ಕನ್ನಡ

ಇಪ್ಪತ್ತೊಂದನೆಯ ದಿನ – ಚಾಟಿಯೇಟು ಮತ್ತು ಅಪಹಾಸ್ಯ


ವೀಡಿಯೊ ಆವೃತ್ತಿ

ಆಗ ಅವನು ಬರಬ್ಬನನ್ನು ಅವರಿಗೆ ಬಿಡುಗಡೆಮಾಡಿದನು. ಆದರೆ ಯೇಸುವನ್ನು ಚಾವಟಿಯಿಂದ ಹೊಡೆಸಿದ ಬಳಿಕ ಶಿಲುಬೆಗೇರಿಸಲು ಒಪ್ಪಿಸಿದನು. ನಂತರ ರಾಜ್ಯಪಾಲನ ಸೈನಿಕರು ಯೇಸುವನ್ನು ಪ್ರೆತೋರಿಯದೊಳಗೆ ಕರೆದೊಯ್ದು, ಇಡೀ ಸೈನಿಕ ತುಕಡಿಯನ್ನು ಅವರ ಸುತ್ತಲೂ ಸೇರಿಸಿದರು. ಅವರು ಅವರ ಬಟ್ಟೆಗಳನ್ನು ಕಳಚಿ, ಕೆಂಪು ಬಣ್ಣದ ಸೈನಿಕ ನಿಲುವಂಗಿಯನ್ನು ಅವರಿಗೆ ಹೊದಿಸಿದರು. ಮುಳ್ಳುಗಳಿಂದ ಒಂದು ಕಿರೀಟವನ್ನು ಹೆಣೆದು ಅವರ ತಲೆಯ ಮೇಲಿಟ್ಟರು; ಅವರ ಬಲಗೈಯಲ್ಲಿ ಒಂದು ಜೊಂಡುಕೋಲನ್ನು ಕೊಟ್ಟರು. ಅವರ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನೇ, ಜಯವಾಗಲಿ!” ಎಂದು ಅವರನ್ನು ಅಪಹಾಸ್ಯಮಾಡಿದರು. ಅವರ ಮೇಲೆ ಉಗುಳಿ, ಆ ಜೊಂಡುಕೋಲನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಮತ್ತೆ ಮತ್ತೆ ಹೊಡೆದರು. ಅವರನ್ನು ಅಪಹಾಸ್ಯಮಾಡಿದ ಬಳಿಕ ಆ ನಿಲುವಂಗಿಯನ್ನು ಕಳಚಿ, ಅವರ ಸ್ವಂತ ಬಟ್ಟೆಗಳನ್ನು ಅವರಿಗೆ ತೊಡಿಸಿ, ಶಿಲುಬೆಗೇರಿಸಲು ಕರೆದೊಯ್ದರು. ಮತ್ತಾಯ 27:26-31

ಯೇಸುವನ್ನು ಕಂಬಕ್ಕೆ ಕಟ್ಟಿ ಚಾವಟಿಯಿಂದ ಹೊಡೆಯುತ್ತಿದ್ದಾಗ, ಅವರಿಗೆ ಮುಳ್ಳಿನ ಕಿರೀಟವನ್ನು ತೊಡಿಸಿ ಸೈನಿಕರು ಅವರನ್ನು ಅಪಹಾಸ್ಯಮಾಡುತ್ತಿದ್ದಾಗ, ತನ್ನ ಪುತ್ರ ಅಪಾರವಾಗಿ ನರಳುತ್ತಿದ್ದಾನೆಂದು ಮಾತೆ ಮರಿಯಳು ತಾಯಿಯ ಒಳನೋಟದಿಂದ ಅರಿತಿದ್ದಳು. ಪ್ರತಿಯೊಂದು ಚಾವಟಿಯೇಟಿನ ನೋವನ್ನೂ ಅವಳು ಅನುಭವಿಸಿದಳು, ಪ್ರತಿಯೊಂದು ಮುಳ್ಳಿನ ಚುಚ್ಚುವಿಕೆಯನ್ನೂ ಅನುಭವಿಸಿದಳು, ತನ್ನ ಪ್ರೀತಿಯ ಮಗುವಿನ ಮೇಲೆ ಕೂಗಿದ ಪ್ರತಿಯೊಂದು ನೀಚ ಮಾತನ್ನೂ ಕೇಳಿದಳು.

ಆ ದಿನದ ಬಳಿಕ, ಅವಳು ಶಿಲುಬೆಯ ಬುಡದಲ್ಲಿ ನಿಂತಿದ್ದಾಗ, ಯೇಸುವಿನ ಹರಿದ ಮಾಂಸದಲ್ಲಿದ್ದ ಪ್ರತಿಯೊಂದು ಗಾಯವನ್ನೂ ಅವರ ಪವಿತ್ರ ದೇಹದ ಮೇಲಿದ್ದ ಪ್ರತಿಯೊಂದು ಬಾಸುಂಡೆಯನ್ನೂ ಕಂಡು ಬೆಚ್ಚಿಬಿದ್ದಿರಬೇಕು. ಆದರೂ ಹೊಡೆತಗಳಿಂದ ಜರ್ಜರಿತನಾಗಿದ್ದ ತನ್ನ ಪುತ್ರನನ್ನು ತಾಯಿಯ ನೋಟದಿಂದ ನೋಡಲು ಅವಳು ಹಿಂಜರಿಯಲಿಲ್ಲ. ಯೇಸು ಧೈರ್ಯದಿಂದ ಸಹಿಸಿಕೊಂಡ ಕ್ರೌರ್ಯದ ಪರಿಣಾಮಗಳನ್ನು ಅವಳು ನೋಡಬೇಕಾಗಿತ್ತು. ರಕ್ತಸಿಕ್ತವಾದ ಅವರ ತಲೆಯ ಮೇಲಿದ್ದ ಮುಳ್ಳಿನ ಕಿರೀಟವನ್ನು ಕುರಿತು ಮನನಮಾಡಿದಾಗ, ಅವಳು ಅದರಲ್ಲಿ ಅನುಗ್ರಹ ಮತ್ತು ಕರುಣೆಯ ನಿಜವಾದ ಕಿರೀಟವನ್ನು ಕಂಡಳು.

ತನ್ನ ಸ್ವಂತ ಮಗುವಿನ ಮೇಲಿನ ಇಷ್ಟೊಂದು ಕ್ರೌರ್ಯವನ್ನು ಅನುಭವಿಸುವ ತಾಯಿಯ ಹೃದಯವು ದ್ವೇಷದಿಂದ ತುಂಬದೆ ಇರುವುದು ಹೇಗೆ? ಅವಳು ಹತಾಶೆ ಮತ್ತು ಸೋಲಿನ ಭಾವನೆಗೆ ಒಳಗಾಗದೆ ಇರುವುದು ಹೇಗೆ? ಉತ್ತರ ಸರಳವಾಗಿದೆ. ಈ ತಾಯಿ, ದೇವಮಾತೆ, ತನ್ನ ನಿರ್ಮಲ ಹೃದಯದ ಮೂಲಕವೇ ಎಲ್ಲವನ್ನೂ ಕಂಡಳು ಮತ್ತು ಎಲ್ಲವನ್ನೂ ಅನುಭವಿಸಿದಳು. ತನ್ನ ಪುತ್ರನ ಮೇಲಿನ ಅವಳ ಪ್ರೀತಿ ಎಷ್ಟು ಆಳವಾಗಿತ್ತೆಂದರೆ, ಅದು ಅವರನ್ನು ಹೊಡೆದವರ ಮತ್ತು ಅಪಹಾಸ್ಯಮಾಡಿದವರ ಬದುಕಿನೊಳಗೂ ಉಕ್ಕಿಹರಿಯಿತು. ಇಷ್ಟೊಂದು ದ್ವೇಷದ ಎದುರು ಪ್ರೀತಿಯೊಂದೇ ಅವಳ ಮುಂದಿದ್ದ ಆಯ್ಕೆಯಾಗಿತ್ತು. ಅವಳೂ ಅವಳ ಪುತ್ರನೂ ದ್ವೇಷ ಮತ್ತು ಹಿಂಸೆಯನ್ನು ತಮ್ಮ ಮೇಲೆ ಹೊತ್ತುಕೊಂಡಾಗ, ಅವಳು ನೀಡಲು ಸಾಧ್ಯವಾಗಿದ್ದು ಕರುಣೆಯನ್ನು ಮಾತ್ರ. ಆ ಎಲ್ಲ ಕೆಡುಕು ಅವಳ ನಿರ್ಮಲ ಹೃದಯದ ಮೂಲಕ ಶೋಧಿತವಾಗಿ, ಶುದ್ಧಗೊಂಡು ಕರುಣೆಯಾಗಿ ಹೊರಹೊಮ್ಮಿತು.

ನಮ್ಮ ಸ್ವಂತ ಬದುಕಿನಲ್ಲಿ ನಾವು ಸಹಿಸಬೇಕಾಗುವ ಅತ್ಯಂತ ನೋವಿನ ಅನುಭವಗಳಲ್ಲಿ ಒಂದು, ಇನ್ನೊಬ್ಬರಿಂದ ಅಪಹಾಸ್ಯಕ್ಕೆ ಒಳಗಾಗುವುದು. ನಮ್ಮನ್ನು ನೋಡಿ ನಗುವುದು, ತಿರಸ್ಕಾರದಿಂದ ನಡೆಸಿಕೊಳ್ಳುವುದು, ಹೀಯಾಳಿಸುವುದು ಮತ್ತು ಕಡೆಗಣಿಸುವುದು ನೋವುಂಟುಮಾಡುತ್ತದೆ. ತಿರುಗೇಟು ನೀಡಬೇಕೆನಿಸುವುದು “ಸಹಜ”. ಆದರೆ ದ್ವೇಷಕ್ಕೆ ಪ್ರತಿಯಾಗಿ ದ್ವೇಷವನ್ನೂ, ಕೆಡುಕಿಗೆ ಪ್ರತಿಯಾಗಿ ಕೆಡುಕನ್ನೂ, ನೋವಿಗೆ ಪ್ರತಿಯಾಗಿ ನೋವನ್ನೂ ಎಂದಿಗೂ ನೀಡದೆ, ನಮ್ಮ ಪೂಜ್ಯ ಮಾತೆಯ ಹೃದಯದಲ್ಲಿರುವ ಶಾಂತ ಪ್ರೀತಿಯನ್ನು ಅನುಕರಿಸಲು ನಾವು ಪ್ರಯತ್ನಿಸಬೇಕು.

ತನ್ನ ಪುತ್ರನಿಗೆ ಚಾವಟಿಯಿಂದ ಹೊಡೆಯುವುದನ್ನೂ ಅವರನ್ನು ಅಪಹಾಸ್ಯಮಾಡುವುದನ್ನೂ ನೋವಿನಿಂದ ನೋಡುತ್ತಿದ್ದ ದೇವಮಾತೆಯ ಭಾವನೆಗಳು, ಆಲೋಚನೆಗಳು ಮತ್ತು ಅಂತರಂಗದ ಅನುಭವಗಳನ್ನು ಕುರಿತು ಇಂದು ಮನನಮಾಡಿ. ಅವಳ ಹೃದಯದಿಂದ ಹರಿದು, ದ್ವೇಷದ ಕಡೆಗೆ ಸೆಳೆಯುವ ಪ್ರಲೋಭನವನ್ನು ತಣಿಸಿದ ನಿರ್ಮಲ ಪ್ರೀತಿಯ ಪ್ರವಾಹದೊಳಗೆ ಪ್ರವೇಶಿಸಿ. ವಿಶೇಷವಾಗಿ, ಇನ್ನೊಬ್ಬರು ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಂಡ ಸಂದರ್ಭಗಳನ್ನು ಕುರಿತು ಮನನಮಾಡಿ. ನಿಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದ್ದರೂ ಅಥವಾ ನೀವೇ ಬೇರೊಬ್ಬರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರೂ, ನೀವು ಅನುಭವಿಸುವ ಪ್ರತಿಯೊಂದು ಭಾವನೆ ಮತ್ತು ಅನುಭವವನ್ನು ನೋಡುತ್ತಾ ನಮ್ಮ ಪೂಜ್ಯ ಮಾತೆ ನಿಮ್ಮ ಈ ಶಿಲುಬೆಯ ಬಳಿಯೂ ನಿಂತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಿ. ತಾಯಿಯ ಪ್ರೀತಿಯೊಂದಿಗೆ ಅವಳು ನಿಮ್ಮ ಪಕ್ಕದಲ್ಲಿ ನಿಂತಿದ್ದಾಳೆ; ಅವಳ ಹೃದಯದ ಪ್ರೀತಿಯು ನಿಮ್ಮ ಹೃದಯದೊಳಗೆ ಉಕ್ಕಿಹರಿಯುತ್ತಿದೆ.

ನನ್ನ ಅತಿ ಪ್ರೀತಿಯ ಮಾತೆಯೇ, ಜರ್ಜರಿತನಾಗಿ, ಹೊಡೆತಗಳಿಂದ ಗಾಯಗೊಂಡಿದ್ದ ನಿನ್ನ ಪುತ್ರನನ್ನು ನೀನು ನೋಡಿದಾಗ ನಿನ್ನ ಹೃದಯಕ್ಕೆ ಏನನಿಸಿರಬಹುದು ಎಂಬುದನ್ನು ನಾನು ಕೇವಲ ಊಹಿಸಬಲ್ಲೆ. ಪ್ರತಿಯೊಂದು ಚಾವಟಿಯೇಟನ್ನೂ ಆರಾಧಿಸುತ್ತಾ, ಪ್ರತಿಯೊಂದು ಅಪಹಾಸ್ಯವನ್ನೂ ಕೇಳಿದಾಗ ನೀನು ಅನುಭವಿಸಿದ ನೋವನ್ನು ನಾನು ಕೇವಲ ಊಹಿಸಬಲ್ಲೆ. ಆದರೆ ನಿನ್ನ ಹೃದಯದೊಳಗಿದ್ದ ಪ್ರೀತಿಯು ಕೋಪ ಮತ್ತು ಹತಾಶೆಯ ಕಡೆಗೆ ಸೆಳೆಯುವ ಪ್ರತಿಯೊಂದು ಪ್ರಲೋಭನವನ್ನೂ ಮೀರಿಸಿತು. ನಿನ್ನ ಪುತ್ರನ ಮೇಲಿನ ನಿನ್ನ ಪ್ರೀತಿ ನಿರ್ಮಲವೂ ಮಹಿಮೆಯುಳ್ಳದ್ದೂ ಆಗಿತ್ತು.

ನನ್ನ ನಿರ್ಮಲ ಮಾತೆಯೇ, ನನಗೂ ನಿಷ್ಠಾವಂತಳೂ ಪ್ರೀತಿಯುಳ್ಳವಳೂ ಆದ ತಾಯಿಯಾಗಿರುವುದಕ್ಕಾಗಿ ನಿನಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನ್ನ ಸ್ವಂತ ಬದುಕಿನ ಶಿಲುಬೆಗಳನ್ನು ನಾನು ಅನುಭವಿಸುವಾಗ, ನನ್ನ ಪ್ರತಿಯೊಂದು ಗಾಯವನ್ನೂ ನೋಡುತ್ತಾ ಮತ್ತು ಅನುಭವಿಸುತ್ತಾ ನೀನು ನನ್ನ ಪಕ್ಕದಲ್ಲೇ ನಿಂತಿರುವೆ ಎಂದು ನನಗೆ ತಿಳಿದಿದೆ. ನಿನ್ನ ಮಗುವಾದ ನನ್ನ ಮೇಲಿನ ನಿನ್ನ ಪ್ರೀತಿ ಮತ್ತು ಕಾಳಜಿಗಾಗಿ ಧನ್ಯವಾದಗಳು. ನಿನ್ನ ಹೃದಯದಲ್ಲಿ ಉಕ್ಕಿಹರಿಯುವ ಪ್ರೀತಿಗೆ ನಾನು ತೆರೆದ ಮನಸ್ಸಿನವನಾಗಿರುವಂತೆ ಸಹಾಯಮಾಡು; ಈ ಪ್ರೀತಿಯೇ ನನ್ನ ನಿರೀಕ್ಷೆಯೂ ನನ್ನ ಬಲವೂ ಆಗಲಿ.

ಚಾವಟಿಯೇಟುಗಳನ್ನೂ ಅಪಹಾಸ್ಯವನ್ನೂ ಅನುಭವಿಸಿದ ನನ್ನ ಯೇಸುವೇ, ಗಾಯಗಳಿಂದ ಆವೃತರಾಗಿ, ಅಪಹಾಸ್ಯದಿಂದ ಸುತ್ತುವರಿಯಲ್ಪಟ್ಟಿದ್ದರೂ, ನೀವು ಎಂದಿಗೂ ದ್ವೇಷಕ್ಕೆ ಮಣಿಯಲಿಲ್ಲ. ಈ ದುರ್ವರ್ತನೆಯನ್ನು ಪರಿಪೂರ್ಣವಾಗಿ ಸ್ವೀಕರಿಸಿದ ನಿಮ್ಮ ಕ್ರಿಯೆಯು ಪಾಪವನ್ನು ಅನುಗ್ರಹವಾಗಿ ಪರಿವರ್ತಿಸಿತು. ಪ್ರೀತಿಯ ಪ್ರಭುವೇ, ಆ ಅನುಗ್ರಹವನ್ನು ನನ್ನ ಮೇಲೆ ಸುರಿಸಿರಿ. ನನ್ನ ಅಗತ್ಯದ ಸಮಯಗಳಲ್ಲಿ ನಿಮ್ಮ ಕಡೆಗೆ ತಿರುಗಲು ನನಗೆ ಸಹಾಯಮಾಡಿರಿ. 

ನನ್ನ ಪ್ರೀತಿಯ ಮಾತೆಯೇ, ನನಗಾಗಿ ಪ್ರಾರ್ಥಿಸು. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಇಪ್ಪತ್ತೆರಡನೆಯ ದಿನ – “ಇಗೋ, ನಿಮ್ಮ ಅರಸ!”

ಪರಿವಿಡಿ

ಇ-ಪುಸ್ತಕ & ಪೇಪರ್‌ಬ್ಯಾಕ್ ರೂಪದಲ್ಲಿಯೂ ಲಭ್ಯ!

ಈ ಪುಟವನ್ನು ಹಂಚಿಕೊಳ್ಳಿ: