ಕನ್ನಡ

ಇಪ್ಪತ್ತೆಂಟನೆಯ ದಿನ: ಅಸೂಯೆಯೋ ಆನಂದವೋ?

ತಪಸ್ಸುಕಾಲದ ನಾಲ್ಕನೆಯ ವಾರದ ಶನಿವಾರ

ಇತರರಲ್ಲಿ ಒಳ್ಳೆಯ ಗುಣಗಳನ್ನು ಅಥವಾ ಸೊತ್ತುಗಳನ್ನು ಕಂಡಾಗ, ವಿಶೇಷವಾಗಿ ಅವು ನಮ್ಮಲ್ಲಿ ಇಲ್ಲದಿದ್ದಾಗ, ನಾವು ಅನುಭವಿಸುವ ದುಃಖ ಅಥವಾ ಕಹಿಭಾವದ ಒಂದು ರೂಪವೇ ಅಸೂಯೆ. ಇದು ಈರ್ಷ್ಯೆಗೆ ನಿಕಟವಾಗಿ ಸಂಬಂಧಿಸಿದೆ. ಈರ್ಷ್ಯೆ ಎಂದರೆ ಇನ್ನೊಬ್ಬರ ಬಳಿ ಇರುವುದನ್ನು ಪಡೆಯಬೇಕೆಂಬ ಸ್ವಾರ್ಥಪರ ಬಯಕೆ ಅಥವಾ ನಮ್ಮ ಬಳಿ ಇರುವುದನ್ನು ಕಳೆದುಕೊಳ್ಳುವ ಭಯ. ಈ ಪಾಪಗಳು ಅಪನಿಂದೆ, ಇತರರನ್ನು ತೀರ್ಪುಮಾಡುವ ಮನೋಭಾವ ಮತ್ತು ಹರಟೆಗೆ ದಾರಿಮಾಡುತ್ತವೆ. ಇತರರು ವಿಫಲರಾಗುವುದನ್ನು ಕಂಡಾಗ ಅಥವಾ ನಾವು ಬಯಸುವ ಯಾವುದಾದರೂ ನಮಗೆ ಸಿಗದಿದ್ದಾಗ ಇವು ಅಸ್ವಸ್ಥವಾದ ಸಂತೋಷವನ್ನು ಉಂಟುಮಾಡುತ್ತವೆ.

ಲೌಕಿಕ ಮನೋಭಾವ ಹೊಂದಿದ್ದು, ಹಣ, ಭೌತಿಕ ಸೊತ್ತುಗಳು ಅಥವಾ ಸ್ಥಾನಮಾನಗಳ ಮೇಲಿನ ಮೋಹದೊಂದಿಗೆ ಹೋರಾಡುವವರಲ್ಲಿ, ಅಸೂಯೆಯು ಅನೇಕ ವೇಳೆ ಇನ್ನೊಬ್ಬರು ಅನುಭವಿಸುವ ಸುಖಸೌಲಭ್ಯಗಳ ಬಗ್ಗೆಯೇ ಸದಾ ಚಿಂತಿಸುವಂತೆ ಮಾಡುತ್ತದೆ. ಈ ರೀತಿಯ ಅಸೂಯೆ ಎರಡು ವಿಧದಲ್ಲಿ ಪಾಪವಾಗಿದೆ; ಏಕೆಂದರೆ ಅವರು ಅಸೂಯೆಪಡುವ ವಸ್ತುಗಳೇ ಅನಾರೋಗ್ಯಕರ ವ್ಯಾಮೋಹಗಳಾಗಿವೆ. ಈ ಲೌಕಿಕ ಅಸೂಯೆಯು ಅನೇಕ ವೇಳೆ ಜೀವನದಲ್ಲಿ ತಮ್ಮ ಸ್ಥಿತಿಯ ಬಗ್ಗೆ ತೃಪ್ತಿಯಿಲ್ಲದಿರುವುದರಲ್ಲಿ ಬೇರೂರಿರುತ್ತದೆ. ಈ ಲೋಕದ ಕ್ಷಣಿಕ ವಸ್ತುಗಳಿಗೆ ಸಲ್ಲದ ಮಹತ್ವವನ್ನು ಕೊಡುವುದು ಅನಿವಾರ್ಯವಾಗಿ ಈ ಕೆಳಮಟ್ಟದ ಅಸೂಯೆಗೆ ದಾರಿಮಾಡುತ್ತದೆ. ನಮಗಿಂತ ಹೆಚ್ಚು ಹೊಂದಿರುವವರು, ಹೆಚ್ಚು ಯಶಸ್ವಿಯಾಗಿರುವವರು ಅಥವಾ ಹೆಚ್ಚು ಗೌರವಿಸಲ್ಪಡುವವರು ಯಾವಾಗಲೂ ಇದ್ದೇ ಇರುತ್ತಾರೆ.

