ಕನ್ನಡ

ಪೀಠಿಕೆ

ವಿಷಯಸೂಚಿಗೆ ಹಿಂತಿರುಗಿ

ನಮ್ಮ ದೇವರಾದ ಕರ್ತರನ್ನು ನಮ್ಮ ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಆತ್ಮದಿಂದಲೂ ಶಕ್ತಿಯಿಂದಲೂ ಪ್ರೀತಿಸಲು ನಾವು ಕರೆಯಲ್ಪಟ್ಟಿದ್ದೇವೆ (ನೋಡಿ ಮತ್ತಾಯ 22:37).  ನಾವು ಕ್ರೈಸ್ತರಾಗಿರಲು ಬಯಸುವುದಾದರೆ, ಇದು ನಮ್ಮ ಇಷ್ಟಕ್ಕೆ ಬಿಟ್ಟ ಆಯ್ಕೆಯಲ್ಲ!  ಇದು ದೇವರು ನೀಡುವ ಪ್ರೀತಿಯ ಆಜ್ಞೆ; ಅವರ ದೈವಿಕ ಜೀವದಲ್ಲಿ ಪಾಲುಗೊಳ್ಳುವ ಆಹ್ವಾನವೂ ಆಗಿದೆ.  ನಾವು ಈ ಮಾತುಗಳನ್ನು ಆಲಿಸಿ, ಅವುಗಳನ್ನು ಹೃದಯದಲ್ಲಿ ಆಳವಾಗಿ ಸ್ವೀಕರಿಸಿ, ನಮ್ಮ ದೈನಂದಿನ ಜೀವನದಲ್ಲಿ ಅವುಗಳನ್ನು ನೆರವೇರಿಸಲು ಹಂಬಲಿಸಬೇಕು.

ನಾವು ಇದನ್ನು ಹೇಗೆ ಮಾಡುವುದು?  ನಮ್ಮ ಸರ್ವಸ್ವದಿಂದ ದೇವರನ್ನು ಪ್ರೀತಿಸುವುದು ಹೇಗೆ?  ನಿಮ್ಮ ಪೂರ್ಣ “ಹೃದಯದಿಂದಲೂ ಮನಸ್ಸಿನಿಂದಲೂ ಆತ್ಮದಿಂದಲೂ ಶಕ್ತಿಯಿಂದಲೂ” ಎಂದು ಹೇಳುವುದರ ಅರ್ಥ, ಎಲ್ಲವನ್ನೂ ಒಳಗೊಂಡಿದೆ ಎಂದೇ!  ಅಂದರೆ, ನಾವು ಏನಾಗಿದ್ದೇವೋ ಅದೆಲ್ಲವೂ.  ನಮ್ಮ ಇಡೀ ಅಸ್ತಿತ್ವವೇ.  ಆದ್ದರಿಂದ, ನಾವು ಪ್ರೀತಿಸಲು ಕರೆಯಲ್ಪಟ್ಟಿರುವ ರೀತಿಯಲ್ಲಿ ದೇವರನ್ನು ಪ್ರೀತಿಸಲು ನಮ್ಮ ಕಡೆಯಿಂದ ಆಮೂಲಾಗ್ರ ಬದ್ಧತೆ ಅಗತ್ಯ.  ಒಂದರ್ಥದಲ್ಲಿ ಹೇಳುವುದಾದರೆ, ನಾವು “ಸಂಪೂರ್ಣವಾಗಿ ನಮ್ಮನ್ನು ತೊಡಗಿಸಿಕೊಳ್ಳಬೇಕು.”  ಹಾಗಾದರೆ, ಮತ್ತೆ ಕೇಳೋಣ: ನಾವು ಇದನ್ನು ಹೇಗೆ ಮಾಡುವುದು?

ಇದಕ್ಕೆ ಕೀಲಿಕೈ ಆರಾಧನೆ!  ದೇವರನ್ನು ಆರಾಧಿಸುವುದೆಂದರೆ, ನಾವು ಪ್ರೀತಿಸಲು ಕರೆಯಲ್ಪಟ್ಟಿರುವ ರೀತಿಯಲ್ಲಿ ದೇವರನ್ನು ಪ್ರೀತಿಸುವುದು.  ದೇವರನ್ನು ಆರಾಧಿಸುವುದೆಂದರೆ, ಅವರೇ ನಿಜವಾಗಿಯೂ ನಮ್ಮ ಜೀವನದ ದೇವರಾಗಿರುವುದು ಮತ್ತು ಬೇರೆ ಯಾವುದೂ ಅದಕ್ಕೆ ಅಡ್ಡಿಯಾಗದಿರುವುದು.  ಅಂದರೆ, ನಮ್ಮ ಹೃದಯ, ಆತ್ಮ ಮತ್ತು ಮನಸ್ಸು ದೇವರಲ್ಲಿ ಮುಳುಗಿ, ಅವರ ಸಾನ್ನಿಧ್ಯದಿಂದ ತುಂಬಲು ನಾವು ಅವಕಾಶ ನೀಡುವುದು.  ಇದೇ ಆರಾಧನೆ.  ಇದೇ ನಮ್ಮ ಜೀವನದ ಕರೆ.

ದೇವರನ್ನು ಆರಾಧಿಸಲು ಎರಡು ಮೂಲಭೂತ ಸಂಗತಿಗಳು ಅಗತ್ಯ.  ಇದು ಬಹಳ ಸರಳ.  ಮೊದಲನೆಯದಾಗಿ, ದೇವರು ನಮ್ಮಲ್ಲಿ ಕಾರ್ಯನಿರ್ವಹಿಸಬೇಕು.  ಅಂದರೆ, ಅವರು ಮಾತನಾಡುತ್ತಾರೆ, ನಮ್ಮನ್ನು ಕರೆಯುತ್ತಾರೆ ಮತ್ತು ತಮ್ಮ ಅನುಗ್ರಹದ ಜೀವನದಲ್ಲಿ ಪ್ರವೇಶಿಸಲು ನಮ್ಮನ್ನು ಆಹ್ವಾನಿಸುತ್ತಾರೆ.  ಆದ್ದರಿಂದ ಆರಾಧನೆಯು ಮೊಟ್ಟಮೊದಲಿಗೆ ನಮ್ಮ ಜೀವನದಲ್ಲಿ ದೇವರ ಕ್ರಿಯೆಯಾಗಿದೆ.  ಎರಡನೆಯದಾಗಿ, ಆರಾಧನೆಯೆಂದರೆ ಆ ಅದ್ಭುತ ಆಹ್ವಾನಕ್ಕೆ ನಾವು ಪ್ರತಿಕ್ರಿಯಿಸುವುದು.  ಅಂದರೆ, ನಾವು ದೇವರಿಗೆ “ಹೌದು” ಎನ್ನುವುದು.  ಅವರ ಆಹ್ವಾನಕ್ಕೆ “ಹೌದು,” ಅವರ ಚಿತ್ತಕ್ಕೆ “ಹೌದು” ಎನ್ನುವುದು.  ಇದು ವಿಶೇಷವಾಗಿ ಶರಣಾಗತಿಯ ಮೂಲಕ ನಡೆಯುತ್ತದೆ.  ನಾವು ಊಹಿಸಬಹುದಾದುದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಪ್ರೀತಿಸುವ ದೇವರು ನೀಡುವ ಆ ಮಹಿಮಾಮಯ ಆಹ್ವಾನಕ್ಕೆ ಶರಣಾಗುವುದು!

ಆರಾಧನೆಯೇ ಪ್ರಾರ್ಥನೆ.  ಅದು ನಿಜವಾದ ಪ್ರಾರ್ಥನೆ.  ಆದರೆ ಅದು ನಾವು ಚರ್ಚಿನಲ್ಲಿ ಅಥವಾ ನಿರ್ದಿಷ್ಟ ಪ್ರಾರ್ಥನಾ ಸಮಯದಲ್ಲಿ ಸಲ್ಲಿಸುವ ಪ್ರಾರ್ಥನೆ ಮಾತ್ರವಲ್ಲ.  ಬದಲಾಗಿ, ನಾವು ಮಾಡುವ ಎಲ್ಲದರಲ್ಲಿಯೂ ನಮ್ಮ ಇಡೀ ಅಸ್ತಿತ್ವದಲ್ಲಿಯೂ ದಿನದ 24 ಗಂಟೆಗಳೂ ವಾರದ 7 ದಿನಗಳೂ ದೇವರನ್ನು ಆರಾಧಿಸಲು ಕರೆಯಲ್ಪಟ್ಟಿದ್ದೇವೆ.  ಆರಾಧನೆಗೆ ನಿರ್ದಿಷ್ಟ ಸಮಯಗಳನ್ನೂ ಆರಾಧಿಸದಿರುವ ಸಮಯಗಳನ್ನೂ ನಾವು ನಿಗದಿಪಡಿಸಲಾಗುವುದಿಲ್ಲ.  ಎಲ್ಲವನ್ನೂ ಅವರಿಗೆ ಸಮರ್ಪಿಸುತ್ತಾ ನಿರಂತರವಾಗಿ ದೇವರ ಸಾನ್ನಿಧ್ಯದಲ್ಲಿರಲು ನಮಗಿರುವ ಕರೆ ಇದು.  

ಇದನ್ನು ಹೇಳಿದ ಮೇಲೂ, ನಮ್ಮಲ್ಲಿ ಪ್ರತಿಯೊಬ್ಬರೂ ಪ್ರತಿದಿನವೂ, ವಿಶೇಷವಾಗಿ ಭಾನುವಾರದಂದು, ದೇವರ ನೇರ ಆರಾಧನೆಗಾಗಿ ಮಾತ್ರವೇ ಸಮಯವನ್ನು ಮೀಸಲಿಡಬೇಕೆಂಬುದನ್ನು ತಿಳಿಸುವುದು ಮುಖ್ಯ.  ಹೌದು, ಪ್ರತಿಕ್ಷಣವೂ ಅವರ ಚಿತ್ತಕ್ಕೆ ಪ್ರತಿಕ್ರಿಯಿಸುತ್ತಾ ನಿರಂತರವಾಗಿ ಅವರ ಸಾನ್ನಿಧ್ಯದಲ್ಲಿ ಜೀವಿಸಲು ನಾವು ಶ್ರಮಿಸಬೇಕು. ಆದರೆ ಅದನ್ನು ಚೆನ್ನಾಗಿ ಮಾಡಲು, ಅದಕ್ಕಾಗಿಯೇ ಸಂಪೂರ್ಣವಾಗಿ ಮೀಸಲಾದ ಸಮಯ ನಮಗೆ ಬೇಕು.  ಜೀವನದ ಇತರ ಎಲ್ಲ ಚಟುವಟಿಕೆಗಳನ್ನು ಬದಿಗಿಟ್ಟು, ನಮ್ಮ ದೇವರನ್ನು ನೇರವಾಗಿ ಪ್ರೀತಿಸುವುದಕ್ಕೂ ಆರಾಧಿಸುವುದಕ್ಕೂ ನಮ್ಮ ಸಂಪೂರ್ಣ ಗಮನವನ್ನು ನೀಡಲು ನಮಗೆ ಸಮಯ ಬೇಕು.  ನಾವು ಅದನ್ನು ಚೆನ್ನಾಗಿ ಮಾಡಿದರೆ, ನಮ್ಮ ದೈನಂದಿನ ಜೀವನದಲ್ಲಿ ದೇವರ ಸಾನ್ನಿಧ್ಯವನ್ನು ತರುವುದು ನಮಗೆ ಇನ್ನಷ್ಟು ಸುಲಭವಾಗುತ್ತದೆ.

ಈ ಪುಸ್ತಕವು ತ್ರಿಯೇಕ ದೇವರ ಆರಾಧನೆಯ ಕುರಿತಾಗಿದೆ!  ಈ ಪುಟಗಳಲ್ಲಿ ಪ್ರಸ್ತುತಪಡಿಸಿರುವ ವಿಷಯಗಳಿಗಿಂತ ಮುಖ್ಯವಾದದ್ದು ಜೀವನದಲ್ಲಿ ಬೇರೇನೂ ಇಲ್ಲ.  ಈ ಪುಸ್ತಕದ ಕಾರಣದಿಂದಲ್ಲ, ಬದಲಾಗಿ ಈ ಪುಸ್ತಕವು ಹಂಚಿಕೊಳ್ಳುವ ಸತ್ಯಗಳ ಕಾರಣದಿಂದ.  

ಈ ಪುಸ್ತಕದಲ್ಲಿ ಎರಡು ಮುಖ್ಯ ವಿಭಾಗಗಳಿವೆ.  ಮೊದಲ ವಿಭಾಗವು ನಮ್ಮ ಧರ್ಮಸಭೆಯ ಸಂಸ್ಕಾರಗಳಲ್ಲಿ ಜೀವಂತವಾಗುವ ಪ್ರಾರ್ಥನೆಯ ಕುರಿತಾಗಿದೆ.  ಸಂಸ್ಕಾರಗಳು ಕೆಲವೊಮ್ಮೆ ನೀರಸವಾಗಿ, ಬೇಸರ ಹುಟ್ಟಿಸುವಂತೆ ಮತ್ತು ಪುನರಾವರ್ತನೆಯಂತೆ ತೋರಬಹುದು.  ವಿಧೇಯತೆಯಿಂದ ನೆರವೇರಿಸಲು ನಾವು “ಬದ್ಧರಾಗಿರುವ” ಖಾಲಿ ಆಚರಣೆಗಳಂತೆ ಅವು ಕೆಲವೊಮ್ಮೆ ಅನಿಸಬಹುದು.  ಆದರೆ ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವುಗಳಲ್ಲಿ ಪಾಲ್ಗೊಂಡಾಗ, ಸಂಸ್ಕಾರಗಳು ನಮ್ಮ ದೇವರೊಂದಿಗಿನ ಆಪ್ತತೆಗೆ ಅತ್ಯಂತ ಶ್ರೇಷ್ಠ ಮೂಲವಾಗುತ್ತವೆ.  ಅವು ವೈಯಕ್ತಿಕ ಅನುಭವವಾಗುತ್ತವೆ.  ಅವು ನನ್ನ ಕತೋಲಿಕ ಆರಾಧನೆ! ಆಗುತ್ತವೆ. 

ಈ ಪುಸ್ತಕದ ಎರಡನೆಯ ವಿಭಾಗವು ಪ್ರಾರ್ಥನೆಯ ಇತರ ಎಲ್ಲ ರೂಪಗಳನ್ನು ಕುರಿತು ಚರ್ಚಿಸುತ್ತದೆ.  ಅದು ಪ್ರಾರ್ಥನೆಯ ವಿವಿಧ ವಿಧಾನಗಳನ್ನೂ ಅದರ ಅರ್ಥವನ್ನೂ ಎತ್ತಿ ತೋರಿಸುತ್ತದೆ.  ಆದ್ದರಿಂದ ತೆರೆದ ಹೃದಯದಿಂದ ಈ ಪುಸ್ತಕದ ಓದಿನಲ್ಲಿ ತೊಡಗಿಸಿಕೊಳ್ಳಿ. ಆರಾಧನೆಯ ಎಲ್ಲ ರೂಪಗಳ ಮೂಲಕವೂ ನಿಮ್ಮನ್ನು ತಮ್ಮ ಇನ್ನಷ್ಟು ಹತ್ತಿರಕ್ಕೆ ಸೆಳೆಯಲು ದೇವರು ಬಯಸುತ್ತಾರೆ ಎಂಬುದನ್ನು ಅರಿಯಿರಿ.  ನೀವು ನಿಮ್ಮ ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಆತ್ಮದಿಂದಲೂ ಶಕ್ತಿಯಿಂದಲೂ ಅವರನ್ನು ಅರಿತು ಪ್ರೀತಿಸಬೇಕೆಂದು ಅವರು ಬಯಸುತ್ತಾರೆ.  ಹಾಗೆ ಮಾಡಲು ಇರುವ ಮಾರ್ಗವೇ ಪ್ರಾರ್ಥನೆ!

ನನಗೆ ಪ್ರಾರ್ಥನೆಯೆಂದರೆ ಹೃದಯದಿಂದ ಉಕ್ಕುವ ಭಾವ; ಅದು ಸ್ವರ್ಗದ ಕಡೆಗೆ ತಿರುಗಿದ ಸರಳ ನೋಟ; ಸಂಕಟವನ್ನೂ ಸಂತೋಷವನ್ನೂ ಅಪ್ಪಿಕೊಳ್ಳುವ, ಗುರುತಿಸುವಿಕೆಯ ಮತ್ತು ಪ್ರೀತಿಯ ಮೊರೆ (ಲಿಸಿಯ ಸಂತ ತೆರೇಸಾ, Manuscrits autobiographiques, C 25r). (CCC #2558)

ಈ ಪುಟವನ್ನು ಹಂಚಿಕೊಳ್ಳಿ: