ಪ್ರ. ನನ್ನ ಪ್ರೇಯಸಿ ಬ್ಯಾಪ್ಟಿಸ್ಟ್ ಪಂಥದವಳು. ನಾನು ಕೆಲವು ಬಾರಿ ಅವಳೊಂದಿಗೆ ಪ್ರಾರ್ಥನಾ ಆರಾಧನೆಗಳಿಗೆ ಹೋಗಿದ್ದೇನೆ, ಆದರೆ ನಾನು ಕತೋಲಿಕನೆಂದು ಅವಳ ತಂದೆತಾಯಿಗೆ ಹೇಳಬಾರದೆಂದು ಅವಳು ಕೇಳಿಕೊಂಡಿದ್ದಾಳೆ. ಅವಳ ಕುಟುಂಬದವರು ತಮ್ಮ ವಿಶ್ವಾಸದಲ್ಲಿ ಬಹಳ ಸಂತೋಷವಾಗಿದ್ದಾರೆ ಮತ್ತು ತಮ್ಮ ಚರ್ಚಿಗಾಗಿ ಹಾಗೂ ಸಮುದಾಯಕ್ಕಾಗಿ ಬಹಳಷ್ಟು ಮಾಡುತ್ತಾರೆ ಎಂಬುದು ನನಗೆ ಕಾಣುತ್ತದೆ. ಆದರೆ ನಾನು ಅವಳ ಚರ್ಚಿನಲ್ಲಿರುವಾಗ, ಅದು ದಿವ್ಯಬಲಿಯಂತಿದೆ ಎಂದು ಸ್ವಲ್ಪವೂ ಅನಿಸುವುದಿಲ್ಲ. ಅಲ್ಲದೆ, ನಮ್ಮ ವಿಶ್ವಾಸಕ್ಕೆ ಹೊಂದಿಕೆಯಾಗದ ಕೆಲವು ಮಾತುಗಳನ್ನು ಅವರು ಹೇಳಿದ್ದಾರೆ. ನಮ್ಮ ಭವಿಷ್ಯದ ಬಗ್ಗೆ ನಾವು ಇನ್ನೂ ನಿಜವಾಗಿ ಮಾತನಾಡಿಲ್ಲ, ಆದ್ದರಿಂದ ಬಹುಶಃ ಇದು ಅಷ್ಟೇನೂ ಮುಖ್ಯವಲ್ಲದಿರಬಹುದು. ಆದರೆ ನಾನು ಯಾವ ಧರ್ಮಸಭೆಗೆ ಸೇರಿದವನು ಎಂಬುದನ್ನು ಅವಳ ತಂದೆತಾಯಿಗೆ ನಾವು ಮುಚ್ಚುಮರೆಯಿಲ್ಲದೆ ಹೇಳಬೇಕು ಎಂದು ನನಗನಿಸುತ್ತದೆ. ಇದು ನನಗೆ ಮುಖ್ಯವೆಂದು ಅವಳಿಗೆ ಹೇಗೆ ಮನವರಿಕೆ ಮಾಡಿಕೊಟ್ಟು, ಅನಂತರ ಅವಳ ಕುಟುಂಬದವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲಿ?
ಉ. ನಿಮ್ಮ ಪ್ರೇಯಸಿ ಮತ್ತು ಅವಳ ಕುಟುಂಬದವರೊಂದಿಗೆ ಈ ವಿಷಯವನ್ನು ಚರ್ಚಿಸುವುದರಲ್ಲಿ ಒಂದು ಬಗೆಯ ತುರ್ತು ಅಗತ್ಯವಿದೆ ಎಂದು ನಿಮಗೆ ಅನಿಸುತ್ತಿರುವಂತಿದೆ. ನಿಮಗೆ ಹಾಗೆ ಅನಿಸುತ್ತಿದ್ದರೆ, ಇದನ್ನು ಮುಂದೂಡದೆ ಬೇಗನೇ ಚರ್ಚಿಸಬೇಕೆಂದು ನಾನು ನಿಮ್ಮನ್ನು ಬಲವಾಗಿ ಪ್ರೋತ್ಸಾಹಿಸುತ್ತೇನೆ. ನೀವು ಅಂದುಕೊಂಡಿರುವುದಕ್ಕಿಂತಲೂ ಇದು ಬಹಳ ಹೆಚ್ಚು ಮುಖ್ಯವಾಗಿರಬಹುದು. ವಿವರಿಸುತ್ತೇನೆ.
ಬ್ಯಾಪ್ಟಿಸ್ಟರೂ ಕತೋಲಿಕರೂ ಯೇಸು ನಮ್ಮ ರಕ್ಷಕರೆಂಬ ಸಾಮಾನ್ಯ ವಿಶ್ವಾಸವನ್ನು ಹಂಚಿಕೊಳ್ಳುತ್ತೇವೆ. ಬೈಬಲ್ ದೇವರ ಪ್ರೇರಿತ ವಾಕ್ಯವೆಂದು ನಾವಿಬ್ಬರೂ ನಂಬುತ್ತೇವೆ (ಆದರೆ ಪವಿತ್ರ ಗ್ರಂಥವನ್ನು ನಾವು ಅರ್ಥಮಾಡಿಕೊಳ್ಳುವ ವಿಧಾನಗಳು ಭಿನ್ನವಾಗಿವೆ), ಪವಿತ್ರ ತ್ರಿತ್ವದಲ್ಲಿ ನಂಬಿಕೆಯಿಡುತ್ತೇವೆ ಮತ್ತು ಇನ್ನೂ ಅನೇಕ ನಂಬಿಕೆಗಳನ್ನು ಹಂಚಿಕೊಳ್ಳುತ್ತೇವೆ. ಆದರೆ ನಮ್ಮ ನಡುವೆ ಕೆಲವು ಸ್ಪಷ್ಟವಾದ ಭಿನ್ನತೆಗಳೂ ಇವೆ. ನೀವು ಮುಂದೊಂದು ದಿನ ಮದುವೆಯಾದರೆ, ಒಂದೇ ಸೂರಿನಡಿ ನೀವು ನಿಮ್ಮ ಕತೋಲಿಕ ವಿಶ್ವಾಸವನ್ನು ಸಕ್ರಿಯವಾಗಿ ಆಚರಿಸುವುದಕ್ಕೂ ಅವಳು ತನ್ನ ಬ್ಯಾಪ್ಟಿಸ್ಟ್ ವಿಶ್ವಾಸವನ್ನು ಸಕ್ರಿಯವಾಗಿ ಆಚರಿಸುವುದಕ್ಕೂ ಈ ಭಿನ್ನತೆಗಳು ಅಡಚಣೆಯಾಗಬಹುದು.
ಮೊದಲನೆಯದಾಗಿ, ನೀವು ಮದುವೆಯಾಗುವುದಾದರೆ, ಕತೋಲಿಕ ಚರ್ಚಿನಲ್ಲಿ ಮದುವೆಯಾಗಬೇಕು ಅಥವಾ ಕನಿಷ್ಠಪಕ್ಷ “ಸಭಾನಿಯಮದ ಪ್ರಕಾರದ ವಿವಾಹವಿಧಿಯಿಂದ ವಿನಾಯಿತಿ” ಎಂದು ಕರೆಯಲಾಗುವ ಅನುಮತಿಯನ್ನು ಪಡೆಯಬೇಕು. ಇಲ್ಲವಾದರೆ, ಕತೋಲಿಕರಾದ ನೀವು ಕತೋಲಿಕ ಸಭೆಯ ಹೊರಗೆ ಮಾಡಿಕೊಳ್ಳುವ ಯಾವುದೇ ಮದುವೆಯು ಅಮಾನ್ಯವಾಗಿದ್ದು, ಅದು ವಿವಾಹವೇ ಅಲ್ಲವೆಂದು ನಾವು ನಂಬುತ್ತೇವೆ. ಇದನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯ. ಅಲ್ಲದೆ, ಮತ್ತೊಂದು ಕ್ರೈಸ್ತ ಪಂಥದವರನ್ನು ಮದುವೆಯಾಗುವಾಗ, ನೀವು ನಿಮ್ಮ ವಿಶ್ವಾಸದ ಆಚರಣೆಯನ್ನು ಮುಂದುವರಿಸುವುದಾಗಿಯೂ ದೇವರು ನಿಮಗೆ ಕರುಣಿಸುವ ಎಲ್ಲ ಮಕ್ಕಳನ್ನು ಕತೋಲಿಕ ವಿಶ್ವಾಸದಲ್ಲಿ ಬೆಳೆಸುವುದಾಗಿಯೂ ವಾಗ್ದಾನ ಮಾಡಬೇಕು. ಪ್ರಾಮಾಣಿಕವಾದ ಈ ವಾಗ್ದಾನವಿಲ್ಲದೆ, ನೀವು ಮಾನ್ಯವಾದ ವಿವಾಹವನ್ನು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ನಾನು ಅನೇಕ ಬ್ಯಾಪ್ಟಿಸ್ಟರನ್ನು ಭೇಟಿಯಾಗಿದ್ದೇನೆ. ಅವರು ತುಂಬ ಒಳ್ಳೆಯ ಜನರಾಗಿದ್ದು, ತಮ್ಮ ವಿಶ್ವಾಸಕ್ಕೆ ಬಹಳ ಬದ್ಧರಾಗಿದ್ದಾರೆಂದು ಕಂಡುಕೊಂಡಿದ್ದೇನೆ. ಇದು ಒಳ್ಳೆಯದೇ. ಆದರೆ ಅವರಲ್ಲಿ ಅನೇಕರಿಗೆ ನಮ್ಮ ಕತೋಲಿಕ ವಿಶ್ವಾಸದ ಬಗ್ಗೆ ಗಂಭೀರವಾದ ಸಂದೇಹಗಳಿವೆ ಎಂದು ನಾನು ಭಾವಿಸುತ್ತೇನೆ. ವಿಶ್ವಾಸದ ಕೆಲವು ವಿಷಯಗಳಲ್ಲಿ ನಮಗೂ ಅವರಿಗೂ ಗಂಭೀರವಾದ ಭಿನ್ನಾಭಿಪ್ರಾಯಗಳಿವೆ. ಆದ್ದರಿಂದ, ಅವಳು ಒಬ್ಬ ಕತೋಲಿಕನೊಂದಿಗೆ ಪ್ರೇಮಸಂಬಂಧ ಹೊಂದಿರುವುದರ ಬಗ್ಗೆ ಅವಳ ಹೆತ್ತವರು ಏನು ಯೋಚಿಸಬಹುದು ಎಂದು ನನಗೆ ಅನಿಸುತ್ತದೆ. ಮುಂದೆ ನೀವು ಕತೋಲಿಕ ಚರ್ಚಿನಲ್ಲಿ ಮದುವೆಯಾಗಿ, ಮಕ್ಕಳನ್ನು ಕತೋಲಿಕ ವಿಶ್ವಾಸದಲ್ಲಿ ಬೆಳೆಸುವುದಾದರೆ ಅವರು ಏನು ಹೇಳಬಹುದು ಎಂದೂ ನಾನು ಯೋಚಿಸುತ್ತೇನೆ.
ಈಗಲೇ ಮದುವೆಯ ಬಗ್ಗೆ ಮಾತನಾಡುವುದು ತೀರಾ ಅವಸರವೆಂದು ನಿಮಗೆ ಅನಿಸಬಹುದು ಎಂಬುದು ನನಗೆ ಅರ್ಥವಾಗುತ್ತದೆ. ಆದರೆ ಜೀವನಪೂರ್ತಿ ಹೊಂದಾಣಿಕೆಯಿಂದ ಬಾಳಲು ಸಾಧ್ಯವೆಂದು ನೀವು ನಂಬುವ ವ್ಯಕ್ತಿಯೊಂದಿಗೆ ಮಾತ್ರ ಪ್ರೇಮಸಂಬಂಧ ಬೆಳೆಸುವುದು ಒಳ್ಳೆಯದು ಎಂದು ನಾನು ಭಾವಿಸುತ್ತೇನೆ. ಸ್ಪಷ್ಟವಾದ ಅಡಚಣೆಯೊಂದು ನಿಮ್ಮ ಗಮನಕ್ಕೆ ಬಂದರೆ, ಅದರ ಬಗ್ಗೆ ತಕ್ಷಣವೇ ಮಾತನಾಡುವುದು ಬಹುಶಃ ಒಳ್ಳೆಯದು.
ಇಲ್ಲಿ ಎರಡು ಪ್ರಾಯೋಗಿಕ ಸಲಹೆಗಳಿವೆ: ಮೊದಲನೆಯದಾಗಿ, ನಿಮ್ಮೊಂದಿಗೆ ದಿವ್ಯಬಲಿಯಲ್ಲಿ ಭಾಗವಹಿಸಲು ನಿಮ್ಮ ಗೆಳತಿಯನ್ನು ಆಹ್ವಾನಿಸಿ ಎಂದು ನಾನು ಹೇಳುತ್ತೇನೆ. ಅವಳು ಇದಕ್ಕೆ ಒಪ್ಪುವ ಮನಸ್ಸು ಹೊಂದಿದ್ದಾಳೆಂದು ಆಶಿಸುತ್ತೇನೆ. ಎರಡನೆಯದಾಗಿ, ನೀವು ಕತೋಲಿಕರೆಂದೂ ಅವಳು ನಿಮ್ಮೊಂದಿಗೆ ದಿವ್ಯಬಲಿಯಲ್ಲಿ ಭಾಗವಹಿಸುತ್ತಿದ್ದಾಳೆಂದೂ ತನ್ನ ಹೆತ್ತವರಿಗೆ ತಿಳಿಸುವಂತೆ ನಿಮ್ಮ ಗೆಳತಿಯನ್ನು ಕೇಳಿ ಎಂದು ನಾನು ಹೇಳುತ್ತೇನೆ. ಇವೆಲ್ಲವನ್ನೂ ಅವರು ಚೆನ್ನಾಗಿ ಸ್ವೀಕರಿಸಿದರೆ, ನಿಮ್ಮ ವಿಶ್ವಾಸವು ನಿಮ್ಮ ಸಂಬಂಧಕ್ಕೆ ಅಡಚಣೆಯಾಗುವುದಿಲ್ಲ ಎಂಬುದಕ್ಕೆ ಇದು ಒಳ್ಳೆಯ ಸೂಚನೆ. ಆದರೆ ಇದರಿಂದ ಗಂಭೀರ ಸಮಸ್ಯೆಗಳು ಉಂಟಾದರೆ, ಒಂದೆರಡು ವರ್ಷಗಳ ನಂತರ ತಿಳಿದುಕೊಳ್ಳುವುದಕ್ಕಿಂತ ಈಗಲೇ ಅದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಒಂದು ದಿನ ಅವಳನ್ನೂ ನಿಮ್ಮ ಕತೋಲಿಕ ವಿಶ್ವಾಸವನ್ನೂ ಬಿಟ್ಟು ಯಾವುದಾದರೂ ಒಂದನ್ನು ಆರಿಸಿಕೊಳ್ಳಲೇಬೇಕಾದ ಪರಿಸ್ಥಿತಿಗೆ ನೀವು ಸಿಲುಕುವುದು ಸಂಭವಿಸಬಹುದಾದ ಅತ್ಯಂತ ಕೆಟ್ಟ ಸಂಗತಿ. ನೀವು ಅಂತಹ ಪರಿಸ್ಥಿತಿಯಲ್ಲಿ ಇರಬೇಕೆಂದು ದೇವರು ಬಯಸುವುದಿಲ್ಲ. ಆದ್ದರಿಂದ ಆ ಬಹಳ ಕಷ್ಟಕರ ಪರಿಸ್ಥಿತಿಗೆ ಸಿಲುಕುವ ಮೊದಲೇ, ಈಗಲೇ ಅವರ ಪ್ರತಿಕ್ರಿಯೆ ಹೇಗಿರುತ್ತದೆಂದು ಪರೀಕ್ಷಿಸಿ ನೋಡುವಂತೆ ನಾನು ಸಲಹೆ ನೀಡುತ್ತೇನೆ.
ಇನ್ನಷ್ಟು ಕತೋಲಿಕ ಪ್ರಶ್ನೋತ್ತರಗಳು