ಮೊದಲು ದೇವರ ರಾಜ್ಯವನ್ನೂ ಸ್ವರ್ಗದ ಸಂಪತ್ತನ್ನೂ ಅರಸುತ್ತಾ, ನಮ್ಮ ಆದ್ಯತೆಗಳನ್ನು ಸರಿಯಾದ ಕ್ರಮದಲ್ಲಿ ಇಡುವುದೇ ಈ ರೀತಿಯ ಅಸೂಯೆಗೆ ಪರಿಹಾರ. ನಾವು ಅಸೂಯೆಪಡುವ ಅನೇಕ ಸಂಗತಿಗಳು ಅಸೂಯೆಪಡಲು ಯೋಗ್ಯವಾದವುಗಳೇ ಅಲ್ಲ. ಅನಾರೋಗ್ಯಕರ ವ್ಯಾಮೋಹಗಳನ್ನೂ ಬಯಕೆಗಳನ್ನೂ ಜಯಿಸುವುದು, ಅರ್ಥಹೀನ ಸಂಗತಿಗಳ ಬಗ್ಗೆ ಅಸೂಯೆಪಡುವುದರಿಂದ ಮುಕ್ತರಾಗಲು ನಮಗೆ ಸಹಾಯಮಾಡುತ್ತದೆ.

ಅಸೂಯೆ ಆಧ್ಯಾತ್ಮಿಕ ಮಟ್ಟದಲ್ಲಿಯೂ ಇರಬಹುದು. ದೇವರನ್ನು ಪ್ರೀತಿಸುವವರು ಮತ್ತು ಅವರ ಚಿತ್ತಕ್ಕೆ ಅನುಸಾರವಾಗಿ ಸೇವೆಸಲ್ಲಿಸಲು ಬಯಸುವವರು, ಇತರರು ತಮಗಿಂತ ಹೆಚ್ಚು ಪವಿತ್ರರು ಅಥವಾ ಆಧ್ಯಾತ್ಮಿಕವಾಗಿ ಹೆಚ್ಚು ಫಲಪ್ರದರು ಎಂದು ಭಾವಿಸಬಹುದು. ಇನ್ನೊಬ್ಬರಲ್ಲಿ ಸುಂದರವಾದ ಸದ್ಗುಣವನ್ನೋ, ಯಶಸ್ವಿಯಾದ ಪ್ರೇಷಿತಕಾರ್ಯವನ್ನೋ ಅಥವಾ ದೇವರು ಕೊಟ್ಟ ವಿಶೇಷ ವರದಾನವನ್ನೋ ಅವರು ಕಾಣಬಹುದು. ಅದಕ್ಕಾಗಿ ಆನಂದಿಸುವ ಬದಲು, ತಾವು ಮಾಡಿದ ಕಾರ್ಯಗಳಿಗೆ ತಮಗೆ ಮನ್ನಣೆ ಸಿಗಲಿಲ್ಲವೆಂದು ಅಸಮಾಧಾನಪಡುತ್ತಾರೆ.

ನಿಜವಾದ ಆನಂದ, ದಯೆ, ಕೃತಜ್ಞತೆ, ಪ್ರೀತಿ ಮತ್ತು ಪ್ರತಿಯೊಬ್ಬರ ಬಗೆಗಿನ ಗೌರವವೇ ಆಧ್ಯಾತ್ಮಿಕ ಅಸೂಯೆಗೆ ಪರಿಹಾರ. ಇತರರ ಪವಿತ್ರ ಸದ್ಗುಣಗಳನ್ನು ಕಂಡಾಗ ನಾವು ಆನಂದಿಸಿ ದೇವರಿಗೆ ಕೃತಜ್ಞತೆ ಸಲ್ಲಿಸಬೇಕು. ಆ ಸದ್ಗುಣಗಳನ್ನು ಮೆಚ್ಚಿ, ಅವುಗಳನ್ನು ಅನುಕರಿಸಲು ವಿನಮ್ರತೆಯಿಂದ ಪ್ರಯತ್ನಿಸಬೇಕು. ಸಂತಸ್ವಭಾವದ ಜನರನ್ನು ಭೇಟಿಯಾದಾಗ, ಒಂದು ರೀತಿಯಲ್ಲಿ ಹೇಳುವುದಾದರೆ, ನಾವೆಲ್ಲರೂ “ಒಂದೇ ತಂಡದಲ್ಲಿದ್ದೇವೆ” ಎಂಬುದನ್ನು ಅರಿಯಬೇಕು. ಅಸೂಯೆಯನ್ನು ಜಯಿಸುವವರು ಇತರರನ್ನು ಪ್ರೋತ್ಸಾಹಿಸಲು, ಅವರಿಗೆ ಕೃತಜ್ಞತೆ ಸಲ್ಲಿಸಲು ಮತ್ತು ಅವರ ಜೀವನದಲ್ಲಿ ಜೀವಂತವಾಗಿ ಕಾರ್ಯನಿರ್ವಹಿಸುವ ದೇವರ ಅನುಗ್ರಹಕ್ಕಾಗಿ ಅವರನ್ನು ಸ್ತುತಿಸಲು ವಿಶೇಷ ಪ್ರಯತ್ನಮಾಡುತ್ತಾರೆ. ಯಾರಾದರೂ ವಿಫಲರಾದಾಗ, ನಾವು ಅವರ ಬಗ್ಗೆ ಹೃತ್ಪೂರ್ವಕ ಸಹಾನುಭೂತಿ ಹೊಂದಿರಬೇಕು, ಅವಸರದ ತೀರ್ಪಿನಿಂದ ದೂರವಿರಬೇಕು, ಕರುಣೆ ತೋರಿಸಬೇಕು ಮತ್ತು ಅವರಿಗೆ ಹೇಗೆ ಸಹಾಯಮಾಡಬಹುದು ಎಂಬುದನ್ನು ಯೋಚಿಸಬೇಕು.

ಯೇಸು ಶಿಲುಬೆಯ ಮೇಲಿನಿಂದ ಒಳ್ಳೆಯ ಕಳ್ಳನಿಗೆ, “ನಾನು ನಿನಗೆ ನಿಜವಾಗಿ ಹೇಳುತ್ತೇನೆ, ಇಂದು ನೀನು ನನ್ನೊಡನೆ ಪರದೈಸಿನಲ್ಲಿರುವೆ” ಎಂದು ಹೇಳಿದರು (ಲೂಕ 23:43). ಈ ಮಾತು ಅಸೂಯೆಯನ್ನು ಜಯಿಸುವುದರ ಬಗ್ಗೆ ಒಳನೋಟವನ್ನು ನೀಡುತ್ತದೆ. ಪಾಪಿಯಾಗಿದ್ದ ವ್ಯಕ್ತಿಯ ಕಡೆಗೆ ಯೇಸು ತೋರಿದ ಅಪಾರ ಉದಾರತೆಯು ನಮ್ಮಲ್ಲಿಯೂ ಅದೇ ಬಯಕೆಯನ್ನು ಹುಟ್ಟಿಸಬೇಕು. ಪ್ರತಿಯೊಂದು ಆತ್ಮವೂ ಸ್ವರ್ಗದಲ್ಲಿ ದೇವರೊಡನೆ ಸದಾಕಾಲ ಇರಬೇಕೆಂದು ನಾವು ಹಂಬಲಿಸಬಲ್ಲೆವಾದರೆ, ಅವರ ಒಳ್ಳೆಯತನವನ್ನು ಕಂಡಾಗ ದುಃಖಪಡುವ ಅಥವಾ ಅಸೂಯೆಪಡುವ ಬದಲು ನಾವು ಸಾಂತ್ವನಗೊಂಡು ಆನಂದಿಸುತ್ತೇವೆ.

ಇಂದು ಅಸೂಯೆಯೆಂಬ ಕುರೂಪವಾದ ಪಾಪದ ಬಗ್ಗೆ ಚಿಂತಿಸಿ; ಆದರೆ ನಿಮ್ಮ ದೃಷ್ಟಿಯನ್ನು ಸ್ವರ್ಗದ ಆಧ್ಯಾತ್ಮಿಕ ಸಂಪತ್ತಿನ ಕಡೆಗೆ ತಿರುಗಿಸಿ ಹಾಗೆ ಮಾಡಿ. ಇತರರು ಆ ಆಧ್ಯಾತ್ಮಿಕ ಸಂಪತ್ತನ್ನು ಪ್ರಕಟಪಡಿಸಿದರೆ, ದೇವರು ತಮ್ಮ ಸಮೃದ್ಧ ಕೊಡುಗೆಗಳನ್ನು ನಿಮಗೂ ದಯಪಾಲಿಸಬಲ್ಲರು ಎಂಬುದನ್ನು ತಿಳಿದುಕೊಳ್ಳಿ. ಇತರರ ಒಳ್ಳೆಯತನದಲ್ಲಿ ಆನಂದಿಸಿ, ಅವರಿಂದ ಕಲಿಯಲು ನಿಮಗೆ ಸಾಧ್ಯವಾಗಲೆಂದು ಪ್ರಾರ್ಥಿಸಿ ಮತ್ತು ಅವರು ನೀಡುವ ಒಳ್ಳೆಯ ಸಾಕ್ಷಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ.

ನನ್ನ ಉದಾರ ಪ್ರಭುವೇ, ನಿಮ್ಮನ್ನು ಪ್ರೀತಿಸಿ ನಿಮ್ಮ ಪವಿತ್ರ ಚಿತ್ತಕ್ಕೆ ಅನುಸಾರವಾಗಿ ಸೇವೆಸಲ್ಲಿಸುವವರ ಮೇಲೆ ನೀವು ನಿಮ್ಮ ಆಶೀರ್ವಾದಗಳನ್ನು ಅಪಾರವಾಗಿ ಸುರಿಸುತ್ತೀರಿ. ಜೀವನದಲ್ಲಿ ಪ್ರತಿಯೊಂದು ರೀತಿಯ ಅಸೂಯೆಯಿಂದ ನನ್ನನ್ನು ಮುಕ್ತಗೊಳಿಸಿ. ಇತರರಲ್ಲಿ ನೀವು ಜೀವಂತವಾಗಿ ಇರುವ ಪ್ರತಿಯೊಂದು ರೀತಿಯನ್ನೂ ನಿಜವಾಗಿ ಪ್ರೀತಿಸುವ ಹೃದಯವನ್ನು ನನಗೆ ದಯಪಾಲಿಸಿ. ಇತರರ ಸದ್ಗುಣಗಳನ್ನು ನಾನು ಕಂಡಾಗ, ಪವಿತ್ರ ಆನಂದ ಮತ್ತು ಕೃತಜ್ಞತೆಯಿಂದ ನನ್ನನ್ನು ತುಂಬಿಸಿ. ಹೀಗೆ, ನಿಮ್ಮ ದೈವಿಕ ಧ್ಯೇಯವನ್ನು ಒಟ್ಟಾಗಿ ನೆರವೇರಿಸಲು ನೀವು ನನ್ನ ಜೀವನದಲ್ಲಿ ಇರಿಸಿರುವವರಿಗೆ ನಾನು ಪ್ರೋತ್ಸಾಹವಾಗುವಂತೆ ಮಾಡಿ. ಯೇಸುವೇ, ನಾನು ನಿಮ್ಮಲ್ಲಿ ಭರವಸೆಯಿಡುತ್ತೇನೆ.

ಇದನ್ನೂ ನೋಡಿ: ಇಪ್ಪತ್ತೆಂಟನೆಯ ದಿನ: ಶಿಲುಬೆಯ ಪಾದದಲ್ಲಿ 40 ದಿನಗಳು

ಪರಿವಿಡಿ

ತಪಸ್ಸುಕಾಲಕ್ಕಾಗಿ ಇನ್ನಷ್ಟು

ಈ ಪುಟವನ್ನು ಹಂಚಿಕೊಳ್ಳಿ: