ಪ್ರ. ನಮಗೆ ಪಾಪನಿವೇದನೆ ಏಕೆ ಬೇಕು? ದೇವರಿಗೆ ಎಲ್ಲವೂ ತಿಳಿದಿರುವಾಗ, ನಾವು ಏನಾದರೂ ತಪ್ಪು ಮಾಡಿದಾಗ ಅದಕ್ಕಾಗಿ ನಮಗೆ ಪಶ್ಚಾತ್ತಾಪವಾಗಿದೆ ಎಂದು ನೇರವಾಗಿ ಅವರಿಗೇ ಹೇಳಿದರೆ ಸಾಲದೇ?
ಉ. ಕೆಲವರಿಗೆ ಪಾಪನಿವೇದನೆಯು ನಮ್ಮ ವಿಶ್ವಾಸಜೀವನದ ಅತ್ಯಂತ ಕಷ್ಟಕರವಾದ ಅಂಶಗಳಲ್ಲಿ ಒಂದಾಗಿರಬಹುದು. ಇನ್ನು ಕೆಲವರು ಪಾಪನಿವೇದನೆಯನ್ನು ಬಹಳ ಕಾತರದಿಂದ ಎದುರುನೋಡುತ್ತಾರೆ. ನಿಮ್ಮ ಪ್ರಶ್ನೆ ಒಳ್ಳೆಯದು. ಕೆಲವು ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ.
ಮೊದಲನೆಯದಾಗಿ, “ದೇವರಿಗೆ ಎಲ್ಲವೂ ತಿಳಿದಿದೆ” ಎಂಬುದು ಸತ್ಯ. ಅದನ್ನು ನಾವು ಸರ್ವಜ್ಞತೆ ಎಂದು ಕರೆಯುತ್ತೇವೆ. ಹೌದು, ನೀವು ಮಾಡಿರುವ ಎಲ್ಲವೂ ಅವರಿಗೆ ತಿಳಿದಿದೆ; ಅದಕ್ಕಾಗಿ ನಿಮಗೆ ಪಶ್ಚಾತ್ತಾಪವಿದೆಯೋ ಇಲ್ಲವೋ ಎಂಬುದೂ ಅವರಿಗೆ ತಿಳಿದಿದೆ. ಆದರೆ ನೀವು ಮಾಡಿದ್ದನ್ನು ದೇವರು “ತಿಳಿದಿರುವುದಕ್ಕೂ” ಅವರು ಕ್ಷಮಿಸುವ ಕ್ರಿಯೆಗೂ ಬಹಳ ವ್ಯತ್ಯಾಸವಿದೆ.
ಉದಾಹರಣೆಗೆ, ನಿಮಗೆ ಬಹಳ ಆಪ್ತನಾದ ಸ್ನೇಹಿತನ ವಿರುದ್ಧ ನೀವು ಪಾಪ ಮಾಡಿ, ನಂತರ ಅದಕ್ಕಾಗಿ ಪಶ್ಚಾತ್ತಾಪಪಟ್ಟಿದ್ದೀರಿ ಎಂದುಕೊಳ್ಳಿ. ನಿಮ್ಮ ಪರಿಚಯವಿರುವುದರಿಂದಲೇ, ನಿಮಗೆ ನಿಜವಾಗಿಯೂ ಪಶ್ಚಾತ್ತಾಪವಾಗಿದೆ ಎಂದು ನಿಮ್ಮ ಸ್ನೇಹಿತನಿಗೆ ಅರಿವಾಗಬಹುದು. ಆದರೆ ನಿಮ್ಮ ಸ್ನೇಹಿತನ ಒಳ್ಳೆಯತನ ಮತ್ತು ಕ್ಷಮೆ ನಿಮಗೆ ಸಿಕ್ಕೇ ಸಿಗುತ್ತದೆಂದು ನೀವು ಭಾವಿಸಿಕೊಳ್ಳಬಹುದು ಎಂದರ್ಥವಲ್ಲ. ಇಂತಹ ಸಂದರ್ಭದಲ್ಲಿ ಮಾಡಬೇಕಾದ ಅತ್ಯುತ್ತಮ ಕೆಲಸವೆಂದರೆ, ನಿಮ್ಮ ಸ್ನೇಹಿತನೊಂದಿಗೆ ಕುಳಿತು, ನಿಮಗೆ ಪಶ್ಚಾತ್ತಾಪವಾಗಿದೆ ಎಂದು ಹೇಳುವುದು ಮತ್ತು ಅವನು ನಿಮ್ಮನ್ನು ಕ್ಷಮಿಸಿದ್ದಾನೆ ಎಂಬ ಮಾತನ್ನು ಅವನಿಂದಲೇ ಕೇಳುವುದು. ಈ ಮಾನವೀಯ ಸಂಭಾಷಣೆಯು ಸಮಾಧಾನವನ್ನು ಉಂಟುಮಾಡುತ್ತದೆ.
ದೇವರೊಂದಿಗೂ ಹೀಗೆಯೇ. ದೇವರು ಅಪಾರ ಕರುಣೆಯುಳ್ಳವರು; ಅವರು ನಮ್ಮ ಪಾಪಗಳನ್ನೆಲ್ಲ ಕ್ಷಮಿಸಲು ಬಯಸುತ್ತಾರೆ. ಆದರೆ ನಿಜವಾದ ಸಮಾಧಾನ ಉಂಟಾಗಲು, ನೀವು ಆ ಮಾತುಗಳನ್ನು ನಿಜವಾಗಿಯೂ ಹೇಳಬೇಕು ಮತ್ತು ನಂತರ ನಿಮಗೆ ಕ್ಷಮೆ ದೊರೆತಿದೆ ಎಂದು ಯಾಜಕರು ಹೇಳುವ ಮಾತುಗಳನ್ನು ಕೇಳಬೇಕು ಎಂಬುದು ದೇವರ ಬಯಕೆ. ಆದ್ದರಿಂದ ಪಾಪನಿವೇದನೆಯು ದೇವರು ನಮ್ಮನ್ನು ಕ್ಷಮಿಸುವುದರ ಬಗ್ಗೆ ಮಾತ್ರವಲ್ಲ; ಅದು ಮಾನವೀಯ ಮಟ್ಟದಲ್ಲಿ ದೇವರೊಂದಿಗೆ ಸಮಾಧಾನಗೊಳ್ಳುವುದರ ಬಗ್ಗೆಯೂ ಆಗಿದೆ.
ದೇವರು ತಮದೇ ರೀತಿಯಲ್ಲಿ ನಮಗೆ ಕ್ಷಮೆಯನ್ನು ನೀಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಅವರು ಒಬ್ಬ ಮಾನವನ ಮೂಲಕ ನಮ್ಮನ್ನು ಕ್ಷಮಿಸುತ್ತಾರೆ. ಆ ಮಾನವ ಯಾರು? ನಮ್ಮಲ್ಲಿ ಒಬ್ಬರಾದ ಪಿತನ ಪುತ್ರನೇ ಅವರು. ದೇವರ ಕ್ಷಮೆಯನ್ನು ನೀಡುವವರು ಯೇಸುವೇ; ಯೇಸು ಪರಿಪೂರ್ಣ ದೇವರೂ ಪರಿಪೂರ್ಣ ಮಾನವರೂ ಆಗಿದ್ದಾರೆ. ಆದರೆ ಈಗ ಸ್ವರ್ಗಕ್ಕೆ ಆರೋಹಣಗೊಂಡಿರುವ ಯೇಸು ಇದನ್ನು ಹೇಗೆ ಮಾಡುತ್ತಾರೆ? ಆರೋಹಣಗೊಳ್ಳುವ ಮೊದಲು, ಅವರು ತಮ್ಮ ಪ್ರಥಮ ಯಾಜಕರಾದ ಅಪೊಸ್ತಲರಿಗೆ ಕ್ಷಮಿಸುವ ತಮ್ಮ ದೈವಿಕ ಅಧಿಕಾರವನ್ನು ನೀಡಿದರು. ಅವರು ಆ ಅಧಿಕಾರವನ್ನು ಇತರರಿಗೆ ಹಸ್ತಾಂತರಿಸಿದರು; ಅವರು ಮತ್ತಿತರರಿಗೆ ಹಸ್ತಾಂತರಿಸಿದರು. ಹೀಗೆ ಯುಗಯುಗಗಳ ಮೂಲಕ ಆ ಅಧಿಕಾರವು ನಮ್ಮ ಇಂದಿನ ಕಾಲದವರೆಗೂ ತಲುಪಿದೆ. ಯಾಜಕರು ಸ್ವತಃ ಅಪರಿಪೂರ್ಣರಾಗಿದ್ದರೂ, ಇತರರಿಗೆ ಯೇಸುವಿನ ಕ್ಷಮೆಯ ಮಾತುಗಳನ್ನು ನಿಜವಾಗಿಯೂ ನುಡಿಯುವ ಅವರ ಆಧ್ಯಾತ್ಮಿಕ ಅಧಿಕಾರವನ್ನು ಹೊಂದಿದ್ದಾರೆ. ಆದ್ದರಿಂದ, ಯಾಜಕರು “ನಾನು ನಿನ್ನನ್ನು ಪಾಪಗಳಿಂದ ವಿಮೋಚಿಸುತ್ತೇನೆ” ಎಂದು ಹೇಳುವಾಗ, ದೇವರ ಮಾನವ ಮುಖವಾಗಿರುವ ಯೇಸುವೇ ಆ ಮಾತುಗಳನ್ನು ನಮಗೆ ಹೇಳುತ್ತಿರುವುದನ್ನು ನಾವು ಕೇಳಬೇಕು.
ತಮ್ಮ ಕ್ಷಮೆಯನ್ನು ನೀಡಲು ದೇವರು ಯಾಜಕರನ್ನು ಬಳಸಿಕೊಳ್ಳುವುದನ್ನು ಏಕೆ ಆರಿಸಿಕೊಂಡರು? ನಿಜ ಹೇಳಬೇಕೆಂದರೆ, ಆ ಪ್ರಶ್ನೆಗೆ ನಮ್ಮ ಬಳಿ ಸಂಪೂರ್ಣವಾದ ಉತ್ತರವಿಲ್ಲ. ಖಂಡಿತವಾಗಿಯೂ, ಈ ವಿಷಯದ ಕುರಿತು ಸಭೆಯ ಇತಿಹಾಸದುದ್ದಕ್ಕೂ ಅದ್ಭುತವಾದ ಬರಹಗಳು, ಚಿಂತನೆಗಳು ಮತ್ತು ಬೋಧನೆಗಳು ಬಂದಿವೆ. ಆದರೆ ಅಂತಿಮವಾಗಿ, ದೇವರು ನಮಗೆ ತಮ್ಮ ಕ್ಷಮೆಯನ್ನು ಹೇಗೆ ನೀಡುತ್ತಾರೆ ಎಂಬ ಈ ರಹಸ್ಯವನ್ನು ನಾವು ಸ್ವರ್ಗದಲ್ಲಿರುವಾಗ ಮಾತ್ರ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವೆವು. ಸದ್ಯಕ್ಕೆ, ಯೇಸು ಬೋಧಿಸಿದ್ದನ್ನು ನಾವು ಸರಳವಾಗಿ ಅನುಸರಿಸಬೇಕು ಮತ್ತು ಅವರು ಕ್ಷಮೆಯನ್ನು ನೀಡುತ್ತಾರೆ ಎಂದು ನಮಗೆ ತಿಳಿದಿರುವ ರೀತಿಯಲ್ಲೇ ಅದನ್ನು ಸ್ವೀಕರಿಸಬೇಕು.
ಮಾನಸಿಕ ದೃಷ್ಟಿಯಿಂದ ನೋಡಿದರೆ, ಯಾಜಕನಾಗಿ ನಾನು ನನ್ನ ಬಾಯಿಂದ ಆ ಮಾತುಗಳನ್ನು ನೇರವಾಗಿ ಕೇಳುವುದರಿಂದ ಅನೇಕ ಜನರಿಗೆ ಪ್ರಯೋಜನವಾಗಿರುವುದನ್ನು ಕಂಡಿದ್ದೇನೆ. ಭಯ ಮತ್ತು ನಾಚಿಕೆಯಿಂದ ಪಾಪನಿವೇದನೆಯ ಸ್ಥಳಕ್ಕೆ ಬರುವವರು, ಬಿಡುಗಡೆಯನ್ನು ಹೊಂದಿ ಶಾಂತಿಯಿಂದ ಹೊರಹೋಗುವುದನ್ನು ನಾನು ಎಷ್ಟೋ ಬಾರಿ ಕಂಡಿದ್ದೇನೆ. ಆದ್ದರಿಂದ ಇದು ನಿಜವಾಗಿಯೂ ಫಲ ನೀಡುತ್ತದೆ. ನೀವೂ ಬೇಗನೇ ಪಾಪನಿವೇದನೆ ಮಾಡಲು ಪ್ರಯತ್ನಿಸಿ!
ಇನ್ನಷ್ಟು ಕತೋಲಿಕ ಪ್ರಶ್ನೋತ್ತರಗಳು
