ಪಾಪನಿವೇದನೆ ಮಾಡುವುದು ಹೇಗೆ…
ಮುದ್ರಣಕ್ಕೆ ಸೂಕ್ತವಾದ ಆವೃತ್ತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೊದಲು, ಸ್ವಲ್ಪ ಸಮಯ ಶಾಂತವಾಗಿ ಪ್ರಾರ್ಥಿಸಿ, ಕೆಳಗಿನ ಅಂತಃಕರಣ ಪರೀಕ್ಷೆಯನ್ನು ಪೂರ್ಣವಾಗಿ ಓದಿರಿ. ಅಗತ್ಯವಿರುವಷ್ಟು ಸಮಯ ತೆಗೆದುಕೊಳ್ಳಿರಿ.
ವೈಯಕ್ತಿಕ ಆತ್ಮಶೋಧನೆ
ವೈಯಕ್ತಿಕ ಆತ್ಮಶೋಧನೆ – ಹತ್ತು ಆಜ್ಞೆಗಳು
(ಅಥವಾ, ಏಳು ಮಹಾಪಾಪಗಳ ಆಧಾರದಲ್ಲಿ ಆತ್ಮಶೋಧನೆ ಮಾಡಲು ಕೆಳಗೆ ಸ್ಕ್ರೋಲ್ ಮಾಡಿ)
ಮೊದಲನೆಯ ಆಜ್ಞೆ: “ನಾನೇ ನಿನ್ನ ದೇವರಾದ ಕರ್ತನು; ನನ್ನ ಮುಂದೆ ನಿನಗೆ ಅನ್ಯ ದೇವರುಗಳು ಇರಬಾರದು.”ನಾನು ದೇವರನ್ನು ನಿರಾಕರಿಸಿದ್ದೇನೆಯೇ? ಇತರರ ಮುಂದೆ ನನ್ನ ವಿಶ್ವಾಸದ ಬಗ್ಗೆ ನಾಚಿಕೊಂಡಿದ್ದೇನೆಯೇ ಅಥವಾ ಅದನ್ನು ನಿರಾಕರಿಸಿದ್ದೇನೆಯೇ? ಸಭೆಯ ಬೋಧನೆಗಳನ್ನು ಅಥವಾ ಆಚರಣೆಗಳನ್ನು ಅಪಹಾಸ್ಯ ಮಾಡಿದ್ದೇನೆಯೇ? ನನ್ನ ಪ್ರಾರ್ಥನೆಗಳನ್ನು ನಿರ್ಲಕ್ಷಿಸಿದ್ದೇನೆಯೇ? ಮಾಟಮಂತ್ರ, ವಿಕ್ಕಾ ಅಥವಾ ಇತರ ಗುಪ್ತವಿದ್ಯೆಯ ಆಚರಣೆಗಳನ್ನು ಮಾಡಿದ್ದೇನೆಯೇ? ಭವಿಷ್ಯ ಹೇಳುವವರನ್ನು ಅಥವಾ ಆತ್ಮಗಳನ್ನು ಸಂಪರ್ಕಿಸುವ ಮಾಧ್ಯಮಗಳನ್ನು ಆಶ್ರಯಿಸುವುದು, ಊಯಿಜಾ ಫಲಕಗಳನ್ನು ಅಥವಾ ಟ್ಯಾರೋ ಕಾರ್ಡ್ಗಳನ್ನು ಬಳಸುವುದು ಮೊದಲಾದ ವಿವಿಧ ಮೂಢನಂಬಿಕೆಯ ಆಚರಣೆಗಳಲ್ಲಿ ತೊಡಗಿದ್ದೇನೆಯೇ?
ಎರಡನೆಯ ಆಜ್ಞೆ: “ಪ್ರಭುವಿನ ನಾಮವನ್ನು ವ್ಯರ್ಥವಾಗಿ ಉಚ್ಚರಿಸಬೇಡ.”
ನಾನು ದೇವರ ನಾಮವನ್ನು ಅಜಾಗರೂಕತೆಯಿಂದ, ಕೋಪದಲ್ಲಿ ಅಥವಾ ಆಶ್ಚರ್ಯಗೊಂಡಾಗ ಉಚ್ಚರಿಸುತ್ತೇನೆಯೇ? ಯಾರಿಗಾದರೂ ಅಥವಾ ಯಾವುದಕ್ಕಾದರೂ ಕೆಡುಕಾಗಲೆಂದು ಶಪಿಸಿದ್ದೇನೆಯೇ?
ಮೂರನೆಯ ಆಜ್ಞೆ: “ಸಬ್ಬತ್ ದಿನವನ್ನು ಪವಿತ್ರವಾಗಿ ಆಚರಿಸು.”
ನನ್ನದೇ ತಪ್ಪಿನಿಂದಾಗಿ, ಪ್ರತಿ ಭಾನುವಾರ ಮತ್ತು ದಿವ್ಯಬಲಿಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುವ ಪ್ರತಿ ಹಬ್ಬದ ದಿನದಂದು ದಿವ್ಯಬಲಿಗೆ ಹೋಗದೆ ಇದ್ದೇನೆಯೇ? ಸರಿಯಾದ ಕಾರಣವಿಲ್ಲದೆ ದಿವ್ಯಬಲಿಗೆ ತಡವಾಗಿ ಬರುತ್ತೇನೆಯೇ ಅಥವಾ ಮುಗಿಯುವ ಮುನ್ನವೇ ಹೊರಡುತ್ತೇನೆಯೇ? ದಿವ್ಯಬಲಿಯ ಸಮಯದಲ್ಲಿ ನನ್ನ ಗಮನ ಚದುರಲು ಬಿಡುತ್ತೇನೆಯೇ?
ನಾಲ್ಕನೆಯ ಆಜ್ಞೆ: “ನಿನ್ನ ತಂದೆತಾಯಿಯನ್ನು ಗೌರವಿಸು.”
ನಾನು ನನ್ನ ತಂದೆತಾಯಿಗೆ ಅವಿಧೇಯನಾಗಿದ್ದೇನೆಯೇ ಅಥವಾ ಅವರನ್ನು ಅಗೌರವದಿಂದ ನಡೆಸಿಕೊಂಡಿದ್ದೇನೆಯೇ? ನನ್ನ ಕುಟುಂಬದವರೊಡನೆ ಅಗೌರವದಿಂದ, ಅಸಭ್ಯವಾಗಿ ಅಥವಾ ಸೌಜನ್ಯವಿಲ್ಲದೆ ವರ್ತಿಸುತ್ತೇನೆಯೇ? ನನ್ನ ಕೆಲಸವನ್ನು ಅಥವಾ ವಿದ್ಯಾಭ್ಯಾಸವನ್ನು ನಿರ್ಲಕ್ಷಿಸಿದ್ದೇನೆಯೇ? ಮನೆಯಲ್ಲಿ ಸಹಾಯ ಮಾಡಿದ್ದೇನೆಯೇ? ಗಂಭೀರವಾಗಿ ಮತ್ತು ಶ್ರದ್ಧೆಯಿಂದ ಅಧ್ಯಯನ ಮಾಡಲು ತಪ್ಪಿದ್ದೇನೆಯೇ? ಸೋಮಾರಿತನದಿಂದಾಗಿ ಶಾಲೆಯ ಪರೀಕ್ಷೆಗೆ ಗೈರುಹಾಜರಾಗಿದ್ದೇನೆಯೇ? ವಯೋವೃದ್ಧರೊಡನೆ ಅಗೌರವದಿಂದ ವರ್ತಿಸುತ್ತೇನೆಯೇ? ನಾಗರಿಕ ಕಾನೂನಿಗೆ ಅಥವಾ ಪೊಲೀಸರಂತಹ ಅಧಿಕಾರಸ್ಥರಿಗೆ ಅವಿಧೇಯನಾಗಿದ್ದೇನೆಯೇ?
ಐದನೆಯ ಆಜ್ಞೆ: “ಕೊಲೆ ಮಾಡಬೇಡ.”
ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆಯೇ ಅಥವಾ ಬೇರೆಯವರು ಗರ್ಭಪಾತ ಮಾಡಿಸಿಕೊಳ್ಳಲು ಸಹಾಯ ಮಾಡಿದ್ದೇನೆಯೇ? ನನ್ನ ದೇಹವನ್ನು ಅಥವಾ ಬೇರೆಯವರ ದೇಹವನ್ನು ಅಂಗವಿಕಲಗೊಳಿಸಿದ್ದೇನೆಯೇ? ಆತ್ಮಹತ್ಯೆಗೆ ಪ್ರಯತ್ನಿಸಿದ್ದೇನೆಯೇ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಗಂಭೀರವಾಗಿ ಯೋಚಿಸಿದ್ದೇನೆಯೇ? ಜಗಳವಾಡುವ ಮೂಲಕ ಅಥವಾ ಬೇರೆಯವರನ್ನು ಹೊಡೆಯುವ ಮೂಲಕ ಹಿಂಸಾತ್ಮಕವಾಗಿ ವರ್ತಿಸುತ್ತೇನೆಯೇ? ಬೇರೆಯವರ ಬಗ್ಗೆ ದ್ವೇಷದ ಆಲೋಚನೆಗಳನ್ನು ಹೊಂದಿದ್ದೇನೆಯೇ? ಅಕ್ರಮ ಮಾದಕವಸ್ತುಗಳನ್ನು ಸೇವಿಸಿದ್ದೇನೆಯೇ ಅಥವಾ ವೈದ್ಯರು ಸೂಚಿಸಿದ ಔಷಧಗಳನ್ನು ದುರುಪಯೋಗಪಡಿಸಿಕೊಂಡಿದ್ದೇನೆಯೇ? ಅಕ್ರಮ ಮಾದಕವಸ್ತುಗಳನ್ನು ಮಾರಾಟ ಮಾಡಿದ್ದೇನೆಯೇ ಅಥವಾ ವಿತರಿಸಿದ್ದೇನೆಯೇ? ನನ್ನ ದೇಹವನ್ನು ಸರಿಯಾಗಿ ನೋಡಿಕೊಳ್ಳುವುದನ್ನು ನಿರ್ಲಕ್ಷಿಸುತ್ತೇನೆಯೇ? ಅತಿಯಾಗಿ ತಿನ್ನುತ್ತೇನೆಯೇ ಅಥವಾ ಅತಿಯಾಗಿ ನಿದ್ರಿಸುತ್ತೇನೆಯೇ? ಬಿಯರ್ ಅಥವಾ ಇತರ ಮದ್ಯಪಾನೀಯಗಳನ್ನು ಅತಿಯಾಗಿ ಕುಡಿಯುತ್ತೇನೆಯೇ? ಅಮಲೇರಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇನೆಯೇ? ನನ್ನ ಆರೋಗ್ಯ ಅಥವಾ ಬಾಹ್ಯರೂಪದ ಬಗ್ಗೆ ಅತಿಯಾಗಿ ಚಿಂತಿಸುತ್ತೇನೆಯೇ? ಬೇರೆಯವರ ಬಗ್ಗೆ ನಿರ್ದಯವಾದ ಮತ್ತು ಪ್ರತೀಕಾರದ ಆಲೋಚನೆಗಳನ್ನು ಉದ್ದೇಶಪೂರ್ವಕವಾಗಿ ಮನಸ್ಸಿನಲ್ಲಿ ಪೋಷಿಸುತ್ತೇನೆಯೇ? ಸೇಡು ತೀರಿಸಿಕೊಂಡಿದ್ದೇನೆಯೇ? ಬೇರೆಯವರೊಡನೆ ಕಠೋರವಾದ ಅಥವಾ ನಿಂದನೀಯವಾದ ಭಾಷೆಯನ್ನು ಬಳಸಿದ್ದೇನೆಯೇ? ಒರಟಾಗಿ, ಅಸಭ್ಯವಾಗಿ ವರ್ತಿಸುತ್ತೇನೆಯೇ ಅಥವಾ ಬೇರೆಯವರನ್ನು ಅಪಹಾಸ್ಯ ಮಾಡುತ್ತೇನೆಯೇ? ಜನಾಂಗೀಯ ದ್ವೇಷದ ಪಾಪವನ್ನು ಮಾಡಿದ್ದೇನೆಯೇ? ಪ್ರಾಣಿಗಳೊಡನೆ ಕ್ರೂರವಾಗಿ ವರ್ತಿಸುತ್ತೇನೆಯೇ?
ಆರನೆಯ & ಒಂಬತ್ತನೆಯ ಆಜ್ಞೆಗಳು: “ವ್ಯಭಿಚಾರ ಮಾಡಬೇಡ. ನಿನ್ನ ನೆರೆಯವನ ಪತ್ನಿಯನ್ನು ಮೋಹಿಸಬೇಡ.”
ನಾನು ಅಶುದ್ಧವಾದವುಗಳನ್ನು ಬಯಸಿದ್ದೇನೆಯೇ ಅಥವಾ ಮಾಡಿದ್ದೇನೆಯೇ? ಅಶುದ್ಧ ಆಲೋಚನೆಗಳನ್ನು ಅಥವಾ ಬಯಕೆಗಳನ್ನು ಮನಸ್ಸಿನಲ್ಲಿ ಪೋಷಿಸುವುದರಲ್ಲಿ ಆನಂದಪಟ್ಟಿದ್ದೇನೆಯೇ? ಅಶುದ್ಧ ವಿಷಯಗಳನ್ನು ಓದಿದ್ದೇನೆಯೇ, ಅಶುದ್ಧ ಸಾಹಿತ್ಯವಿರುವ ಹಾಡುಗಳನ್ನು ಕೇಳಿದ್ದೇನೆಯೇ ಅಥವಾ ಛಾಯಾಚಿತ್ರಗಳಲ್ಲಿ, ದೂರದರ್ಶನದಲ್ಲಿ, ಚಲನಚಿತ್ರಗಳಲ್ಲಿ ಅಥವಾ ಅಂತರ್ಜಾಲದಲ್ಲಿ ಅಶುದ್ಧ ಚಿತ್ರಗಳನ್ನು ನೋಡಿದ್ದೇನೆಯೇ? ಅಶುದ್ಧ ಚುಂಬನ, ಆಲಿಂಗನ ಅಥವಾ ಸ್ಪರ್ಶದ ಮೂಲಕ ನನ್ನಲ್ಲಿ ಅಥವಾ ಬೇರೆಯವರಲ್ಲಿ ಲೈಂಗಿಕ ಬಯಕೆಯನ್ನು ಕೆರಳಿಸಿದ್ದೇನೆಯೇ? ಒಂಟಿಯಾಗಿ ಅಶುದ್ಧ ಕ್ರಿಯೆಗಳನ್ನು, ಅಂದರೆ ಹಸ್ತಮೈಥುನವನ್ನು ಮಾಡಿದ್ದೇನೆಯೇ? ಸಲಿಂಗಕಾಮದ ಕ್ರಿಯೆಗಳನ್ನು ಅಥವಾ ಇತರ ಅಸ್ವಾಭಾವಿಕ ಕ್ರಿಯೆಗಳನ್ನು ಮಾಡಿದ್ದೇನೆಯೇ? ಶಸ್ತ್ರಚಿಕಿತ್ಸೆಯ, ತಡೆಸಾಧನಗಳ ಅಥವಾ ರಾಸಾಯನಿಕ ವಿಧಾನಗಳ ಮೂಲಕ ಕೃತಕ ಗರ್ಭನಿರೋಧಕಗಳನ್ನು ಬಳಸುತ್ತೇನೆಯೇ? ಅಸಭ್ಯವಾಗಿ ಉಡುಪು ಧರಿಸಿದ್ದೇನೆಯೇ ಅಥವಾ ನನ್ನ ಬಾಹ್ಯರೂಪದ ಬಗ್ಗೆ ಅತಿಯಾಗಿ ಚಿಂತಿಸಿದ್ದೇನೆಯೇ? ಅಶ್ಲೀಲ ಭಾಷೆಯನ್ನು ಬಳಸುತ್ತೇನೆಯೇ ಅಥವಾ ಅಶುದ್ಧ ಹಾಸ್ಯಗಳನ್ನು ಅಥವಾ ಕಥೆಗಳನ್ನು ಹೇಳುತ್ತೇನೆಯೇ ಅಥವಾ ಕೇಳುತ್ತೇನೆಯೇ?
ಏಳನೆಯ ಮತ್ತು ಹತ್ತನೆಯ ಆಜ್ಞೆಗಳು: “ಕದಿಯಬೇಡ. ನಿನ್ನ ನೆರೆಯವನ ಸೊತ್ತನ್ನು ಆಶಿಸಬೇಡ.”
ನನಗೆ ಸೇರದ ಯಾವುದನ್ನಾದರೂ ತೆಗೆದುಕೊಂಡಿದ್ದೇನೆಯೇ? ಖಾಸಗಿ ಅಥವಾ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದೇನೆಯೇ ಅಥವಾ ಧ್ವಂಸಕೃತ್ಯದಿಂದ ಅದನ್ನು ವಿರೂಪಗೊಳಿಸಿದ್ದೇನೆಯೇ? ಅಂಗಡಿಯಲ್ಲಿ ಕಳ್ಳತನ ಮಾಡಿದ್ದೇನೆಯೇ? ಕದ್ದ ಸೊತ್ತನ್ನು ಸ್ವೀಕರಿಸಿದ್ದೇನೆಯೇ ಅಥವಾ ಖರೀದಿಸಿದ್ದೇನೆಯೇ ಅಥವಾ ಯಾರಿಗಾದರೂ ಕದಿಯಲು ಸಹಾಯ ಮಾಡಿದ್ದೇನೆಯೇ? ಯಾರಿಗಾದರೂ ಲಂಚ ಕೊಟ್ಟಿದ್ದೇನೆಯೇ? ಅತಿಯಾಗಿ ಜೂಜಾಡುತ್ತೇನೆಯೇ? ಮಾಲೀಕರ ಅನುಮತಿಯಿಲ್ಲದೆ ಯಾವುದನ್ನಾದರೂ ಎರವಲು ತೆಗೆದುಕೊಂಡಿದ್ದೇನೆಯೇ? ಎರವಲು ತೆಗೆದುಕೊಂಡದ್ದನ್ನು ಹಿಂದಿರುಗಿಸದೆ ಇದ್ದೇನೆಯೇ? ಹಣವನ್ನು ವ್ಯರ್ಥ ಮಾಡುತ್ತೇನೆಯೇ ಅಥವಾ ದುಂದುವೆಚ್ಚ ಮಾಡುತ್ತೇನೆಯೇ? ಹಣ ಅಥವಾ ಲೌಕಿಕ ಸೊತ್ತಿನ ಬಗ್ಗೆ ದುರಾಸೆಯನ್ನು ಮನಸ್ಸಿನಲ್ಲಿ ಪೋಷಿಸಿದ್ದೇನೆಯೇ? ಹಣವನ್ನು ಅಥವಾ ಯಾವುದೇ ಸೊತ್ತನ್ನು ಮಿಥ್ಯಾದೇವರನ್ನಾಗಿ ಮಾಡಿಕೊಂಡಿದ್ದೇನೆಯೇ? ವಸ್ತುಗಳನ್ನು ಅಥವಾ ಆಹಾರವನ್ನು ವ್ಯರ್ಥ ಮಾಡುತ್ತೇನೆಯೇ? ಪರೀಕ್ಷೆಗಳಲ್ಲಿ ಅಥವಾ ಶಾಲೆಯ ಕೆಲಸಗಳಲ್ಲಿ ಮೋಸ ಮಾಡಿದ್ದೇನೆಯೇ? ಆಟಗಳಲ್ಲಿ ಅಥವಾ ಕ್ರೀಡೆಗಳಲ್ಲಿ ಮೋಸ ಮಾಡಿದ್ದೇನೆಯೇ?
ಎಂಟನೆಯ ಆಜ್ಞೆ: “ನಿನ್ನ ನೆರೆಯವನ ವಿರುದ್ಧ ಸುಳ್ಳುಸಾಕ್ಷಿ ಹೇಳಬಾರದು.”
ನಾನು ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದ್ದೇನೆಯೇ? ಪಾಪಕರವಾದ ಅಥವಾ ಕಾನೂನುಬಾಹಿರವಾದ ಕಾರ್ಯವನ್ನು ಮಾಡುವುದಾಗಿ ಪ್ರಮಾಣ ಮಾಡಿದ್ದೇನೆಯೇ? ಇತರರು ಮಾಡದ ಪಾಪಗಳನ್ನು, ಅಥವಾ ಅವರು ಮಾಡಿದ್ದಕ್ಕೆ ನನ್ನ ಬಳಿ ಯಾವುದೇ ಸಾಕ್ಷ್ಯವಿಲ್ಲದ ಪಾಪಗಳನ್ನು ಅವರ ಮೇಲೆ ಹೊರಿಸಿ ಅವರ ಮಾನಹಾನಿ ಮಾಡಿದ್ದೇನೆಯೇ? ನಾನು ಇತರರ ಬಗ್ಗೆ ಹರಟೆ ಹೊಡೆಯುತ್ತೇನೆಯೇ ಅಥವಾ ಅಂಥ ಹರಟೆಗೆ ಕಿವಿಗೊಡುತ್ತೇನೆಯೇ? ರಹಸ್ಯವಾಗಿಡಲು ನನಗೆ ಹೇಳಿದ್ದ ವಿಷಯವನ್ನು ಬೇರೆಯವರಿಗೆ ತಿಳಿಸಿದ್ದೇನೆಯೇ? ಯಾರಾದರೂ ನನ್ನ ಮೇಲಿಟ್ಟ ನಂಬಿಕೆಗೆ ದ್ರೋಹ ಮಾಡಿದ್ದೇನೆಯೇ? ಪ್ರೀತಿರಹಿತವಾಗಿ ಯಾರನ್ನಾದರೂ ಟೀಕಿಸಿದ್ದೇನೆಯೇ? ನಾನು ಅವಸರದ ತೀರ್ಪುಗಳನ್ನು ನೀಡಿ, ಇತರರ ಬಗ್ಗೆ ನಿರಾಧಾರವಾದ ಅನುಮಾನಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇನೆಯೇ? ಉದ್ದೇಶಪೂರ್ವಕವಾಗಿ ಯಾರನ್ನಾದರೂ ದಾರಿತಪ್ಪಿಸಿದ್ದೇನೆಯೇ ಅಥವಾ ವಂಚಿಸಿದ್ದೇನೆಯೇ? ಯಾರನ್ನಾದರೂ ಕ್ಷಮಿಸಲು ನಿರಾಕರಿಸಿದ್ದೇನೆಯೇ ಅಥವಾ ಅವರ ವಿರುದ್ಧ ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇನೆಯೇ? ನಾನು ನೋಯಿಸಿದವರ ಕ್ಷಮೆ ಕೇಳಲು ಅಥವಾ ಅವರಿಗೆ ಮಾಡಿದ ತಪ್ಪನ್ನು ಸರಿಪಡಿಸಲು ತಪ್ಪಿದ್ದೇನೆಯೇ?
ಇತರ ವಿಚಾರಗಳು: ನಾನು ದುರಾಸೆಯುಳ್ಳವನೋ ಅಥವಾ ಸ್ವಾರ್ಥಿಯೋ ಆಗಿದ್ದೇನೆಯೇ ಅಥವಾ ನನ್ನ ಬಗ್ಗೆಯೇ ಮರುಗುವುದರಲ್ಲಿ ಮುಳುಗಿರುತ್ತೇನೆಯೇ? ನಾನು ಹೆಮ್ಮೆಯುಳ್ಳವನೋ ಅಥವಾ ಒಣಜಂಬದವನೋ ಆಗಿದ್ದೇನೆಯೇ ಅಥವಾ ನನ್ನನ್ನು ಪ್ರದರ್ಶಿಸಿಕೊಳ್ಳುತ್ತೇನೆಯೇ? ನಾನು ಮೇಲ್ನೋಟಕ್ಕೆ ಮಾತ್ರ ಬದುಕುವವನೂ ಲೌಕಿಕಾಸಕ್ತನೂ ಆಗಿದ್ದೇನೆಯೇ? ನನ್ನ ಯಶಸ್ಸನ್ನು ಅತಿಶಯೋಕ್ತಿಯಿಂದ ಹೇಳಿ ಹೊಗಳಿಕೆಯನ್ನು ಬಯಸುತ್ತೇನೆಯೇ? ನಾನು ಬೇಗ ಸಿಟ್ಟಾಗುವವನೂ ಅತಿಸೂಕ್ಷ್ಮ ಮನಸ್ಸಿನವನೂ ಆಗಿದ್ದೇನೆಯೇ? ಅತಿ ಚಿಕ್ಕ ಅಲಕ್ಷ್ಯವನ್ನಾಗಲಿ ಯೋಚಿಸದೆ ಮಾಡಿದ ಕೆಲಸವನ್ನಾಗಲಿ ದೊಡ್ಡದಾಗಿ ಮಾಡಿ, ಅದನ್ನು ಅವಮಾನ ಅಥವಾ ಉದ್ದೇಶಪೂರ್ವಕ ತಿರಸ್ಕಾರವೆಂದು ಭಾವಿಸುತ್ತೇನೆಯೇ? ನಾನು ಬಡಾಯಿ ಕೊಚ್ಚಿಕೊಂಡಿದ್ದೇನೆಯೇ? ಇತರರೊಂದಿಗೆ ಅಹಂಕಾರದಿಂದ ವರ್ತಿಸಿದ್ದೇನೆಯೇ? ನನ್ನದಾಗಲಿ ಇತರರದಾಗಲಿ ಪಾಪಕರವಾದ ಕ್ರಿಯೆಗಳನ್ನು ಹಠದಿಂದ ಸಮರ್ಥಿಸಿದ್ದೇನೆಯೇ? ನಾನು ಬಂಡಾಯ ಮನೋಭಾವದವನಾಗಿದ್ದೇನೆಯೇ? ಹೆಚ್ಚು ಉಪಯುಕ್ತವಾದ ಕೆಲಸಗಳನ್ನು ಮಾಡಬಹುದಾಗಿದ್ದಾಗ ದೂರದರ್ಶನದ ಮುಂದೆ ಕುಳಿತು ನಿರರ್ಥಕವಾಗಿ ಸಮಯ ಕಳೆದಿದ್ದೇನೆಯೇ? ಯಾರದಾದರೂ ಸೊತ್ತುಗಳನ್ನು ನೋಡಿ ಅಸೂಯೆಪಡುತ್ತೇನೆಯೇ ಮತ್ತು ಅವು ನನ್ನದಾಗಬೇಕೆಂದು ಅತಿಯಾಗಿ ಬಯಸುತ್ತೇನೆಯೇ? ಇತರರ ದುರದೃಷ್ಟದಲ್ಲಿ ಸಂತೋಷಪಡುತ್ತೇನೆಯೇ?
(ಏಳು ಪ್ರಧಾನ ಪಾಪಗಳ ಕುರಿತು ಆತ್ಮಶೋಧನೆಗಾಗಿ ಕೆಳಗೆ ಸ್ಕ್ರೋಲ್ ಮಾಡಿ)
ನಿಮ್ಮ ಪಾಪಗಳ ಬಗ್ಗೆ ಚಿಂತಿಸಲು ಸಮಯ ತೆಗೆದುಕೊಂಡ ಬಳಿಕ, ಪಾಪನಿವೇದನೆಯ ಸ್ಥಳಕ್ಕೆ ಹೋಗಿ ಈ ಕೆಳಗಿನ ರೀತಿಯಲ್ಲಿ ಸಾಮರಸ್ಯದ ಸಂಸ್ಕಾರವನ್ನು ಆಚರಿಸಿರಿ:
ಪಾಪನಿವೇದನೆಯ ಸ್ಥಳಕ್ಕೆ ಹೋಗಿ ಹೀಗೆ ಹೇಳಿರಿ, ಪಿತನ, ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ. ಆಮೆನ್. ಗುರುಗಳೇ, ನನ್ನನ್ನು ಕ್ಷಮಿಸಿರಿ, ನಾನು ಪಾಪ ಮಾಡಿದ್ದೇನೆ. ನನ್ನ ಕೊನೆಯ ಪಾಪನಿವೇದನೆಯಾಗಿ (ಎಷ್ಟು ಕಾಲ?) ಆಗಿದೆ ಮತ್ತು ಇವು ನನ್ನ ಪಾಪಗಳು…(ನಿಮ್ಮ ಎಲ್ಲಾ ಪಾಪಗಳನ್ನು ನಿವೇದಿಸಿರಿ…ಹೆದರಬೇಡಿರಿ!).
ಗುರುಗಳು ನಿಮಗೆ ಪ್ರಾಯಶ್ಚಿತ್ತವನ್ನು ನೀಡಿ, ನಂತರ ಪಶ್ಚಾತ್ತಾಪದ ಪ್ರಾರ್ಥನೆಯನ್ನು ಹೇಳುವಂತೆ ಕೇಳುವರು. ನೀವು ಈ ಪ್ರಾರ್ಥನೆಯನ್ನು ಬಳಸಬಹುದು:
ಪಶ್ಚಾತ್ತಾಪದ ಪ್ರಾರ್ಥನೆ
ಓ ನನ್ನ ದೇವರೇ, ನಿಮ್ಮನ್ನು ನೋಯಿಸಿದ್ದಕ್ಕಾಗಿ ನಾನು ಹೃತ್ಪೂರ್ವಕವಾಗಿ ಪಶ್ಚಾತ್ತಾಪಪಡುತ್ತೇನೆ. ನಿಮ್ಮ ನ್ಯಾಯಯುತ ಶಿಕ್ಷೆಗಳ ಕಾರಣದಿಂದ ನನ್ನ ಎಲ್ಲ ಪಾಪಗಳನ್ನು ದ್ವೇಷಿಸುತ್ತೇನೆ; ಆದರೆ ಎಲ್ಲಕ್ಕಿಂತ ಹೆಚ್ಚಾಗಿ, ಸರ್ವಥಾ ಒಳ್ಳೆಯವರೂ ನನ್ನ ಸಂಪೂರ್ಣ ಪ್ರೀತಿಗೆ ಅರ್ಹರೂ ಆದ ನನ್ನ ದೇವರಾದ ನಿಮ್ಮನ್ನು ಅವು ನೋಯಿಸುವುದರಿಂದ ಅವುಗಳನ್ನು ದ್ವೇಷಿಸುತ್ತೇನೆ. ನಿಮ್ಮ ಅನುಗ್ರಹದ ಸಹಾಯದಿಂದ ಇನ್ನು ಪಾಪ ಮಾಡದಿರಲು ಮತ್ತು ಪಾಪಕ್ಕೆ ನೇರವಾಗಿ ಎಡೆಮಾಡಿಕೊಡುವ ಸಂದರ್ಭಗಳಿಂದ ದೂರವಿರಲು ದೃಢವಾಗಿ ನಿರ್ಧರಿಸುತ್ತೇನೆ. ಆಮೆನ್.
ನಂತರ ಗುರುಗಳು ಪಾಪಕ್ಷಮೆಯ ಪ್ರಾರ್ಥನೆಯನ್ನು (ಪಾಪವಿಮೋಚನೆ) ಹೇಳುವರು.
ನಿಮಗೆ ನೀಡಿದ ಪ್ರಾಯಶ್ಚಿತ್ತವು ಕೆಲವು ಪ್ರಾರ್ಥನೆಗಳನ್ನು ಹೇಳುವುದಾಗಿದ್ದರೆ, ದಯವಿಟ್ಟು ಕೂಡಲೇ ನಿಮ್ಮ ಆಸನಕ್ಕೆ ಹಿಂದಿರುಗಿ ಆ ಪ್ರಾರ್ಥನೆಗಳನ್ನು ಹೇಳಿರಿ.
ಅಷ್ಟೇ! ನಿಮ್ಮ ಪಾಪಗಳು ಕ್ಷಮಿಸಲ್ಪಟ್ಟಿವೆ!
ವೈಯಕ್ತಿಕ ಆತ್ಮಶೋಧನೆ – ಏಳು ಪ್ರಧಾನ ಪಾಪಗಳು
ಅಹಂಕಾರ: “ಅಹಂಕಾರವೆಂದರೆ ನಮ್ಮ ಬಗ್ಗೆ ನಮಗಿರುವ ಅಸತ್ಯವಾದ ಅಭಿಪ್ರಾಯ, ನಾವು ಏನಲ್ಲವೋ ಅದರ ಬಗ್ಗೆ ಅಸತ್ಯವಾದ ಕಲ್ಪನೆ.” ನನ್ನ ಆಲೋಚನೆ, ಮಾತು ಅಥವಾ ನಡವಳಿಕೆಯಲ್ಲಿ ನಾನು ಇತರರಿಗಿಂತ ಶ್ರೇಷ್ಠನೆಂಬ ಮನೋಭಾವವಿದೆಯೇ? ನಾನು ಇತರರನ್ನು ಕೀಳಾಗಿ ಕಾಣುತ್ತೇನೆಯೇ? ನನ್ನ ನಡವಳಿಕೆ ಅಥವಾ ಹಾವಭಾವಗಳು ಇತರರಿಗೆ ನೋವುಂಟುಮಾಡುವಂತೆಯೂ ದರ್ಪದಿಂದ ಕೂಡಿದಂತೆಯೂ ಇವೆಯೇ? ನನ್ನನ್ನು ಇತರರಿಗಿಂತ ಮೇಲಾಗಿ ಪರಿಗಣಿಸುತ್ತೇನೆಯೇ? ನನಗೆ ಮಾನ್ಯತೆ ನೀಡಬೇಕೆಂದು ಒತ್ತಾಯಿಸುತ್ತೇನೆಯೇ? ಯಾವಾಗಲೂ ಮೊದಲಿಗನಾಗಿರಬೇಕೆಂದು ಬಯಸುತ್ತೇನೆಯೇ? ನಾನು ಸಲಹೆಯನ್ನು ಕೇಳುತ್ತೇನೆಯೇ? ಸಲಹೆಯನ್ನು ಸ್ವೀಕರಿಸಲು ಸಿದ್ಧನಿದ್ದೇನೆಯೇ? ಯಾವುದಾದರೂ ರೀತಿಯಲ್ಲಿ ಇತರರನ್ನು ಬೆದರಿಸಿ ಕಿರುಕುಳ ನೀಡುತ್ತೇನೆಯೇ? ಇತರರ ಮೇಲೆ ಅಧಿಕಾರ ಚಲಾಯಿಸುವ ಪ್ರವೃತ್ತಿ ನನ್ನಲ್ಲಿದೆಯೇ? ನಾನು ಇತರರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತೇನೆಯೇ? ಇತರರ ಬಗ್ಗೆ ಸುಳ್ಳು ಹೇಳಿದ್ದೇನೆಯೇ? ಇತರರ ತಪ್ಪುಗಳನ್ನು ಬಹಿರಂಗಪಡಿಸುತ್ತೇನೆಯೇ? ನನ್ನನ್ನು ಸಮರ್ಥಿಸಿಕೊಂಡು ಇತರರ ಮೇಲೆ ದೋಷ ಹೊರಿಸಲು ಪ್ರಯತ್ನಿಸುತ್ತೇನೆಯೇ? ನಾನು ಮಾತನಾಡಲು ನಿರಾಕರಿಸುವ ಯಾರಾದರೂ ಇದ್ದಾರೆಯೇ? ನಾನು ಬಹುಕಾಲದಿಂದ ಮಾತನಾಡದೆ ಇರುವ ಯಾರಾದರೂ ಇದ್ದಾರೆಯೇ? ನಾನು ವಾದಕ್ಕಿಳಿಯುವ ಪ್ರವೃತ್ತಿಯುಳ್ಳವನಾಗಿದ್ದೇನೆಯೇ? ವಾದಗಳಲ್ಲಿ ಇತರರನ್ನು ನೋಯಿಸುತ್ತೇನೆಯೇ? ವಾದಗಳಲ್ಲಿ “ನನಗೆ ಎಲ್ಲವೂ ಗೊತ್ತು” ಎಂಬ ಮೇಲರಿಮೆಯ ಮನೋಭಾವ ನನ್ನಲ್ಲಿದೆಯೇ? ಇತರರು ನನ್ನನ್ನು ಹೇಗೆ ಕಾಣುತ್ತಾರೆ ಎಂಬುದರ ಬಗ್ಗೆ ಅತಿಯಾಗಿ ಚಿಂತಿಸುತ್ತೇನೆಯೇ? ನಾನು ಸೂಕ್ಷ್ಮ ಮನಸ್ಸಿನವನಾಗಿದ್ದೇನೆಯೇ? ನನ್ನ ಮನಸ್ಸಿಗೆ ಸುಲಭವಾಗಿ ನೋವಾಗುತ್ತದೆಯೇ?
ಅಸೂಯೆ: “ನಮ್ಮ ನೆರೆಯವನಿಗೆ ಒಳಿತಾದಾಗ ನಮಗೆ ಉಂಟಾಗುವ ದುಃಖವೇ ಅಸೂಯೆ.” ಇತರರ ಏಳಿಗೆಯನ್ನು ಕಂಡು ನನಗೆ ದುಃಖವಾಗುತ್ತದೆಯೇ? ಆಟಗಳಲ್ಲಿ ಅವರ ಯಶಸ್ಸನ್ನು ಕಂಡು? ಕ್ರೀಡಾಸ್ಪರ್ಧೆಗಳಲ್ಲಿ ಅವರ ಯಶಸ್ಸನ್ನು ಕಂಡು? ಅವರ ಸೋಲುಗಳಲ್ಲಿ ನಾನು ಸಂತೋಷಪಡುತ್ತೇನೆಯೇ? ಇತರರ ಸಂಪತ್ತನ್ನು ಕಂಡು ಅಸೂಯೆಪಡುತ್ತೇನೆಯೇ?
ಆಲಸ್ಯ: “ಆಲಸ್ಯವು ಒಂದು ಬಗೆಯ ಹೇಡಿತನ ಮತ್ತು ಬೇಸರವಾಗಿದ್ದು, ನಮ್ಮನ್ನು ನಾವು ಶಿಸ್ತಿಗೆ ಒಳಪಡಿಸಿಕೊಳ್ಳುವ ಬದಲು ನಮ್ಮ ಕರ್ತವ್ಯಗಳನ್ನು ನಿರ್ಲಕ್ಷಿಸಿ ಬಿಟ್ಟುಬಿಡುವಂತೆ ಮಾಡುತ್ತದೆ.” ನನ್ನ ಕರ್ತವ್ಯಗಳನ್ನು ನಿರ್ಲಕ್ಷಿಸುವಷ್ಟು ವಿಶ್ರಾಂತಿಯ ಮೇಲೆ ಅತಿಯಾದ ಒಲವು ನನಗಿದೆಯೇ? ನಾನು ಸೋಮಾರಿತನದಿಂದ ವರ್ತಿಸುತ್ತೇನೆಯೇ? ವಿಶ್ರಾಂತಿಯನ್ನು ಅತಿಯಾಗಿ ಇಷ್ಟಪಡುತ್ತೇನೆಯೇ? ಪ್ರಾರ್ಥನೆಗಳಿಗೆ ಪ್ರತಿಕ್ರಿಯಿಸುವಾಗ ಸೋಮಾರಿತನದ ಭಂಗಿಗಳನ್ನು ತಾಳುತ್ತೇನೆಯೇ? ಮೈಚಾಚಿ ಒರಗಿಕೊಂಡಂತೆ ಮೊಣಕಾಲೂರುತ್ತೇನೆಯೇ? ವ್ಯರ್ಥ ಮಾತುಕತೆಯಲ್ಲಿ ಆನಂದಿಸುತ್ತೇನೆಯೇ? ದೇವರ ಸೇವೆಯಲ್ಲಿ ಉತ್ಸಾಹಭರಿತನಾಗಿರಲು ನಾನು ತಪ್ಪುತ್ತೇನೆಯೇ?
ಕಾಮಾಸಕ್ತಿ: “ಕಾಮಾಸಕ್ತಿ ಎಂದರೆ ಪಾವಿತ್ರ್ಯಕ್ಕೆ ವಿರುದ್ಧವಾದ ಸುಖಗಳ ಮೇಲಿನ ಪ್ರೀತಿ.” ನಾನು ಅಶುದ್ಧವಾದ ವಿಷಯಗಳನ್ನು ಬಯಸಿದ್ದೇನೆಯೇ ಅಥವಾ ಅಶುದ್ಧ ಕೃತ್ಯಗಳನ್ನು ಮಾಡಿದ್ದೇನೆಯೇ? ಅಶುದ್ಧ ಆಲೋಚನೆಗಳನ್ನು ಅಥವಾ ಬಯಕೆಗಳನ್ನು ಮನಸ್ಸಿನಲ್ಲಿ ಪೋಷಿಸುವುದರಲ್ಲಿ ಆನಂದಪಟ್ಟಿದ್ದೇನೆಯೇ? ನಾನು ಅಶ್ಲೀಲ ಬರಹಗಳನ್ನು ಓದಿದ್ದೇನೆಯೇ, ಅಶ್ಲೀಲ ಸಾಹಿತ್ಯವಿರುವ ಹಾಡುಗಳನ್ನು ಕೇಳಿದ್ದೇನೆಯೇ ಅಥವಾ ಛಾಯಾಚಿತ್ರಗಳಲ್ಲಿ, ದೂರದರ್ಶನದಲ್ಲಿ, ಚಲನಚಿತ್ರಗಳಲ್ಲಿ ಅಥವಾ ಅಂತರ್ಜಾಲದಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿದ್ದೇನೆಯೇ? ಅಶುದ್ಧವಾದ ಮುತ್ತು, ಆಲಿಂಗನ ಅಥವಾ ಸ್ಪರ್ಶದ ಮೂಲಕ ನನ್ನಲ್ಲಿ ಅಥವಾ ಇನ್ನೊಬ್ಬರಲ್ಲಿ ಲೈಂಗಿಕ ಬಯಕೆಯನ್ನು ಕೆರಳಿಸಿದ್ದೇನೆಯೇ? ನಾನು ಒಬ್ಬನೇ ಅಶುದ್ಧ ಕೃತ್ಯಗಳನ್ನು, ಅಂದರೆ ಹಸ್ತಮೈಥುನವನ್ನು ಮಾಡಿದ್ದೇನೆಯೇ? ನಾನು ಅಸಭ್ಯವಾಗಿ ಉಡುಪು ಧರಿಸುತ್ತೇನೆಯೇ ಅಥವಾ ನನ್ನ ಬಾಹ್ಯರೂಪದ ಬಗ್ಗೆ ಅತಿಯಾಗಿ ಚಿಂತಿಸುತ್ತೇನೆಯೇ? ನಾನು ಅಸಭ್ಯ ಭಾಷೆಯನ್ನು ಬಳಸುತ್ತೇನೆಯೇ ಅಥವಾ ಅಶ್ಲೀಲ ಹಾಸ್ಯಗಳನ್ನು ಅಥವಾ ಕಥೆಗಳನ್ನು ಹೇಳುತ್ತೇನೆಯೇ ಅಥವಾ ಕೇಳುತ್ತೇನೆಯೇ? ನನ್ನ ಕಲ್ಪನೆಯಲ್ಲಿಯೂ ವ್ಯಭಿಚಾರದ ಬಯಕೆಗಳಿಗೆ ಮಣಿದಿದ್ದೇನೆಯೇ?
ಲೋಭ: “ಲೋಭ ಎಂದರೆ ಈ ಲೋಕದ ವಸ್ತುಗಳ ಮೇಲಿನ ಅತಿಯಾದ, ಅಕ್ರಮಿತ ಪ್ರೀತಿ.” ನಾನು ನನ್ನ ಹಣವನ್ನು ಸರಿಯಾಗಿ ಬಳಸುತ್ತೇನೆಯೇ ಅಥವಾ ಸ್ವಾರ್ಥದಿಂದ ಬಳಸುತ್ತೇನೆಯೇ? ನನ್ನ ಸಹಮಾನವರಿಗೆ ನ್ಯಾಯವಾಗಿ ಸಲ್ಲಿಸಬೇಕಾದ ಕರ್ತವ್ಯಗಳನ್ನು ನೆರವೇರಿಸುತ್ತೇನೆಯೇ? ಸಭೆಗೆ ನ್ಯಾಯವಾಗಿ ಸಲ್ಲಿಸಬೇಕಾದ ಕರ್ತವ್ಯಗಳನ್ನು ನೆರವೇರಿಸುತ್ತೇನೆಯೇ?
ಹೊಟ್ಟೆಬಾಕತನ: “ಹೊಟ್ಟೆಬಾಕತನ ಎಂದರೆ ತಿನ್ನುವುದು ಮತ್ತು ಕುಡಿಯುವುದರ ಮೇಲಿನ ಅತಿಯಾದ, ಅಕ್ರಮಿತ ಪ್ರೀತಿ.” ನಾನು ಬದುಕಲು ತಿನ್ನುತ್ತೇನೆಯೇ ಅಥವಾ ತಿನ್ನುವುದಕ್ಕಾಗಿಯೇ ಬದುಕುತ್ತೇನೆಯೇ? ನಾನು ಮಿತಿಮೀರಿ ಮದ್ಯಪಾನ ಮಾಡುತ್ತೇನೆಯೇ? ನಾನು ಕುಡಿದು ಮತ್ತನಾಗುತ್ತೇನೆಯೇ? ವೈದ್ಯರು ಸೂಚಿಸಿದ ಔಷಧಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತೇನೆಯೇ? ನಾನು ನಿಷೇಧಿತ ಮಾದಕವಸ್ತುಗಳನ್ನು ಬಳಸುತ್ತೇನೆಯೇ? ಮದ್ಯ ಮತ್ತು/ಅಥವಾ ಮಾದಕವಸ್ತುಗಳಿಗೆ ವ್ಯಸನಿಯಾಗಲು ನಾನು ಅವಕಾಶ ಕೊಟ್ಟಿದ್ದೇನೆಯೇ?
ಕೋಪ: “ನಮಗೆ ನೋವುಂಟುಮಾಡುವ ಅಥವಾ ಅಸಮಾಧಾನ ಉಂಟುಮಾಡುವ ಯಾವುದನ್ನಾದರೂ ಹಿಂಸಾತ್ಮಕವಾಗಿ ತಳ್ಳಿಹಾಕಲು ನಮ್ಮನ್ನು ಪ್ರೇರೇಪಿಸುವ ಮನಸ್ಸಿನ ಒಂದು ಭಾವನೆ.” ನಾನು ಸುಲಭವಾಗಿ ಕೋಪಗೊಳ್ಳುತ್ತೇನೆಯೇ? ಬಹುತೇಕ ಪ್ರತಿಯೊಂದು ಸಣ್ಣ ವಿಷಯವೂ ನನ್ನ ಕೋಪವನ್ನು ಕೆರಳಿಸುತ್ತದೆಯೇ? ಸಾಮಾನ್ಯವಾಗಿ ‘ಸಿಡುಕ’ ಎಂದು ಕರೆಯುವ ವ್ಯಕ್ತಿ ನಾನಾಗಿದ್ದೇನೆಯೇ? ಕೋಪದ ಮೊದಲ ಲಕ್ಷಣಗಳನ್ನೇ ಹತೋಟಿಗೆ ತರಲು ನಾನು ವಿಫಲನಾಗುತ್ತೇನೆಯೇ? ಎಲ್ಲರೊಂದಿಗೂ ಸೌಹಾರ್ದದಿಂದ ಇರಲು ನಾನು ವಿಫಲನಾಗುತ್ತೇನೆಯೇ? ನನಗಾದ ಅವಮಾನಗಳನ್ನು ಅಥವಾ ನೋವುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇನೆಯೇ, ಅಷ್ಟೇ ಅಲ್ಲದೆ ಆಗದಿದ್ದರೂ ಆಗಿವೆ ಎಂದು ಭಾವಿಸುತ್ತೇನೆಯೇ? ಇತರರ ದುರದೃಷ್ಟದಲ್ಲಿ ನಾನು ಸಂತೋಷಪಡುತ್ತೇನೆಯೇ? ಪ್ರತೀಕಾರ ತೀರಿಸಿಕೊಳ್ಳುವ ಮಾರ್ಗಗಳನ್ನು ಯೋಚಿಸುತ್ತೇನೆಯೇ? ‘ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು’ ಯೋಚಿಸುತ್ತೇನೆಯೇ? ನಾನು ವಾದಕ್ಕಿಳಿಯುವ ಸ್ವಭಾವದವನಾಗಿದ್ದೇನೆಯೇ? ಎಲ್ಲವನ್ನೂ ವಿರೋಧಿಸುವ ಮನೋಭಾವ ನನ್ನಲ್ಲಿದೆಯೇ? ವ್ಯಕ್ತಿಗಳನ್ನು, ಸ್ಥಳಗಳನ್ನು ಅಥವಾ ವಸ್ತುಗಳನ್ನು ಅಪಹಾಸ್ಯ ಮಾಡುವ ಚಟ ನನಗಿದೆಯೇ? ನನ್ನೊಂದಿಗೆ ಹೊಂದಿಕೊಂಡು ಹೋಗುವುದು ಕಷ್ಟವೇ? ನಾನು ದ್ವೇಷವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಯಾರೊಂದಿಗಾದರೂ ಮುನಿಸನ್ನು ಮುಂದುವರಿಸುತ್ತೇನೆಯೇ? ಇತರರ ತಪ್ಪುಗಳ ಬಗ್ಗೆ ಮಾತನಾಡುತ್ತೇನೆಯೇ? ಇತರರ ತಪ್ಪುಗಳನ್ನು ಅಥವಾ ಕೊರತೆಗಳನ್ನು ಬಹಿರಂಗಪಡಿಸುತ್ತೇನೆಯೇ? ತಪ್ಪಾದ ಉದ್ದೇಶದಿಂದ ಇತರರ ತಪ್ಪುಗಳನ್ನು ಬಹಿರಂಗಪಡಿಸುತ್ತೇನೆಯೇ?
