು ಇನ್ನೊಬ್ಬರಿಗೆ ಅವಕಾಶ ನೀಡುತ್ತೀರಿ. ಆ ಪ್ರಭಾವವು ಒಳ್ಳೆಯದಾಗಿದ್ದಾಗ, ಆ ಸ್ನೇಹವು ಅನೇಕ ಒಳ್ಳೆಯ ಫಲಗಳನ್ನು ನೀಡುತ್ತದೆ. ಆದರೆ ಆ ಪ್ರಭಾವವು ಕೆಟ್ಟದಾಗಿದ್ದಾಗ, ಆ ಸ್ನೇಹವು ನಿಮ್ಮ ಆತ್ಮದ ಒಳಿತಿಗೆ ಅಪಾಯವಾಗುತ್ತದೆ. ಅಂಥ ಸಂದರ್ಭದಲ್ಲಿ, ನೀವು ಗಂಭೀರ ಪಾಪಕ್ಕೆ ಅಥವಾ ಪಾಪದ ಸಂದರ್ಭಕ್ಕೇ ಎಳೆಯಲ್ಪಡದಂತೆ, ಆ ಸ್ನೇಹವನ್ನು ಕಿತ್ತುಹಾಕುವುದು ಅಥವಾ ಕಡಿದುಹಾಕುವುದು ಅಗತ್ಯವಾಗಬಹುದು.

ನಿಮ್ಮ ಜೀವನದಲ್ಲಿರುವ ಒಬ್ಬ ಸ್ನೇಹಿತರು ನಿಮಗೆ ಪಾಪಕ್ಕೆ ಕಾರಣವಾದಾಗ, ಅವರ ಮೇಲಿನ ನಿಮ್ಮ ಪ್ರೀತಿ ಉಳಿಯಬೇಕು; ಆದರೆ ಆ ಪ್ರೀತಿಯ ರೀತಿಯೂ ಬದಲಾಗಬೇಕು. ಇಂತಹ ಸಂದರ್ಭದಲ್ಲಿ ಪ್ರೀತಿಯು ಪ್ರೀತಿಪೂರ್ವಕವಾದ ತಿದ್ದುವಿಕೆಯ, ನಿಮ್ಮ ಹೃದಯವನ್ನು ಸ್ವಲ್ಪ ಹಿಂದೆಗೆದುಕೊಳ್ಳುವಿಕೆಯ ಅಥವಾ ಅವರೊಂದಿಗಿನ ಒಡನಾಟವನ್ನು ಮಿತಿಗೊಳಿಸುವಿಕೆಯ ರೂಪವನ್ನು ತಳೆಯಬಹುದು. ಆದರೂ ಇದು ಪ್ರೀತಿಯೇ. ಇದೇ ರೀತಿಯಲ್ಲಿ, ಒಬ್ಬ ವ್ಯಕ್ತಿಯು ದೇವರ ವಿರುದ್ಧ ಪಾಪಮಾಡಿದಾಗ, ದೇವರೊಂದಿಗಿನ ಅವರ ಸಂಬಂಧವೂ ಬದಲಾಗುತ್ತದೆ. ದೇವರು ತಮ್ಮ ಸ್ನೇಹವನ್ನು ಹಿಂತೆಗೆದುಕೊಳ್ಳುತ್ತಾರೆ. ಆ ವ್ಯಕ್ತಿಯ ಜೀವನದಲ್ಲಿ ದೇವರ ಸಾನ್ನಿಧ್ಯ ಕಡಿಮೆಯಾಗುತ್ತದೆ; ಅವರ ನಡುವಿನ ಆಂತರಿಕ ಅನ್ಯೋನ್ಯತೆಯೂ ಕ್ಷೀಣಿಸುತ್ತದೆ, ಅಥವಾ ಪಾಪವು ಗಂಭೀರವಾಗಿದ್ದರೆ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ. ಇದು ದೇವರ ಕಡೆಯಿಂದ ಪ್ರೀತಿಯ ಕೊರತೆಯಲ್ಲ; ಇದು ಕೇವಲ ಪಾಪದ ಪರಿಣಾಮವಾಗಿದೆ. ಹಾಗೆಯೇ, ಇತರರೊಂದಿಗಿನ ನಮ್ಮ ಸಂಬಂಧಗಳಲ್ಲಿಯೂ, ಇಬ್ಬರು ವ್ಯಕ್ತಿಗಳ ನಡುವೆ ದೇವರ ಅನುಗ್ರಹವು ಪರಸ್ಪರ ನೀಡಲ್ಪಟ್ಟು ಸ್ವೀಕರಿಸಲ್ಪಡದಿದ್ದಾಗ, ನಿಜವಾದ ಅರ್ಥದಲ್ಲಿ ಸ್ನೇಹವು ಸಾಧ್ಯವಾಗುವುದಿಲ್ಲ. ನಿಜವಾದ ಸ್ನೇಹವು ಯಾವಾಗಲೂ ದೇವರ ಅನುಗ್ರಹವನ್ನು ಕೇಂದ್ರವಾಗಿಟ್ಟುಕೊಂಡು, ಅದನ್ನೇ ಅವಲಂಬಿಸಿರುತ್ತದೆ. ಆದ್ದರಿಂದ, ಒಂದು ಸಂಬಂಧದಿಂದ ದೇವರನ್ನು ಹೊರಗಿಟ್ಟಾಗ, ಆ ಸಂಬಂಧವು ನಿಜವಾದ ಸ್ನೇಹದಿಂದ, ಪಾಪಿಯ ಮೇಲೆ ದೇವರಿಗಿರುವ ಪ್ರೀತಿಯನ್ನು ಅನುಕರಿಸುವ ಸಂಬಂಧವಾಗಿ ಬದಲಾಗಬೇಕು. ಕರುಣೆ, ಸಹಾನುಭೂತಿ ಮತ್ತು ಕ್ಷಮೆಯನ್ನು ನಿರಂತರವಾಗಿ ನೀಡಬೇಕು; ಆದರೆ ಆಂತರಿಕ ಅನ್ಯೋನ್ಯತೆ ಮತ್ತು ಐಕ್ಯತೆ ಕೊನೆಗೊಳ್ಳುತ್ತವೆ. ಆದರೂ ಇದು ಪ್ರೀತಿಯೇ.

ನೀವು ಪ್ರೀತಿಸಲೆಂದು ದೇವರು ನಿಮ್ಮ ಜೀವನದಲ್ಲಿ ನೀಡಿರುವ ಜನರ ಕುರಿತು ಇಂದು ಚಿಂತಿಸಿ. ಮೊದಲು, ದೇವರನ್ನು ಕೇಂದ್ರವಾಗಿಟ್ಟುಕೊಂಡಿರುವ ಸಂಬಂಧಗಳ ಕುರಿತು ಚಿಂತಿಸಿ. ಈ ಸಂಬಂಧಗಳು ನಿಜವಾದ ಸ್ನೇಹಗಳಾಗಿ ಬೆಳೆದು, ನಿಮ್ಮ ಜೀವನದಲ್ಲಿ ಸಮೃದ್ಧವಾದ ಒಳ್ಳೆಯ ಫಲವನ್ನು ನೀಡುತ್ತವೆ. ಈ ಸ್ನೇಹಗಳಲ್ಲಿ ಆನಂದಿಸಿ, ಅವುಗಳಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ. ಎರಡನೆಯದಾಗಿ, ಒಳ್ಳೆಯ ಫಲವನ್ನು ನೀಡದ ಯಾವುದೇ ಸಂಬಂಧದ ಕುರಿತು ಚಿಂತಿಸಿ. ಹೀಗೆ ಮಾಡುವಾಗ, ಆ ಸಂಬಂಧವನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬುದನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿ. ದೇವರು ಆ ಸಂಬಂಧದ ಕೇಂದ್ರವಾಗಿರಲು ಸಾಧ್ಯವಾಗದಿದ್ದರೂ ನೀವು ಒಂದು “ಸ್ನೇಹವನ್ನು” ಉಳಿಸಿಕೊಳ್ಳಲು ಪ್ರಯತ್ನಿಸುತ್ತೀರಾ? ಹಾಗಿದ್ದರೆ, ನಿಮ್ಮ ಮೇಲೆ ಮತ್ತು ನಿಮ್ಮ ಜೀವನದಲ್ಲಿರುವ ಆ ಇನ್ನೊಬ್ಬ ವ್ಯಕ್ತಿಯ ಮೇಲೆ ದೇವರಿಗಿರುವ ಪ್ರೀತಿಯನ್ನು ಆ ಸಂಬಂಧವು ಇನ್ನಷ್ಟು ಪೂರ್ಣವಾಗಿ ಪ್ರತಿಬಿಂಬಿಸುವಂತೆ, ಅದನ್ನು ಬದಲಾಯಿಸಲು ದೇವರು ನಿಮ್ಮನ್ನು ಹೇಗೆ ಕರೆಯುತ್ತಿದ್ದಾರೆ ಎಂಬುದನ್ನು ಮನನ ಮಾಡಿ.

ನನ್ನ ಪ್ರಭುವೇ, ನನ್ನ ನಿಜವಾದ ಮಿತ್ರನೇ, ಪರಿಪೂರ್ಣ ಪ್ರೀತಿಯಿಂದ ನನ್ನನ್ನು ಪ್ರೀತಿಸುವುದಕ್ಕಾಗಿ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮೊಂದಿಗಿನ ನನ್ನ ಐಕ್ಯತೆಯು ಸದಾ ಆಳವಾಗುತ್ತಾ ಹೋಗುವಂತೆ, ನಾನು ಯಾವಾಗಲೂ ಆ ಪ್ರೀತಿಗೆ ತೆರೆದ ಹೃದಯವುಳ್ಳವನಾಗಿರಲು ಪ್ರಾರ್ಥಿಸುತ್ತೇನೆ. ನಾನು ಇತರರಿಗೆ ನಿಮ್ಮ ಪ್ರೀತಿಯ ಸಾಧನವಾಗಿರಲೂ ಪ್ರಾರ್ಥಿಸುತ್ತೇನೆ. ನನ್ನ ಜೀವನದಲ್ಲಿರುವ ಪ್ರತಿಯೊಬ್ಬರನ್ನೂ ನೀವು ಪ್ರೀತಿಸುವ ರೀತಿಯಲ್ಲಿಯೇ, ಅದಕ್ಕಿಂತ ಕಡಿಮೆಯೂ ಅಲ್ಲ, ಹೆಚ್ಚೂ ಅಲ್ಲದಂತೆ ಪ್ರೀತಿಸಲು ದಯವಿಟ್ಟು ನನಗೆ ಅನುಗ್ರಹವನ್ನು ದಯಪಾಲಿಸಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.


ದೈನಂದಿನ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆ

ಸಾಮಾನ್ಯ ಕಾಲದ ಹತ್ತನೆಯ ವಾರದ ಶನಿವಾರ

ಯೇಸು ತಮ್ಮ ಶಿಷ್ಯರಿಗೆ ಹೇಳಿದರು: “ನಿಮ್ಮ ಪೂರ್ವಜರಿಗೆ ಹೀಗೆ ಹೇಳಲಾಗಿತ್ತೆಂದು ನೀವು ಕೇಳಿದ್ದೀರಿ: ಸುಳ್ಳು ಆಣೆ ಇಡಬೇಡ; ಆದರೆ ನೀನು ಮಾಡಿದ ಪ್ರತಿಜ್ಞೆಗಳನ್ನೆಲ್ಲ ಪ್ರಭುವಿಗೆ ಸಲ್ಲಿಸು. ಆದರೆ ನಾನು ನಿಮಗೆ ಹೇಳುವುದೇನೆಂದರೆ, ಆಣೆಯನ್ನೇ ಇಡಬೇಡಿ…” ಮತ್ತಾಯ 5:33–34

ಹೇಳಿದ ಮಾತು ಸತ್ಯವೆಂದು ಖಚಿತಪಡಿಸುವುದೇ ಆಣೆಯ ಉದ್ದೇಶವಾಗಿತ್ತು. ಕೆಲವೊಮ್ಮೆ ಇದು ಬಹಳ ಒಳ್ಳೆಯದಾಗಿರಬಹುದು. ಉದಾಹರಣೆಗೆ, ಅನೇಕ ಸಂಸ್ಕಾರಗಳಲ್ಲಿ ದೇವರ ಮತ್ತು ಧರ್ಮಸಭೆಯ ಸಮ್ಮುಖದಲ್ಲಿ ಬಹಿರಂಗವಾಗಿ ಪ್ರತಿಜ್ಞೆ ಮಾಡುವುದೂ ಸೇರಿದೆ. ಇಂತಹ ಸಂದರ್ಭಗಳಲ್ಲಿ, ಆ ಪ್ರತಿಜ್ಞೆಯು ಆಣೆಯ ಒಂದು ರೂಪವಾಗಿದ್ದು, ದೇವರ ಅನುಗ್ರಹವು ಅದರಲ್ಲಿ ಪ್ರವೇಶಿಸಿ ಅದನ್ನು ಬಲಪಡಿಸುವಂತೆ ಆಹ್ವಾನಿಸಲು ಅದನ್ನು ವಿಧ್ಯುಕ್ತವಾಗಿ ಮಾಡಲಾಗುತ್ತದೆ. ಅದು ಒಬ್ಬರ ವಿಶ್ವಾಸಕ್ಕೆ ಬಹಿರಂಗ ಸಾಕ್ಷಿ ನೀಡುವ ಮಾರ್ಗವಾಗುತ್ತದೆ; ಹಾಗೆಯೇ ಮಾಡಿದ ವಾಗ್ದಾನಕ್ಕೆ ನಿಷ್ಠರಾಗಿರಲು ದೇವರ ಅನುಗ್ರಹ ತಮಗೆ ಅಗತ್ಯವೆಂಬುದನ್ನು ವ್ಯಕ್ತಪಡಿಸುವ ರೀತಿಯೂ ಆಗುತ್ತದೆ.

ಇಂದಿನ ಸುವಾರ್ತೆಯಲ್ಲಿ ಯೇಸು ಇಂತಹ ಬಹಿರಂಗ ಪ್ರತಿಜ್ಞೆಗಳು, ಆಣೆಗಳು ಮತ್ತು ವಾಗ್ದಾನಗಳ ಕುರಿತು ಮಾತನಾಡುತ್ತಿಲ್ಲ. ಬದಲಿಗೆ, ತಾವು ಹೇಳುತ್ತಿರುವುದು ಸತ್ಯವೆಂದು ತೋರಿಸಲು ಪದೇಪದೇ ದೇವರ ಹೆಸರಿನಲ್ಲಿ ಆಣೆ ಇಡುತ್ತಿದ್ದ ಕೆಲವರ ಅಭ್ಯಾಸವನ್ನು ಕುರಿತು ಮಾತನಾಡುತ್ತಿದ್ದಾರೆ. ಇದರಲ್ಲಿರುವ ಸಮಸ್ಯೆಯೆಂದರೆ, ಇದು ಗಂಭೀರವೂ ಪವಿತ್ರವೂ ಆದದ್ದನ್ನು ತೆಗೆದುಕೊಂಡು, ಅಜಾಗರೂಕತೆಯಿಂದ ಸಾಮಾನ್ಯವಾದದ್ದಾಗಿ ಮಾಡುತ್ತದೆ. ತಾವು ಹೇಳುವ ಪ್ರತಿಯೊಂದು ವಿಷಯಕ್ಕೂ “ದೇವರ ಮೇಲೆ ಆಣೆ” ಇಡುವ ಅಗತ್ಯವಿಲ್ಲ.

ಮೊದಲನೆಯದಾಗಿ, ತಾವು ಹೇಳುವ ಮಾತುಗಳು ಸತ್ಯವೆಂದು ಇನ್ನೊಬ್ಬರಿಗೆ ಮನವರಿಕೆ ಮಾಡಿಕೊಡಲು ಪದೇಪದೇ ದೇವರ ಹೆಸರನ್ನು ಬಳಸಬೇಕೆಂದು ಒಬ್ಬರಿಗೆ ಅನಿಸಿದರೆ, ಅವರು ಅಪ್ರಾಮಾಣಿಕತೆಯೊಂದಿಗೆ ಹೋರಾಡುತ್ತಿರುವುದೇ ಅದಕ್ಕೆ ಕಾರಣವಾಗಿರುವ ಸಾಧ್ಯತೆ ಹೆಚ್ಚು. ಪದೇಪದೇ ಆಣೆ ಇಡುವುದು, ಮನುಷ್ಯರಿಗೆ ಸುಳ್ಳು ಹೇಳುವ ಪ್ರವೃತ್ತಿಯಿದೆ ಎಂದು ಮೊದಲೇ ಊಹಿಸಿಕೊಂಡಂತೆ ತೋರುತ್ತದೆ. ಆದ್ದರಿಂದ, ಇಂತಹ ಪೂರ್ವಧಾರಣೆಯೊಂದಿಗೆ ದೈನಂದಿನ ಒಡನಾಟವನ್ನು ನಡೆಸುವುದು ಸೂಕ್ತವಲ್ಲ. ಬದಲಿಗೆ, ಕ್ರೈಸ್ತರಾದ ನಾವು ಸತ್ಯನಿಷ್ಠೆಯನ್ನು ನಮ್ಮ ಮೂಲಭೂತ ಮನೋಭಾವವನ್ನಾಗಿಸಿಕೊಳ್ಳಲು ಶ್ರಮಿಸಬೇಕು. ಯೇಸು ಈ ಸುವಾರ್ತೆಯ ಬೋಧನೆಯನ್ನು ಹೀಗೆ ಹೇಳಿ ಮುಕ್ತಾಯಗೊಳಿಸುತ್ತಾರೆ: “ನಿಮ್ಮ ‘ಹೌದು’ ಎಂದರೆ ‘ಹೌದು’ ಆಗಿರಲಿ; ನಿಮ್ಮ ‘ಇಲ್ಲ’ ಎಂದರೆ ‘ಇಲ್ಲ’ ಆಗಿರಲಿ. ಇದಕ್ಕಿಂತ ಹೆಚ್ಚಿನದು ದುಷ್ಟನಿಂದ ಬರುತ್ತದೆ.” ಬೇರೆ ಮಾತಿನಲ್ಲಿ ಹೇಳುವುದಾದರೆ, ನಿಜವಾದ ಪ್ರಾಮಾಣಿಕತೆ ಮತ್ತು ನೈತಿಕ ನಿಷ್ಠೆಯುಳ್ಳ ವ್ಯಕ್ತಿಯಾಗಲು ಶ್ರಮಿಸಿ. ನಿಮ್ಮ ಎಲ್ಲ ವ್ಯವಹಾರಗಳಲ್ಲಿ ಪ್ರಾಮಾಣಿಕರಾಗಿರಿ; ಅಪ್ರಾಮಾಣಿಕತೆ ಇದೆ ಎಂಬ ಪೂರ್ವಧಾರಣೆಯಿಂದ ಆರಂಭಿಸಬೇಡಿ. ಸಂಪೂರ್ಣ ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯ ಉದ್ದೇಶದೊಂದಿಗೆ ಆರಂಭಿಸಿ; ಅಷ್ಟೇ ಸಾಕು.

ಇದಲ್ಲದೆ, ಒಬ್ಬರು ತಮ್ಮ ದಿನವಿಡೀ ಒಂದರ ಮೇಲೊಂದರಂತೆ ಆಣೆಗಳನ್ನು ಮಾಡುತ್ತಾ, ಪ್ರತಿ ಬಾರಿಯೂ ತಾವು ಹೇಳುವುದು ಸತ್ಯವೆಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತಿದ್ದರೆ, ಆಣೆ ಮಾಡುವುದು ಒಳ್ಳೆಯದೂ ಪವಿತ್ರವೂ ಆಗಿರುವ ಆ ಕೆಲವೇ ಸಂದರ್ಭಗಳ ಗಾಂಭೀರ್ಯವು ಕಡಿಮೆಯಾಗುತ್ತದೆ. ವಿವಾಹದ ಪ್ರತಿಜ್ಞೆಗಳಂತಹ ಸಾರ್ವಜನಿಕ ಪ್ರತಿಜ್ಞೆಗಳನ್ನು ಮಾಡುವುದು ಅಥವಾ ಯಾಜಕರು ಮಾಡುವಂತಹ ಸಾರ್ವಜನಿಕ ವಾಗ್ದಾನಗಳನ್ನು ನೀಡುವುದು ವಿಶಿಷ್ಟವೂ ಗಂಭೀರವೂ ಆದ ಸಂಗತಿಗಳು. ಧರ್ಮಸಭೆಯಲ್ಲಿ ನಮ್ಮ ವಿಶ್ವಾಸವನ್ನು ಸಾರ್ವಜನಿಕವಾಗಿ ನವೀಕರಿಸುವುದು, ಯಾವುದಾದರೂ ಸಾರ್ವಜನಿಕ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಾಗ ಪ್ರಮಾಣವಚನ ಸ್ವೀಕರಿಸುವುದು ಅಥವಾ ಆಣೆ ಮಾಡಲು ಒದಗುವ ಇನ್ನಾವುದೇ ಹೆಚ್ಚು ಗಂಭೀರವಾದ ಸಂದರ್ಭವನ್ನು ವಿಶೇಷ ಸಂದರ್ಭವೆಂದೇ ಪರಿಗಣಿಸಬೇಕು. ಆದ್ದರಿಂದ, ನಮ್ಮ ದೈನಂದಿನ ಬದ್ಧತೆಗಳು ವ್ಯಕ್ತಿಗಳಾಗಿ ನಮ್ಮ ಸತ್ಯನಿಷ್ಠೆ ಮತ್ತು ನೈತಿಕ ನಿಷ್ಠೆಯ ಸಹಜ ಫಲವಾಗಿರಬೇಕು.

ಇಂದು, ನಿಮ್ಮ ದೈನಂದಿನ ಜೀವನದಲ್ಲಿ ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ನೀವು ನೀಡುವ ಸ್ಥಾನವನ್ನು ಕುರಿತು ಚಿಂತಿಸಿ. ಸತ್ಯದಲ್ಲಿ ಜೀವಿಸುವುದು, ಸತ್ಯವನ್ನು ನುಡಿಯುವುದು ಮತ್ತು ಸತ್ಯವನ್ನು ಹುಡುಕುವುದು—ಇವುಗಳನ್ನು ಗುರಿಯಾಗಿಟ್ಟುಕೊಂಡು ನಿಮ್ಮ ದಿನವನ್ನು ಕಳೆಯುತ್ತೀರಾ? ಇತರರೊಂದಿಗೆ ಉತ್ತಮವಾಗಿ ಮತ್ತು ಸ್ಪಷ್ಟವಾಗಿ ಸಂವಹನ ನಡೆಸಲು ಪ್ರಯತ್ನಿಸುತ್ತಾ, ಅವರೊಡನೆ ಸತ್ಯನಿಷ್ಠೆಯಿಂದ ವರ್ತಿಸುತ್ತೀರಾ? ಈ ಪ್ರಶ್ನೆಗಳನ್ನು ಮನನ ಮಾಡಿ; ಆಂತರಿಕ ನೈತಿಕ ನಿಷ್ಠೆಗೆ ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯ ಈ ಸದ್ಗುಣಗಳು ಅಗತ್ಯವೆಂದು ತಿಳಿಯಿರಿ. ಆ ನೈತಿಕ ನಿಷ್ಠೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ. ಆಗ ಪ್ರತಿದಿನವೂ ನಿಮ್ಮ ಮೇಲೆ ಇತರರ ಭರವಸೆ ಹೆಚ್ಚುತ್ತಾ ಹೋದಂತೆ ಅವರಿಗೂ ಒಳಿತಾಗುತ್ತದೆ.

ಪ್ರಭುವೇ, ನೀವೇ ಸಮಸ್ತ ಸತ್ಯದ ಮೂಲ, ನೀವೇ ಸತ್ಯಸ್ವರೂಪಿ. ನಾನು ಹೇಳುವ ಮತ್ತು ಮಾಡುವ ಎಲ್ಲದರಲ್ಲಿಯೂ ಪ್ರತಿದಿನ ಆ ಸತ್ಯದ ಸಾಧನವಾಗಲು ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಯಾವಾಗಲೂ ನಿಮ್ಮನ್ನೂ ನಿಮ್ಮ ಪವಿತ್ರ ಚಿತ್ತವನ್ನೂ ಆರಿಸಿಕೊಳ್ಳುತ್ತೇನೆ; ಎಲ್ಲರೂ ಕಾಣುವಂತೆ ನಿಮ್ಮ ಸಾಧನವಾಗಿರಲು ಆರಿಸಿಕೊಳ್ಳುತ್ತೇನೆ. ಯೇಸುವೇ, ನಾನು ನಿಮ್ಮಲ್ಲಿ ಭರವಸೆ ಇಡುತ್ತೇನೆ.

ಪರಿವಿಡಿ


ಎಲ್ಲ 4 ಸಂಪುಟಗಳು ಪೇಪರ್‌ಬ್ಯಾಕ್ & ಇ-ಪುಸ್ತಕ ರೂಪದಲ್ಲಿ ಲಭ್ಯವಿವೆ!

Amazon – Google Play – iTunes – Barnes and Noble

ಈ ಪುಟವನ್ನು ಹಂಚಿಕೊಳ್ಳಿ: